ಬೆಂಗಳೂರು : ಆಸ್ತಿ ಖರೀದಿ, ಮಾರಾಟಗಾರರಿಗೆ ಕಂದಾಯ ಸಚಿವ ಆರ್. ಅಶೋಕ್ ಸಿಹಿಸುದ್ದಿ ನೀಡಿದ್ದು, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಹೊಸ ಕಾವೇರಿ 2.0 ತಂತ್ರಾಂಶ ಬಳಸಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ತ್ವರಿತಗತಿಯಲ್ಲಿ ಸೇವೆ ನೀಡಲು ಕಾವೇರಿ 2.0 ತಂತ್ರಾಂಶ ಅಳವಡಿಸಲು ಕಂದಾಯ ಇಲಾಖೆ ಮುಂದಾಗಿದೆ.
ಪಾಸ್ಪೋರ್ಟ್ ಮಾದರಿಯ ಸೇವೆ ಒದಗಿಸಲು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಹೊಸ ಕಾವೇರಿ 2.0 ತಂತ್ರಾಂಶ ಬಳಸಲಾಗುವುದು. ರಾಜ್ಯದಲ್ಲಿ 260 ಸಬ್ ರಿಜಿಸ್ಟ್ರಾರ್ ಕಚೇರಿಗಳಿದ್ದು, ದಿನಕ್ಕೆ ಸುಮಾರು 10,000 ದಾಖಲೆ ಪತ್ರಗಳನ್ನು ನೋಂದಣಿ, ದೃಢೀಕರಣ ಪತ್ರ ಸೇವೆ ಒದಗಿಸಲಾಗುತ್ತಿದೆ.ಆನ್ಲೈನ್ ನಲ್ಲಿ ಸೇವೆಯ ಕಾರಣ ಅಧಿಕಾರಿಗಳಿಗೆ ಲಂಚ ಕೊಡುವಂತಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಬಹುದು. ನಿಗದಿತ ಸಮಯಕ್ಕೆ ಹೋಗಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.ಫೆಬ್ರವರಿ 2 ರಿಂದ ಮೈಸೂರು,ಮಂಗಳೂರು, ಬೆಳಗಾವಿ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.ತ್ವರಿತಗತಿಯ ಸೇವೆಗಾಗಿ ಕಾವೇರಿ 2.0 ತಂತ್ರಾಂಶ ಅಳವಡಿಸಲಾಗುವುದು.ಹೊಸ ಕಾವೇರಿ 2.0 ತಂತ್ರಾಂಶದಿಂದ ಕಚೇರಿಗಳಿಗೆ ಅಲೆದಾಟ ತಪ್ಪಲಿದೆ. ಸರ್ವರ್ ಸಮಸ್ಯೆಯೂ ಬಗೆಹರಿಯಲಿದೆ. ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆಗೆ ಬ್ರೇಕ್ ಬೀಳಲಿದೆ ಎಂದು ಹೇಳಿದ್ದಾರೆ.
ಸಾಕಷ್ಟು ಅಧ್ಯಯನದ ನಂತರ ಈ ತಂತ್ರಾಂಶ ಅಳವಡಿಸಲಾಗುತ್ತಿದೆ, ಕೆಲವೇ ನಿಮಿಷಗಳಲಿ ನೋಂದಣಿ ಸೇವೆ ಪಡೆಯಬಹುದು. ನೋಂದಣಿ ಪತ್ರಗಳನ್ನು ದಾಖಲೆ ಪತ್ರಗಳನ್ನು ಜನರಿಗೆ ಕೊಡುವುದಿಲ್ಲ. ಅವುಗಳ ಕೋಡ್ ನಂಬರ್ ಕೊಡಲಾಗುತ್ತದೆ. ಕೋಡ್ ನಂಬರ್ ಬಳಸಿ ದೃಢೀಕೃತ ದಾಖಲೆ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.