ಬೆಂಗಳೂರು, ಏ. 05 : 35 ಲಕ್ಷ ತೆರಿಗೆಯನ್ನು ಕಟ್ಟುತ್ತಿದ್ದ ಹೆಚ್ಎಎಲ್ ಇನ್ಮುಂದೆ 5 ಕೋಟಿ ಪಾವತಿ ಮಾಡಲು ಒಪ್ಪಿಕೊಂಡಿದೆ., ಅದು ಹೇಗೆ ಸಾಧ್ಯ? ಅಷ್ಟಕ್ಕೂ ಹೆಚ್ಎಎಲ್ ಅಷ್ಟೋಂದು ತೆರಿಗೆಯನ್ನು ಯಾಕೆ ಪಾವತಿ ಮಾಡಬೇಕು ಎಂದು ಎಲ್ಲರಲ್ಲೂ ಪ್ರಶ್ನೆ ಎದ್ದಿರಬಹುದು. ಆದರೆ, ಈ ಹಿಂದೆ ಹೆಚ್ಎಎಲ್ ವಾರ್ಷಿಕವಾಗಿ 35 ಲಕ್ಷ ರೂಪಾಯಿ ತೆರಿಗೆಯನ್ನು ಪಾವತಿಸುತ್ತಿತ್ತು. ಈ ಬಗ್ಗೆ ಹೆಚ್ಎಎಲ್ ಅಧಿಕಾರಿಗಳೊಂದಿಗೆ ಬಿಬಿಎಂಪಿ ಹಾಗೂ ಕಂದಾಯ ಅಧಿಕಾರಿಗಳು ಸುದೀರ್ಘವಾದ ಚರ್ಚೆಯನ್ನು ನಡೆಸಿದ್ದರು.
ಕಾನೂನು ನಿಯಮಗಳ ಬಗ್ಗೆ ಅಧಿಕಾರಿಗಳು ಹೆಚ್ಎಎಲ್ ಆಫಿಸರ್ ಗಳಿಗೆ ಅರ್ಥ ಮಾಡಿಸಲಾಯ್ತು. ಈ ಸುದೀರ್ಘ ಚರ್ಚೆಯ ಬಳಿಕ ಕಾನೂನು ಅರ್ಥ ಮಾಡಿಕೊಂಡ ಅಧಿಕಾರಿಗಳು ವಾರ್ಷಿಕವಾಗಿ 5 ಕೋಟಿ ತೆರಿಗೆಯನ್ನು ಪಾವತಿಸಲು ಒಪ್ಪಿಕೊಂಡಿದೆ. ಈ ಮೂಲಕ ಹೆಚ್ಎಎಲ್ ಅಧಿಕಾರಿಗಳಿಗೆ ಮನವರಿಕೆ ಮಾಡುವಲ್ಲಿ ಬಿಬಿಎಳಪಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈಗಾಗಲೇ ಹೆಚ್ಎಎಲ್ ಬಾಕಿ ಉಳಿಸಿಕೊಂಡಿದ್ದ ತೆರಿಗೆ ಹಣ 92. 57 ಕೋಟಿ ರೂಪಾಯಿಯನ್ನು ಆದಾಯ ಇಲಾಖೆಗೆ ಪಾವತಿ ಮಾಡಿದೆ.
ಹೆಚ್ಎಎಲ್ ಆಸ್ತಿಗಳನ್ನು ಪರಿಶೀಲನೆ ನಡೆಸಿದ ಬಿಬಿಎಂಪಿ, ಶಾಲಾ ಆವರಣ, ಹೆಚ್ಎಎಲ್ ಆಸ್ಪತ್ರೆ, ಬ್ಯಾಂಕ್‌ಗಳಿಗೆ ಬಾಡಿಗೆ ನೀಡಿರುವ ಸ್ಥಳಗಳನ್ನು ಪರಿಶೀಲಿಸಿತು. ಈ ಎಲ್ಲಾ ಆಸ್ತಿಗಳ ವೈಜ್ಞಾನಿಕ ಮೌಲ್ಯಮಾಪನವನ್ನು ನಡೆಸಲಾಗಿತ್ತು. ಇದಿಷ್ಟೇ ಸ್ಥಳವಲ್ಲದೇ, ಇತರೆ ಜಾಗಗಳ ಪರಿಶೀಲನೆಯೂ ನಡೆದಿತ್ತು. ನಂತರ ಮಹದೇವಪುರ ವಲಯದ ಸಹಾಯಕ ಕಂದಾಯ ಅಧಿಕಾರಿಗಳು ಇದರ ಲೆಕ್ಕಾಚಾರ ಮಾಡಿದ್ದರು. ಬಳಿಕ ಬಿಬಿಎಂಪಿ ಹೆಚ್ಎಎಲ್ ಅಧಿಕಾರಿಗಳಿಗೆ ವಿಚಾರವನ್ನು ಅರ್ಥ ಮಾಡಿಸಿತ್ತು. ಎಲ್ಲಾ ಅರ್ಥ ಆದ ಬಳಿಕ ಹೆಚ್ಎಎಲ್ ನ ಸಿಎಂಡಿ ಸಿಬಿ ಅನಂತಕೃಷ್ಣನ್ ಅವರು ತೆರಿಗೆಯನ್ನು ಸಂಪೂರ್ಣವಾಗಿ ಸಂದಾಯ ಮಾಡಲು ಒಪ್ಪಿಗೆ ನೀಡಿದರು.