ಬೆಂಗಳೂರು;ರಾಜ್ಯದಲ್ಲಿ 1000 ನೂತನ ಮದ್ಯದಂಗಡಿಗಳನ್ನು ತೆರೆಯಲಾಗುವುದೆಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದ್ದರು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಮಹಿಳೆಯರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಇಂದು ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ್ದು, ಯಾವುದೇ ರೀತಿಯ ಹೊಸ ಮದ್ಯದಂಗಡಿಗಳನ್ನು ರಾಜ್ಯದಲ್ಲಿ ತೆರೆಯುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಆದರೆ ಡಿಸಿಎಂ ಡಿಕೆಶಿ ಗ್ರಾಮೀಣ ಭಾಗದಲ್ಲಿ ತೆರೆಯಲ್ಲ ಎಂದಿದ್ದು, ಸಚಿವರ ಹೇಳಿಕೆ ಬೆಂಬಲಿಸಿದ್ದಾರೆ.ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವ ಉದ್ದೇಶದಿಂದ ಹೊಸ ಆದಾಯ ಮೂಲಗಳ ಹುಡುಕಾಟ ಹಾಗೂ ಆದಾಯ ವೃದ್ಧಿಗೆ ಶ್ರಮಹಾಕುತ್ತಿರುವ ಸರ್ಕಾರ, ಹೊಸ ಮದ್ಯದಂಗಡಿಗಳಿಗೆ ಪರವಾನಗಿ ಕೊಡಲು ಚಿಂತನೆ ನಡೆಸುತ್ತಿರುವುದಾಗಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ನೀಡಿದ್ದ ಹೇಳಿಕೆಗೆ ತೀವ್ರ ವಿರೋಧ ಕೇಳಿಬಂದ ಹಿನ್ನೆಲೆ ಹೆಜ್ಜೆ ಹಿಂದಿಟ್ಟಿದೆ.ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿ, ಸಾರ್ವಜನಿಕ ವಲಯದಲ್ಲಿ ನಡೆದಿರುವ ಚರ್ಚೆಗೆ ಅಂತ್ಯ ಹಾಡಲು ಬಯಸಿದ್ದಾರೆ. ಸಾವಿರ ಮದ್ಯದಂಗಡಿಗಳನ್ನು ತೆರೆಯುವುದಾಗಿ ಚಿಂತನೆ ನಡೆಸುತ್ತಿರುವುದಾಗಿ ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ, ನಾವು ತೆರೆಯುವುದಿಲ್ಲ ಎಂದು ಚಿತ್ರದುರ್ಗದಲ್ಲಿ ಸ್ಪಷ್ಟನೆ ನೀಡಿದ್ದಾರೆ.