ಬೆಂಗಳೂರು, ಜೂ. 28 : ವಿಮೆ ಪಾಲಿಸಿಗಳನ್ನು ಖರೀದಿಸಲು ಏಲ್ಲರೂ ಆಸಕ್ತಿ ತೋರಿಸುತ್ತಿದ್ದಾರೆ. ಯುವಕರಲ್ಲಿ ಇದರತ್ತ ಒಲವು ಹೆಚ್ಚಾಗಿದೆ. ಜೀವ ವಿಮಾ ಪಾಲಿಸಿ, ಆರೋಗ್ಯ ಪಾಲಿಸಿ, ಮಕ್ಕಳ ಪಾಲಿಸಿ, ಶಿಕ್ಷಣ ಪಾಲಿಸಿಗಳನ್ನು ಮಾಡಿಸುತ್ತಾರೆ. ಇನ್ನು ನಿವೃತ್ತಿ ಜೀವನಕ್ಕಾಗಿಯೂ ಪಾಲಿಸಿಗಳನ್ನು ಮಾಡಿಸುವುದು ಒಳ್ಳೆಯದು. ನೀವೇನಾದರೂ ಮೊದಲ ಬಾರಿಗೆ ಪಾಲಿಸಿ ಮಾಡಿಸುತ್ತಿದ್ದರೆ, ಈ ಲೇಖನವನ್ನು ತಪ್ಪದೇ ಓದಿ.
ವಿಮೆಯನ್ನು ಖರೀದಿಸುವಾಗ ಹಿಂದೆ-ಮುಂದೆ ಯೋಚಿಸದೆ ಖರೀದಿಸಬಾರದು. ವಿಮಾ ಪಾಲಿಸಿಯನ್ನು ಖರೀದಿಸುವ ಮುನ್ನ ಮುಂದಿನ ಜೀವನದ ಬಗ್ಗೆ ಪ್ಲಾನ್ ಮಾಡಿ. ವೆಚ್ಚದ ಅಂದಾಜನ್ನು ಮಾಡಿ, ಬಳಿಕವಷ್ಟೇ ವಿಮಾ ಪಾಲಿಸಿ ಮಾಡಿಸಿ. ಆದರೆ, ಅದಕ್ಕೂ ಮುನ್ನ ನೀವು ಯಾವ ಕಂಪನಿಯಲ್ಲಿ ವಿಮೆ ಖರೀದಿಸಬೇಕು ಎಂಬುದರ ಬಗ್ಗೆ ಮಾಹಿತಿ ಪಡೆಯಿರಿ. ಯಾವ ವಿಮೆ ನಿಮಗೆ ಅನುಕೂಲವಾಗುತ್ತದೆ. ನಿಮ್ಮ ಬಜೆಟ್ ಗೆ ಹೊಂದಿಕೊಳ್ಳುವಂತಹ ವಿಮೆಯನ್ನು ಮಾಡಿಸಿ.
ಆರೋಗ್ಯ, ಶಿಕ್ಷಣ, ನಿವೃತ್ತಿ, ಜೀವ ವಿಮೆ ಸೇರಿದಂತೆ ಹಲವು ವಿಮೆಗಳಿವೆ. ಇವುಗಳಲ್ಲಿ ಯಾವುದು ಬೇಕು ಎಂಬುದನ್ನು ಆರಿಸಿಕೊಳ್ಳಿ. ಒಂದೇ ವಿಮೆಯಲ್ಲಿ ಎಲ್ಲಾ ಸೌಲಭ್ಯವು ಸಿಗುವುದಿಲ್ಲ. ಮೊದಲ ಬಾರಿಗೆ ಪಾಲಿಸಿಯನ್ನು ಖರೀದಿಸುವಾಗ ಗೊಂದಲದಲ್ಲಿ ಬೀಳಬೇಡಿ. ನಿಮ್ಮ ಆದಾಯದಲ್ಲಿ ಕನಿಷ್ಠ ಶೇ. 10 ರಷ್ಟನ್ನು ವಿಮಾ ಪಾಲಿಸಿ ಮಾಡಿಸಿ. ಆದಾಯ, ಸಾಲ, ಉಳಿತಾಯ, ವೆಚ್ಚ ಸೇರಿದಮಥ ನಿಮ್ಮ ಜೀವನಶೈಲಿಯ ಬಗ್ಗೆ ಗಮನವಿರಲಿ. ನಿಮ್ಮ ಕೈಗೆಟುಕುವಂತೆ ವಿಮಾ ಪಾಲಿಸಿಯನ್ನು ಖರೀದಿಸಿ.
ಇಲ್ಲದಿದ್ದರೆ, ಮುಂದೆ ಇದು ಸಂಕಷ್ಟಕ್ಕೆ ದೂಡಬಹುದು. ಹಾಗಾಗಿ ಯಾವ ವಿಮೆ ನಿಮ್ಮ ಆದಾಯಕ್ಕೆ ಸರಿದೂಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ಇದರ ಜೊತೆಗೆ ನಿಮ್ಮ ಬಳಿ ತುರ್ತು ನಿಧಿ ಇರಲಿ. ಕೆಲವೊಮ್ಮೆ ವಿಮೆ ಕಟ್ಟುವ ಸಮಯ ಹಾಗೂ ಕೆಲ ತುರ್ತು ಕರ್ಚುಗಳು ಒಂದೇ ಸಲಕ್ಕೆ ಬಂದರೆ, ಸಮಸ್ಯೆಯಾಗುತ್ತದೆ. ಇನ್ನು ವಿಮಾ ಪಾಲಿಸಿಯನ್ನು ನಿಮ್ಮ ವಯಸ್ಸಿಗೆ ತಕ್ಕಂತೆ ಖರೀದಿಸುವುದು ಸೂಕ್ತ. ಯಾಕೆಂದರೆ, ವಯಸ್ಸಿನ ಬೇರೆ ಬೇರೆ ಹಂತಗಳಲ್ಲಿ ಹಣದ ಅಗತ್ಯತೆಯೇ ಬೇರೆಯಾಗಿರುತ್ತದೆ.
ಇನ್ನು ನೀವು ಒಂಟಿಯಾಗಿದ್ದರೆ, ಖರ್ಚು ಕಡಿಮೆ ಇರುತ್ತದೆ. ಅದೇ ಮದುವೆಯಾಗಿ ಮಕ್ಕಳಿದ್ದರೆ ಖರ್ಚು ಹೆಚ್ಚಿರುತ್ತದೆ. ಹಾಗೆಯೇ ಆರೋಗ್ಯ ಸಮಸ್ಯೆಗಳು ಕೂಡ ವಯಸ್ಸಿನ ಜೊತೆಗೆ ತಳುಕು ಹಾಕಿರುತ್ತವೆ. ಹಾಗಾಗಿ ನಿಮ್ಮ ಉದ್ಯೋಗ, ಮಕ್ಕಳು, ಮದುವೆ, ಆರೋಗ್ಯ, ಆದಾಯ ಎಲ್ಲವನ್ನೂ ಚೆಕ್ ಮಾಡಿಕೊಳ್ಳಿ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ವಿಮೆಯನ್ನು ಖರೀದಿಸಿ. ವಿಮೆ ಖರೀದಿಸುವ ಮುನ್ನ ಸಾಕಷ್ಟು ಮುಂದಾಲೋಚನೆ ಇರುವುದು ಸೂಕ್ತ.