ನೀವು ಮನೆ ಖರೀದಿಸುವ ಆಕಾಂಕ್ಷಿ ಆಗಿದ್ದರೆ ಮತ್ತು ನೆರೆಹೊರೆಯಲ್ಲಿ ಹೆಚ್ಚು ರಿಯಲ್ ಎಸ್ಟೇಟ್ ಯೋಜನೆಗಳನ್ನು ಹೊಂದಿರದ ಇನ್ನಷ್ಟೇ ಅಭಿವೃದ್ಧಿ ಹೊಂದಬೇಕಿರುವ ನಗರದಲ್ಲಿ ಹೂಡಿಕೆ ಮಾಡುವ ಉತ್ಸಾಹ ಹೊಂದಿದ್ದರೆ ಖಂಡಿತವಾಗಿಯೂ ಜಾಗರೂಕರಾಗಿರಬೇಕು. ಆದರೆ, ಸಾಮಾನ್ಯ ಮನುಷ್ಯನಿಗೆ ಭೂಮಿಯನ್ನು ಮತ್ತು ಅದರ ಭೌಗೋಳಿಕ ಪ್ರದೇಶವನ್ನು ಪರಿಶೀಲಿಸುವುದು ಹೇಗೆ ಮತ್ತು ಅದು ತನಗೆ ಸರಿಯಾದ ಹೂಡಿಕೆಯೇ ಅಥವಾ ಇಲ್ಲವೇ ಎಂಬುದು ಅಷ್ಟಾಗಿ ಮಾಹಿತಿ ಇರುವುದಿಲ್ಲ. ಇದೇ ಹಿನ್ನೆಲೆಯಲ್ಲಿ ಬಿಲ್ಡಿಂಗ್ ಇನ್ಫಾರ್ಮೇಷನ್ ಮಾಡೆಲಿಂಗ್‌ನಲ್ಲಿ ಬಳಸುವ ಜಿಯೋಸ್ಪೇಷಿಯಲ್ ತಂತ್ರಜ್ಞಾನ ಬಳಕೆ ಸೂಕ್ತವಾಗಿದೆ.
ಏನಿದು ಜಿಯೋಸ್ಪೇಷಿಯಲ್ ತಂತ್ರಜ್ಞಾನ?
ʻಜಿಯೋಸ್ಪೇಷಿಯಲ್ ತಂತ್ರಜ್ಞಾನ ಭೌಗೋಳಿಕತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸ್ಥಳದ ನಿಖರವಾದ ಆಕೃತಿಯ ದತ್ತಾಂಶಗಳನ್ನು ಒದಗಿಸುತ್ತದೆ. ಸಿವಿಲ್ ಎಂಜಿನಿಯರ್‌ಗಳಿಗೆ, ನಿವೇಶನದ ಸ್ಥಳಾಕೃತಿಯ ನಕ್ಷೆಯನ್ನು ರಚಿಸಲು ಸಹಾಯ ಮಾಡುತ್ತದೆ. ಇದರಿಂದ ಸರಿಯಾದ ಸ್ಥಳದಲ್ಲಿ ಕಟ್ಟಡ ನಿರ್ಮಿಸಲು ಅನುಕೂಲವಾಗುತ್ತದೆ. ಡ್ರೋನ್‌ಗಳ ಬಳಕೆ ಆರಂಭವಾದ ನಂತರ ದತ್ತಾಂಶ ಸಂಗ್ರಹ ಪ್ರಕ್ರಿಯೆಗೆ ವೇಗ ಸಿಕ್ಕಿದೆ. ಅವು ವೈಮಾನಿಕ ಚಿತ್ರಣಗಳನ್ನು ಮತ್ತು ನಕ್ಷೆ ರಚನೆಗೆ ಅಗತ್ಯವಿರುವ ದತ್ತಾಂಶಗಳನ್ನು ತಕ್ಷಣ ಸೆರೆಹಿಡಿಯುತ್ತವೆ.
ಈ ಡ್ರೋನ್‌ಗಳು, ಮಲ್ಟಿಸ್ಪೆಕ್ಟ್ರಲ್ ಮತ್ತು ಅತ್ಯುನ್ನತ ರೆಸಲ್ಯೂಷನ್ ಆರ್‌ಜಿಬಿ ಕ್ಯಾಮೆರಾಗಳೊಂದಿಗೆ ಕೆಳ ಮುಖನಾದ ಸಂವೇದಕಗಳನ್ನು ಹೊಂದಿರುತ್ತವೆ. ಕೆಲವೊಮ್ಮ ಲಿಡಾರ್‌ಗಳನ್ನೂ ಅಳವಡಿಸಲಾಗುತ್ತದೆ. ಮರಗಳು ಮತ್ತು ಭೂಮಿಯನ್ನು ಮರೆಮಾಚಿರುವ ವಸ್ತುಗಳನ್ನು ಭೇದಿಸಿ ಚಿತ್ರ ತೆಗೆಯಲು ಇದು ನೆರವಾಗುತ್ತದೆ. ಆರ್‌ಜಿಬಿ ಕ್ಯಾಮೆರಾಗಳು, ಭಿನ್ನ ಕೋನಗಳಿಂದ ನಿಖರವಾದ ಹೊಂದಾಣಿಕೆಯಲ್ಲಿ ಭೂಮಿಯ ಚಿತ್ರ ಸೆರೆಹಿಡಿಯುತ್ತದೆ. ದತ್ತಾಂಶಗಳನ್ನು ಸಂಗ್ರಹಿಸಿದ ನಂತರ, ಫೋಟೋಮೆಟ್ರಿ ತಂತ್ರಾಂಶ ಬಳಸಿ, ಜಿಯೋಟ್ಯಾಗ್ ಮಾಡಲಾದ ಫೋಟೋಗಳನ್ನು ಹೊಂದಿಸುವ ಮೂಲಕ 3ಡಿ ನಕ್ಷೆಯನ್ನು ರಚಿಸಲಾಗುತ್ತದೆʼ ಎಂದು ಈ ತಂತ್ರಜ್ಞಾನದ ಪರಿಣತರೊಬ್ಬರು ವಿವರಿಸುತ್ತಾರೆ.
ಮನೆ ಖರೀದಿದಾರರಿಗೆ ಹೇಗೆ ಸಹಕಾರಿ?
ಮನೆ ಹುಡುಕುತ್ತಿರುವವರು ಹೆಚ್ಚು ಸಮರ್ಥವಾದ ನಿರ್ಧಾರ ಕೈಗೊಳ್ಳಲು ಈ ತಂತ್ರಜ್ಞಾನ ಮತ್ತು ಅದು ಒದಗಿಸುವ ದತ್ತಾಂಶವು ಸಾಕಷ್ಟು ಸಹಾಯ ಮಾಡುತ್ತದೆ. ಸರಳವಾಗಿ ಹೇಳುವುದಾದರೆ, ಮನೆ ಇರುವ ಜಾಗವನ್ನು ನಕ್ಷೆಯಲ್ಲಿ ಗುರುತಿಸಲು ಖರೀದಿದಾರರಿಗೆ ಸಾಧ್ಯವಾಗುತ್ತದೆ ಮತ್ತು ಸುತ್ತಲಿನ ಪ್ರದೇಶದಲ್ಲಿ ಶಾಲೆ, ಆಸ್ಪತ್ರೆ, ಮೆಟ್ರೋ ನಿಲ್ದಾಣ, ರೈಲು ನಿಲ್ದಾಣ ಇತ್ಯಾದಿಗಳನ್ನು ಒಳಗೊಂಡಿರುವ ಸಾಮಾಜಿಕ ಮತ್ತು ಸಾರಿಗೆ ಮೂಲಸೌಕರ್ಯಗಳ ಲಭ್ಯತೆಯನ್ನು ಅರಿಯಲು ನೆರವಾಗುತ್ತದೆ.
ಇನ್ನೂ ಮುಂದುವರಿದು, ಬೆಂಗಳೂರಲ್ಲಿ ಈಚೆಗೆ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಸಾಕಷ್ಟು ಜನರು, ತಾವು ಮನೆ ಕೊಳ್ಳುವ ಮೊದಲು ಈ ಪ್ರದೇಶದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಿತ್ತು ಎಂದುಕೊಂಡಿರುತ್ತಾರೆ. ಇಂತಹ ಸಮಸ್ಯೆಗಳಿಗೆ ಈ ತಂತ್ರಜ್ಞಾನ ಅತ್ಯುತ್ತಮ ಪರಿಹಾರವಾಗಿದೆ ಎಂಬುದು ತಜ್ಞರ ವಿಶ್ವಾಸ.
ನಿಯಮ ಏನು ಹೇಳುತ್ತದೆ?
ಈ ತಂತ್ರಜ್ಞಾನವನ್ನು ವಿಸ್ತರಿಸಲು ಮತ್ತು ಜನಪ್ರಿಯಗೊಳಿಸಲು ನೀತಿ ನಿರೂಪಣೆ ಮಟ್ಟದಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಪರಿಣತರ ಒತ್ತಾಸೆ. ಸಾಮಾನ್ಯರಿಗೆ ಹೆಚ್ಚಿನ ಪ್ರಮಾಣದ ದತ್ತಾಂಶ ಲಭ್ಯವಿಲ್ಲ. ಸರ್ಕಾರಿ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಿಗೆ ಈ ದತ್ತಾಂಶ ದೊಡ್ಡ ಪ್ರಮಾಣದಲ್ಲಿ ಲಭ್ಯವಿದೆ. ಇಂಥ ಸಂದರ್ಭದಲ್ಲಿ ಅದು ಸಾಮಾನ್ಯ ಮನೆ ಖರೀದಿದಾರರ ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ ಎಲ್ಲರಿಗೂ ದತ್ತಾಂಶ ಲಭ್ಯವಾಗುವಂತಹ ಸರಳ ಪ್ರಕ್ರಿಯೆಯನ್ನು ರೂಪಿಸಬೇಕು ಎನ್ನುವುದು ಅವರ ವಾದ.
ಇತ್ತೀಚೆಗೆ ನಡೆದ ಸಮ್ಮೇಳನವೊಂದರಲ್ಲಿ ಜಿಯೋಸ್ಪೇಷಿಯಲ್ ತಂತ್ರಜ್ಞಾನದ ಮಹತ್ವದ ಬಗೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೆಚ್ಚು ಒತ್ತು ನೀಡಿದ್ದಾರೆ.
ಈ ತಂತ್ರಜ್ಞಾನದಲ್ಲಿ ಇನ್ನೂ ಸಾಕಷ್ಟು ಸಂಶೋಧನೆ-ಅಭಿವೃದ್ಧಿ ಆಗಬೇಕಿದೆ ಮತ್ತು ಹೆಚ್ಚಿನ ಹೂಡಿಕೆಯೂ ಬರಬೇಕಿದೆ ಎಂಬುದು ತಜ್ಞರ ಆಶಯ.