ಬೆಂಗಳೂರು, ಜೂ. 03 : ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷ ಒಟ್ಟು ಐದು ಗ್ಯಾರೆಂಟಿಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಅದರಂತೆಯೇ ಕಾಂಗ್ರೆಸ್ ಪಕ್ಷ ಗೆದ್ದು, ಅಧಿಕಾರದ ಗದ್ದುಗೆಯನ್ನು ಏರಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರೆಂಟಿಗಳನ್ನು ನಿನ್ನೆ ಘೋಷಿಸಿದೆ. ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನ ಭಾಗ್ಯ, ಶಕ್ತಿ ಮತ್ತು ಯುವನಿಧಿ ಯೋಜನೆಗಳನ್ನು ಸರ್ಕಾರ ಆದಷ್ಟು ಬೇಗ ಜಾರಿಗೆ ತರುವುದಾಗಿ ಹೇಳಿದೆ. ಅದರಲ್ಲೂ ಈ ಆರ್ಥಿಕ ವರ್ಷದಲ್ಲೇ ಜಾರಿಗೆ ತರುವುದಾಗಿ ಹೇಳಿದೆ.
ರಾಜ್ಯದ ಜನತೆ ಐದು ಗ್ಯಾರೆಂಟಿಗಳ ಫಲಾನುಭವಿಗಳಾಗಳು ಆಗಲು ಸಂತಸದಿಂದ ಕಾಯುತ್ತಿದ್ದಾರೆ. ಹೆಚ್ಚಿನ ನಿಯಮಗಳನ್ನು ಹೇರದೇ, ಸರ್ಕಋ ರಾಜ್ಯದ ಪ್ರತಿಯೊಬ್ಬರೂ ಐದು ಗ್ಯಾರೆಂಟಿಗಳ ಫಲಾನುಭವಿಗಳಾಗಲಿ ಎಂದು ಸರ್ಕಾರದ ಆಲೋಚನೆ. ಆದರೆ, ಸರ್ಕಾರ ಘೋಷಿಸಿರುವ ಈ ಐದು ಗ್ಯಾರೆಂಟಿಗಳು ಜಾರಿಗೆ ಬರಲು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ಪಡೆಯೋಣ ಬನ್ನಿ..
ಗೃಹ ಜ್ಯೋತಿ ಯೋಜನೆಯಲ್ಲಿ ಪ್ರತೀ ಮನೆಗೂ 200 ಯೂನಿಟ್ಗಳವರೆಗೂ ವಿದ್ಯುತ್, ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ., ಶಕ್ತಿ ಯೋಜನೆಯಲ್ಲಿ ರಾಜ್ಯದ ಎಸಿ, ಐಷಾರಾಮಿ ಬಸ್ಸು ಹೊರತಪಡಿಸಿ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು ಪ್ರಯಾಣಿಸಬಹುದು. ಅನ್ನ ಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಹಾಗೂ ಕೊನೆಯದಾಗಿ ಯುವ ನಿಧಿ ಯೋಜನೆಯಲ್ಲಿ ನಿರುದ್ಯೋಗಿ ಪದವೀಧರರಿಗೆ 1,500ರಿಂದ 3,000 ರೂ ಸಹಾಯಧನ ಕೊಡಲಾಗುತ್ತದೆ.
ಈ ಯೋಜನೆಗಳು ಜಾರಿಗೆ ಬಂದರೆ, ರಾಜ್ಯ ಸರ್ಕಾರಕ್ಕೆ 45,000 ದಿಂದ 65,000 ಕೋಟಿ ರೂಪಾಯಿವರೆಗೂ ಹೊರೆಯಾಗುತ್ತದೆ. ಇದರಿಂದಾಗಿ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಎದುರಾಗಲಿದೆ. ಇದನ್ನು ಸರಿದೂಗಿಸಲು ಸರ್ಕಾರ ತೆರಿಗೆ ಹಾಗೂ ಇತರೆ ಸುಂಕಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.