26.4 C
Bengaluru
Monday, December 23, 2024

ಹೊಸ ಆದಾಯ ತೆರಿಗೆ ಪದ್ಧತಿ ಬಗ್ಗೆ ಸಾಕಷ್ಟು ಅನುಮಾನಗಳಿವೆಯಾ..? ಹಾಗಾದರೆ, ಈ ಲೇಖನ ಓದಿ ಪರಿಹರಿಸಿಕೊಳ್ಳಿ

ಬೆಂಗಳೂರು, ಏ. 14 : ಈಗಾಗಲೇ ಪ್ರತಿ ವರ್ಷ ಆದಾಯ ತೆರಿಗೆಯನ್ನು ಕಟ್ಟುತ್ತಿರುವವರಿಗೆ ಹಾಗೂ ಈ ವರ್ಷದಿಂದ ಹೊಸದಾಗಿ ತೆರಿಗೆ ಪಾವತಿ ಮಾಡುವವರಿಗೆ ಯಾವ ಆದಾಯ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳಬೇಕು ಎಂಬ ತಲೆ ನೋವು ಶುರುವಾಗಿದೆ. ಇದರ ಜೊತೆಗೆ ಎರಡು ತೆರಿಗೆ ಪದ್ಧತಿಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳದೇ ಹೋದಲ್ಲಿ, ಡಿಫಾಲ್ಟ್‌ ಆಗಿ ಹೊಸ ಆದಾಯ ತೆರಿಗೆ ಪದ್ಧತಿಯನ್ನು ಪಾಲಿಸಬೇಕಾಗುತ್ತದೆ. ಈ ವರ್ಷದ ಬಜೆಟ್‌ ನಲ್ಲಿ ಕೇಂದ್ರ ಸರ್ಕಾರವು ಹೊಸ ತೆರಿಗೆ ಪದ್ಧತಿಯನ್ನು ಘೋಷಿಸಿತು. ಹಳೆಯ ತೆರಿಗೆ ಪದ್ಧತಿಯನ್ನೂ ಮುಂದುವರಿಸಲು ಸರ್ಕಾರ ಅವಕಾಶ ನೀಡಿದೆ.

ಕೇಂದ್ರ ಸರ್ಕಾರ ಹೆಚ್ಚಿನ ತೆರಿಗೆದಾರರು ಈಗ ಪರಿಚಯಿಸಿರುವ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕೆಂದು ಬಯಸುತ್ತಿದೆ. ಆದರೆ, ಹೊಸ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಗೊಂದಲಗಳು ಜನರನ್ನು ಕಾಡುತ್ತಿದೆ. ಈ ಬಗ್ಗೆ ಗೊಂದಲ ಇರುವ ಕಾರಣ ಸಾಕಷ್ಟು ಮಂದಿ ಹಳೆಯ ತೆರಿಗೆ ಪದ್ಧತಿಯನ್ನೇ ಮುಂದುವರೆಸಲು ಮುಂದಾಗಿದ್ದಾರೆ. ಆದರೆ, ಹೊಸ ತೆರಿಗೆ ಪದ್ಧತಿ ಬಗ್ಗೆ ಇರುವ ಗೊಂದಲಗಳನ್ನು ಈ ಲೇಖನ ಓದಿ ಪರಿಹರಿಸಿಕೊಂಡು ಯಾವ ತೆರಿಗೆ ಪದ್ಧತಿ ನಿಮಗೆ ಸೂಕ್ತ ಎಂಬುದನ್ನು ನಿರ್ಧರಿಸಿ.

ಹೊಸ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಆದಾಯ ತೆರಿಗೆ ಪದ್ಧತಿಯಲ್ಲಿ ಒಟ್ಟು 6 ಸ್ಲ್ಯಾಬ್ ಗಳು ಇವೆ. ನಿಮ್ಮ ವಾರ್ಷಿಕ ಆದಾಯ 3ಲಕ್ಷ ರೂಪಾಯಿ ವರೆಗೂ ಇದ್ದಲ್ಲಿ, ನೀವು ಯಾವುದೇ ರೀತಿಯ ತೆರಿಗೆಯನ್ನು ಕಟ್ಟುವಂತಿಲ್ಲ. ಆದರೆ, ನಿಮ್ಮ ಆದಾಯ 3ಲಕ್ಷ ರೂ. ಹಾಗೂ 6 ಲಕ್ಷ ರೂ. ನಡುವೆ ಇದ್ದರೆ ಶೇ.5ರಷ್ಟು ತೆರಿಗೆಯನ್ನು ನೀವು ಕಟ್ಟ ಬೇಕಾಗುತ್ತದೆ. ತೆರಿಗೆ ದರಗಳು ಆದಾಯದ ಮೇಲೆ ಅವಲಂಬಿತವಾಗಿರುತ್ತದೆ. ವಾರ್ಷಿಕ 15ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿದ್ದರೆ ಆಗ ನೀವು ಶೇ.30ರಷ್ಟು ತೆರಿಗೆ ಪಾವತಿ ಮಾಡಬೇಕಾಗುತ್ತದೆ.

ಹಳೆಯ ತೆರಿಗೆ ಪದ್ಧತಿಯಲ್ಲಿ ವಿನಾಯ್ತಿ ಮಿತಿ 2.50ಲಕ್ಷ ರೂ. ಇತ್ತು. ಅಂದರೆ ನಿಮ್ಮ ವಾರ್ಷಿಕ ಆದಾಯ 2.50ಲಕ್ಷ ರೂ.ಗಿಂತಲೂ ಕಡಿಮೆ ಇದ್ದಿದ್ದರೆ ತೆರಿಗೆ ಕಟ್ಟುವಂತಿರಲಿಲ್ಲ. ಈಗ ಇದು ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ವಿನಾಯ್ತಿ ಮಿತಿಯನ್ನು 3ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು 2 ಕೋಟಿ ರೂ.ಗಿಂತ ಹೆಚ್ಚು ಸಂಪಾದನೆ ಇರುವವರು ಸರ್ ಚಾರ್ಜ್ ಇಳಿಕೆಯಾಗಿದೆ. ಸರ್ಕಾರ ಶೇ.25ಕ್ಕೆ ಸರ್‌ ಚಾರ್ಜ್ ಇಳಿಕೆ ಮಾಡಿದೆ. ಇದು ಈ ಹಿಂದೆ 5 ಕೋಟಿ ರೂ.ಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರಿಗೆ ಅನ್ವಯಿಸುತ್ತಿತ್ತು. ಅದೂ ಕೂಡ ಶೇ.37ರಷ್ಟು ಸರ್ ಚಾರ್ಜ್ ಪಾವತಿ ಮಾಡಬೇಕಾಗಿತ್ತು.

ಇನ್ನು ಹೊಸ ತೆರಿಗೆ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 87A ಅಡಿಯಲ್ಲಿ 2023ರ ಏಪ್ರಿಲ್ 1ರಿಂದ 7ಲಕ್ಷ ರೂ. ತನಕ ತೆರಿಗೆ ವಿಧಿಸಲ್ಪಡುವ ಆದಾಯ ಹೊಂದಿದವರಿಗೆ 25 ಸಾವಿರ ರೂ. ತೆರಿಗೆ ವಿನಾಯ್ತಿ ನೀಡಲಾಗುತ್ತದೆ. ಅದೇ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ 5ಲಕ್ಷ ರೂ. ತನಕ ತೆರಿಗೆ ವಿಧಿಸಲ್ಪಡುವ ಆದಾಯ ಹೊಂದಿರುವವರಿಗೆ 12,500ರೂ. ತೆರಿಗೆ ವಿನಾಯ್ತಿ ನೀಡಲಾಗುತ್ತದೆ. ಹೊಸ ತೆರಿಗೆ ವ್ಯವಸ್ಥೆಗೆ ಸಂಬಂಧ ಪಟ್ಟಂತೆ ಯಾವುದೇ ಪ್ರಶ್ನೆಗಳಿದ್ದರೂ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು. ಅಲ್ಲಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ.

Related News

spot_img

Revenue Alerts

spot_img

News

spot_img