21.1 C
Bengaluru
Monday, July 8, 2024

ಕೈಗೆಟಕುವ ದರದಲ್ಲಿ ನಿಮ್ಮ ಮನೆಯನ್ನು ಅಂದಗಾಣಿಸಲು ಇಲ್ಲಿವೆ ಒಳಾಂಗಣ ವಿನ್ಯಾಸದ ಟಿಪ್ಸ್‌ಗಳು

ಕಚೇರಿ ಅಥವಾ ಹೊರಗಡೆ ಕೆಲಸ ಮಾಡಿ ಸುಸ್ತಾಗಿ, ಮನೆಯೊಳಗೆ ಕಾಲಿಟ್ಟ ತಕ್ಷಣ ಆಹ್ಲಾದಕರ, ಮನಸ್ಸಿಗೆ ಹಿತವೆನಿಸುವಂತಹ ವಾತಾವರಣ ಇದ್ದರೆ ಅದೆಷ್ಟು ಚೆನ್ನ. ಎಲ್ಲೆಂದರಲ್ಲಿ ಬಿಸಾಡಿದ ವಸ್ತು, ಹರಡಿಕೊಂಡ ಸೋಫಾ, ಅಲ್ಲಲ್ಲಿ ಪಾತ್ರೆ, ಬಟ್ಟೆ ಕಣ್ಣಿಗೆ ಕಂಡರೆ ಮನಸ್ಸಿಗೆ ಕಿರಿಕಿರಿಯೆನಿಸುತ್ತದೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ, ಸ್ವಲ್ಪ ಶ್ರಮ ಹಾಕಿ ಮನೆಯಲ್ಲಿರುವ ಹಳೆಯ ಗೃಹೋಪಯೋಗಿ ವಸ್ತುಗಳು, ಸುಲಭವಾಗಿ ಸಿಗುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಮನೆಯೊಳಗಿನ ವಿನ್ಯಾಸವನ್ನು ಅಚ್ಚರಿಯಾಗುವಂತೆ ಬದಲಾಯಿಸಬಹುದು.

ಸಾಮಾನ್ಯವಾಗಿ ಜನರು ಮನೆಯಲ್ಲಿನ ಹಳೆಯ ಮರದ ಕಪಾಟು, ಮೇಜು, ಕುರ್ಚಿಗಳನ್ನು ಹೊರಗೆ ಹಾಕಿ, ಈಗ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ವಿನ್ಯಾಸದ ಪೀಠೋಪಕರಣಗಳನ್ನು ತಂದು ಮನೆಯಲ್ಲಿ ಸುಂದರವಾಗಿ ಜೋಡಿಸುವವರೇ ಹೆಚ್ಚು. ಆದರೆ ಅದೇ ಹಳೆಯ ಪೀಠೋಪಕರಣಗಳನ್ನು ಬಳಸಿಕೊಂಡು ಮನೆಯನ್ನು ಈಗಿನ ಆಧುನಿಕ ಒಳಾಂಗಣ ವಿನ್ಯಾಸಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡು ಮನೆಗೆ ಸಾಂಪ್ರದಾಯಿಕ ಟಚ್ ನೀಡಬಹುದು. ಹಾಗೇ ನಮ್ಮ ಮನೆ ಸಂಪ್ರದಾಯ, ಸಂಸ್ಕೃತಿಯನ್ನೂ ಇತರರಿಗೆ ತಿಳಿಸಬಹುದು.

ಅನೇಕ ಜನರು ತಮ್ಮ ಮನೆಯ ಒಳಾಂಗಣದ ವಿನ್ಯಾಸದ ವಿಚಾರಕ್ಕೆ ಬಂದಾಗ ಭಾರತೀಯ ವಿನ್ಯಾಸಗಳನ್ನೇ ಬಯಸುತ್ತಾರೆ. ಅನೇಕ ವರ್ಷಗಳಿಂದಲೂ ಒಳಾಂಗಣ ವಿನ್ಯಾಸದಲ್ಲಿ ನಾವು ಭಾರತೀಯರು ಬೋಲ್ಡ್‌, ಗಾಢ ವಿನ್ಯಾಸಗಳನ್ನೇ ಹೆಚ್ಚಾಗಿ ಬಳಸುವುದು ಇದಕ್ಕೆ ಕಾರಣವಿರಬಹುದು. ಇದು ದೇಸಿ ಫೀಲ್‌ ಕೊಡುತ್ತದೆ ಎನ್ನುತ್ತಾರೆ ಹಲವರು.

ಮರದ ಪೀಠೋಪಕರಣಗಳು
ಹಳೆಯ ಕಾಲದ ಮನೆಗಳು ಅಂದರೆ ಹಿರಿಯರು ಬೀಟೆ, ತೇಗ, ಮಹಾಗನಿ, ರೋಸ್‌ವುಡ್‌ ಮುಂತಾದ ಮರಗಳಿಂದ ಮಾಡಿಸಿಟ್ಟ ಪೀಠೋಪಕರಣಗಳು ಮನೆಯಲ್ಲಿರುತ್ತದೆ. ಇವುಗಳ ಡಿಸೈನ್‌ ಸ್ವಲ್ಪ ಹಳೆಯ ಕಾಲದ್ದಿರಬಹುದು. ಅದನ್ನೇ ಅಲ್ಪ ಸ್ವಲ್ಪ ಮಾರ್ಪಾಡು ಮಾಡಿ, ಬಣ್ಣ ಹೊಡೆಸಿ, ಒಳಾಂಗಣ ವಿನ್ಯಾಸಕ್ಕೆ ತಕ್ಕಂತೆ ಬದಲಾಯಿಸಿಕೊಂಡರೆ ಮನೆಯ ಒಳಗಿನ ನೋಟವನ್ನೇ ಬೆರಗಾಗುವಂತೆ ಬದಲಾಯಿಸಬಹುದು. ಸೋಫಾದ ಮುಂದೆ ಹಳೆಯ ಕಾಲದ ಟೀಪಾಯಿ, ಹಾಲ್‌ನ ಒಂದು ಮೂಲೆಯಲ್ಲಿ ಅಜ್ಜನ ಕಾಲದ ಹಳೆ ಕರ‍್ಚಿ, ಮರದ ಉಯ್ಯಾಲೆಗಳು ಗೋಡೆಯ ಮನಸೆಳೆಯುವ ಬಣ್ಣಗಳ ಜೊತೆಗೆ ಅಲಂಕಾರವನ್ನು ಹೆಚ್ಚಿಸುತ್ತದೆ.

ಗೋಡೆಯ ಬಣ್ಣ
ಒಳಾಂಗಣ ವಿನ್ಯಾಸದಲ್ಲಿ ಮನೆಯ ಗೋಡೆಗಳ ಬಣ್ಣದ್ದೇ ಪ್ರಮುಖ ಪಾತ್ರ. ವಿಶಿಷ್ಟ ಹಾಗೂ ಮನಸ್ಸಿಗೆ ರೋಮಾಂಚನ, ಖುಷಿ ನೀಡುವಂತಹ ಬಣ್ಣಗಳ ಆಯ್ಕೆ ಜೊತೆಗೆ ಮೂರು ನಾಲ್ಕು ಬಣ್ಣಗಳನ್ನು ಬಳಸುವುದೊಳಿತು. ಆದರೆ, ಲೈಟ್‌ ಕಲರ್‌ಗಳು ಬೇಡ. ಕೆಂಪು, ನೇರಳೆ, ಕೇಸರಿ, ನೀಲಿ ಹೀಗೆ ಗಾಢ ಬಣ್ಣಗಳು ನಮ್ಮ ಮನಸ್ಸಿನ ಭಾವನೆಗಳನ್ನು ಕಟ್ಟಿಕೊಡುವಂತಹ ಬಣ್ಣಗಳೇ ಇರಲಿ. ಗೋಡೆಗಳಲ್ಲಿ ಅಲ್ಲಲ್ಲಿ ಪೇಟಿಂಗ್‌ಗಳು, ಒಂದೆರಡು ನಮ್ಮ ಅಥವಾ ನಮ್ಮ ಆಪ್ತರ ಜೊತೆಗಿನ ಭಾವಚಿತ್ರಗಳ ಫ್ರೇಮ್‌ಗಳನ್ನು ವಿನ್ಯಾಸಕ್ಕೆ ತಕ್ಕಂತೆ ಗೋಡೆಗಳಲ್ಲಿ ಏರಿಸಿ. ಹಾಗೇ ಕರ್ಟನ್ ಕಲಾಕೃತಿಗಳನ್ನು ಸಹ ಆಯ್ಕೆ ಮಾಡುವಾಗ ಜೋಪಾನ ಮಾಡಬೇಕು. ಒಳಾಂಗಣ ವಿನ್ಯಾಸ ಮಾಡುವಾಗ ಅತಿ ದುಬಾರಿ ವಸ್ತುಗಳನ್ನೇ ಕೊಳ್ಳಬೇಕಿಲ್ಲ, ಮಾರುಕಟ್ಟೆಯಲ್ಲಿ ಸಿಗುವ ಸಾಧಾರಣ ವಸ್ತುಗಳನ್ನೇ ಅಸ್ಥೆ, ಆಸಕ್ತಿಯಿಂದ ಆಯ್ಕೆ ಮಾಡಿಕೊಂಡರೆ ಇತರರು ಕಣ್ಣುಬಾಯಿ ಬಿಟ್ಟು ನೋಡುವಂತೆ ಮನೆ ಅಲಂಕಾರ ಮಾಡಬಹುದು.

ಭಾರತೀಯತೆಯನ್ನು ಸಾರುವ ಕಲಾಕೃತಿ, ಸಂಗ್ರಹದಿಂದ ವಿನ್ಯಾಸ
ಸಾಮಾನ್ಯವಾಗಿ ಮನೆಯಲ್ಲಿ ಬುದ್ಧನ ಕಲಾಕೃತಿ, ದೇವರ ಪ್ರತಿಮೆ, ಕಂಚಿನ, ತಾಮ್ರದ ವಿಗ್ರಹ ಅಥವಾ ಕೆಲವು ಕಲಾಕೃತಿಗಳು ಹಿರಿಯರಿಂದ ಬಳುವಳಿಯಾಗಿ ಬಂದಿರುತ್ತವೆ. ಇವುಗಳನ್ನು ನೀಟಾಗಿ ಮನೆಯ ಹಾಲ್‌ ಅಥವಾ ಷೋಕೇಸ್‌ನಲ್ಲಿ ಪೇರಿಸಿಟ್ಟರೆ ಒಳಗಿನ ನೋಟವನ್ನು ಅಂದಗಾಣಿಸುತ್ತದೆ. ಇದು ಭಾರತದ ಶ್ರೀಮಂತ ಸಂಸ್ಕೃತಿಯನ್ನು ತಿಳಿಸುತ್ತದೆ. ಹಾಗೇ ವಿನ್ಯಾಸಕ್ಕೆ ತಕ್ಕುದಾದ ಕರಕುಶಲ, ಜನಪದ ಅಲಂಕಾರಿಕ ವಸ್ತುಗಳನ್ನು ಕೊಂಡುಕೊಂಡು ಮನೆಯ ಅಲಂಕಾರ ಮಾಡಬಹುದು. ಹಾಗೇ ಹೂವಿನ ಕುಂಡ, ಕಸೂತಿ ಡಿಸೈನ್‌ಗಳಿಂದಲೂ ಮನೆಯನ್ನು ಇನ್ನಷ್ಟು ಸುಂದರಗೊಳಿಸಬಹುದು.

ಬಟ್ಟೆಗಳ ಆಯ್ಕೆ
ನಮ್ಮ ದೇಶದ ಜವಳಿ ಉದ್ಯಮಕ್ಕೆ ಇತಿಹಾಸವೇ ಇದೆ. ಇಲ್ಲಿ ತರತರಹದ ಬಟ್ಟೆ ಆಯ್ಕೆಗಳಿವೆ. ಹಾಗೇ ಬೇರೆ ಬೇರೆ ಪ್ರದೇಶಕ್ಕೆ ತಕ್ಕಂತೆ ಬೇರೆ ಬೇರೆ ರೀತಿಯ, ವಿನ್ಯಾಸದ ಬಟ್ಟೆಗಳನ್ನು ಬಳಸಲಾಗುತ್ತದೆ. ಆ ಸ್ಥಳೀಯ ಸರಕುಗಳು ಕೂಡ ವಿಶಿಷ್ಟ ನೋಟ ಹಾಗೂ ವಿನ್ಯಾಸದಿಂದ ಕಣ್ಸೆಳೆಯುವಂತಿರುತ್ತದೆ. ಮನೆಯ ಹಾಲ್‌, ಬೆಡ್‌ರೂಮ್‌, ಇತರ ಬೇರೆ ಬೇರೆ ಕೋಣೆಗಳಿಗೆ ಬೆಡ್ ಕವರ್‌, ಹಾಸಿಗೆ ಕವರ್‌, ಕರ್ಟನ್ ಮತ್ತು ಟೇಬಲ್ ಮ್ಯಾಟ್‌ಗಳನ್ನು ಬಳಸಬಹುದು. ಹಾಗೆಯೇ ಬಾಂಧನಿ, ಕಲಂಕಾರಿ, ಕಾಶ್ಮೀರಿ, ರಾಜಸ್ತಾನಿ, ಹೀಗೆ ಬೇರೆ ಬೇರೆ ಮಾದರಿ ವಿನ್ಯಾಸದ ಬಟ್ಟೆಗಳನ್ನು ವಿನ್ಯಾಸಕ್ಕೆ ಬಳಸಿಕೊಳ್ಳಬಹುದು. ಇದು ಸಾಂಪ್ರದಾಯಿಕ ನೋಟವನ್ನು ನೀಡುತ್ತದೆ.

Related News

spot_img

Revenue Alerts

spot_img

News

spot_img