ಮುಂಬೈ: ಗೋದ್ರೇಜ್ ಪ್ರಾಪರ್ಟೀಸ್ ಸೆಪ್ಟೆಂಬರ್ 16 ರಂದು ಮುಂಬೈನಲ್ಲಿ ಎರಡು ಹೊಸ ಯೋಜನೆಗಳನ್ನು ಏಕಕಾಲದಲ್ಲಿ ಪ್ರಾರಂಭಿಸುವ ಮೂಲಕ 1,200 ಕೋಟಿ ಮೌಲ್ಯದ ದಾಖಲೆಯ ಮಾರಾಟವನ್ನು ಸಾಧಿಸಲಾಗಿದೆ ಎಂದು ಘೋಷಿಸಿದೆ.
ಥಾಣೆಯ ಕೋಲ್ಶೆಟ್ ರಸ್ತೆಯಲ್ಲಿರುವ ಗೋದ್ರೇಜ್ ಅಸೆಂಡ್ ಮತ್ತು ದಾದರ್, ವಡಾಲಾದಲ್ಲಿರುವ ಗೋದ್ರೇಜ್ ಹಾರಿಜಾನ್ ಎಂಬ ಎರಡು ಹೊಸ ಯೋಜನೆಗಳನ್ನು ಮುಂಬೈನಲ್ಲಿ ಪ್ರಾರಂಭಿಸಲಾಯಿತು.
Q1 FY 23 ರಲ್ಲಿ ಪ್ರಾರಂಭಿಸಲಾದ ಈ ಎರಡೂ ಯೋಜನೆಗಳಿಗಾಗಿ 8.08 ಲಕ್ಷ ಚದರ ಅಡಿಗಳಷ್ಟು ವಿಸ್ತೀರ್ಣವನ್ನು ಹೊಂದಿರುವ 700+ ಮನೆಗಳನ್ನು ಮಾರಾಟ ಮಾಡಿದೆ ಎಂದು ಕಂಪನಿಯು ತಿಳಿಸಿದೆ.
ಗೋದ್ರೇಜ್ ಪ್ರಾಪರ್ಟೀಸ್‌ನ ಎಂಡಿ ಮತ್ತು ಸಿಇಒ ಮೋಹಿತ್ ಮಲ್ಹೋತ್ರಾ, “ಗೋದ್ರೇಜ್ ಅಸೆಂಡ್ ಮತ್ತು ಗೋದ್ರೇಜ್ ಹಾರಿಜಾನ್‌ಗೆ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ನಾವು ತುಂಬಾ ಸಂತೋಷಗೊಂಡಿದ್ದೇವೆ” ಎಂದು ಹೇಳಿದ್ದಾರೆ.
“ಮುಂಬೈ ಯಾವಾಗಲೂ ನಮಗೆ ಪ್ರಮುಖ ಮಾರುಕಟ್ಟೆಯಾಗಿದೆ. ಗ್ರಾಹಕರ ವಿಶ್ವಾಸವು ಪ್ರತಿಷ್ಠಿತ ಡೆವಲಪರ್‌ಗಳಿಂದ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗೆ ಹೆಚ್ಚುತ್ತಿರುವ ಬೇಡಿಕೆಯ ಪ್ರತಿಬಿಂಬ. ಈ ಯೋಜನೆಗಳ ಎಲ್ಲಾ ನಿವಾಸಿಗಳಿಗೆ ಅತ್ಯುತ್ತಮವಾದ ಮನೆಯನ್ನು ನೀಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ” ಎಂದು ಹೇಳಿದ್ದಾರೆ.
ಈ ಹಿಂದೆ, ಕಂಪನಿಯು 2021-22ರಲ್ಲಿ 7,861 ಕೋಟಿಗಳಷ್ಟು ಮಾರಾಟದ ಬುಕಿಂಗ್‌ಗಳನ್ನು ಮಾಡಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ 10,000 ಕೋಟಿ ರೂಪಾಯಿಗಳ ಗುರಿಯನ್ನು ನಿಗದಿಪಡಿಸಿದೆ.
ಏಪ್ರಿಲ್-ಜೂನ್ 2022 ರ ಅವಧಿಯಲ್ಲಿ, ಮಾರಾಟದ ಬುಕಿಂಗ್ ಐದು ಪಟ್ಟು ಹೆಚ್ಚಾಗಿದ್ದು 2,520 ಕೋಟಿ ರೂಪಾಯಿಗೆ ತಲುಪಿದೆ, ಇದು ಮೊದಲ ತ್ರೈಮಾಸಿಕ ಮಾರಾಟವಾಗಿದೆ.
ಈ ಹಣಕಾಸು ವರ್ಷದಲ್ಲಿ ಹೊಸ ಮತ್ತು ಚಾಲ್ತಿಯಲ್ಲಿರುವ ಯೋಜನೆಗಳಲ್ಲಿ ಹೊಸ ಹಂತಗಳು ಸೇರಿದಂತೆ ಸುಮಾರು 20 ವಸತಿ ಯೋಜನೆಗಳನ್ನು ಪ್ರಾರಂಭಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಇದು 2021-22ರಲ್ಲಿ 6.5 ಮಿಲಿಯನ್ ಚದರ ಅಡಿ ಪ್ರದೇಶವನ್ನು, 2022-23 ರಲ್ಲಿ 10 ಮಿಲಿಯನ್ ಚದರ ಅಡಿ ಪ್ರದೇಶವನ್ನು ತಲುಪಲು ನಿರೀಕ್ಷಿಸಲಾಗಿದೆ ಎಂದು ತಿಳಿಸಿದೆ.
ಕಳೆದ ಫೆಬ್ರವರಿಯಲ್ಲಿ, ಗೋದ್ರೇಜ್ ಪ್ರಾಪರ್ಟೀಸ್ ಮುಂದಿನ 12-18 ತಿಂಗಳುಗಳಲ್ಲಿ ಭೂ ಸ್ವಾಧೀನ ಮತ್ತು ಹೊಸ ಯೋಜನೆಗಳ ಅಭಿವೃದ್ಧಿಗೆ 7,500 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿತ್ತು.