21.2 C
Bengaluru
Monday, July 8, 2024

ಜಿ-20ಯ ಇಂಧನ ಕಾರ್ಯಕಾರಿ ಸಭೆ: ಸೋಲಾರ್ ಗಾಗಿ ಹೆಚ್ಚು ಜಮೀನು ಉಪಯೋಗ ಸಾಧ್ಯತೆ.

ಧ್ಯೇಯ:”ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ “ಈ ಕ್ಷೇತ್ರದಲ್ಲಿ ಇಂಧನ ದಕ್ಷತೆ ಮತ್ತು ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದನ್ನು ಮತ್ತಷ್ಟು ಉತ್ತೇಜಿಸಲು ಭಾರತವು ಇಂಡೋನೇಷ್ಯಾ-ಮಲೇಷ್ಯಾ-ಥೈಲ್ಯಾಂಡ್ ಬೆಳವಣಿಗೆಯ ತ್ರಿಕೋನ ಜಂಟಿ ವ್ಯಾಪಾರ ಮಂಡಳಿಯೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿತು.ಮುಂದಿನ ಇಟಿಡಬ್ಲ್ಯೂಜಿ ಸಭೆಯನ್ನು ಏಪ್ರಿಲ್ ಆರಂಭದಲ್ಲಿ ಗಾಂಧಿನಗರದಲ್ಲಿ ನಿಗದಿಪಡಿಸಲಾಗಿದೆ.

ಮೊದಲ ಜಿ-20 ಇಂಧನ ಪರಿವರ್ತನಾ ಕಾರ್ಯಕಾರಿ ಗುಂಪಿನ ಎರಡು ದಿನಗಳ ಚರ್ಚೆ ಇಂದು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.ಎರಡನೇ ದಿನದ ಕಾರ್ಯಕಲಾಪದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಇಂಧನ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್, ಸದಸ್ಯ ರಾಷ್ಟ್ರಗಳು ಇಂಧನ ಭದ್ರತೆ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳ ಅಗತ್ಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿವೆ ಎಂದು ತಿಳಿಸಿದರು. ಆದಾಗ್ಯೂ, ಈ ಕಾರ್ಯಕಲಾಪದಲ್ಲಿ ಭಾಗವಹಿಸಿದ ಪ್ರತಿನಿಧಿಗಳು ಪ್ರತಿ ದೇಶಕ್ಕೆ ಅದರ ಶಕ್ತಿಯ ನೆಲೆ ಮತ್ತು ಸಾಮರ್ಥ್ಯವನ್ನು ಅವಲಂಬಿಸಿ ಶಕ್ತಿ ಪರಿವರ್ತನೆಯ ಮಾರ್ಗವು ವಿಭಿನ್ನವಾಗಿರಬೇಕು ಎಂಬ ಅಭಿಪ್ರಾಯವನ್ನು ಹಂಚಿಕೊಂಡರು. ನವೀಕರಿಸಬಹುದಾದ ಇಂಧನದ ಬಳಕೆಯನ್ನು ಹೆಚ್ಚಿಸಲು ಮುಂದಿನ 15 ರಿಂದ 20 ವರ್ಷಗಳಲ್ಲಿ ಹೆಚ್ಚಿನ ದೇಶಗಳಲ್ಲಿ ಪಳೆಯುಳಿಕೆ ಇಂಧನಗಳನ್ನು ಹೆಚ್ಚು-ಹೆಚ್ಚಾಗಿ ಬಳಸುವುದನ್ನು ಮುಂದುವರಿಸಲಾಗುವುದು ಎಂಬ ಸ್ಪಷ್ಟ ತಿಳುವಳಿಕೆ ಮೂಡಿದೆ ಎಂದು ಅವರು ಹೇಳಿದರು.

“ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ ನ” ಅಡಿಯಲ್ಲಿ ಭಾರತದಂತಹ ಗ್ರಿಡ್ ಅಂತರ-ಸಂಪರ್ಕಗಳು ಹೆಚ್ಚಿನ ಶೇಖರಣಾ ಸಾಮರ್ಥ್ಯವಿಲ್ಲದೆ ಸದಸ್ಯ ರಾಷ್ಟ್ರಗಳಲ್ಲಿ ಲಭ್ಯವಿರುವ ಇಂಧನ ಮೂಲಗಳ ಉತ್ತಮ ಬಳಕೆಗೆ ಕಾರಣವಾಗಬಹುದು ಎಂದು ಇಂಧನ ಕಾರ್ಯದರ್ಶಿ ಹೇಳಿದರು. ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯು ತ್ವರಿತ ರೀತಿಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕೆಗಳ ಇಂಧನ ದಕ್ಷತೆಯ ಮೇಲೆ ಹೆಚ್ಚು ಗಮನ ಹರಿಸುವ ಅಗತ್ಯವನ್ನು ಚರ್ಚೆಗಳು ಒತ್ತಿಹೇಳಿದವು.

ಶುದ್ಧ ಇಂಧನಕ್ಕೆ ಸಾರ್ವತ್ರಿಕ ಪ್ರವೇಶ ಕುರಿತ ಅಧಿವೇಶನದ ಬಗ್ಗೆ ಮಾತನಾಡಿದ ಶ್ರೀ ಅಲೋಕ್ ಕುಮಾರ್ ಅವರು, ಇಂಧನ ಬೆಲೆಗಳನ್ನು ನಿರ್ವಹಿಸುವ ಅಗತ್ಯ ಮತ್ತು ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಕೈಗೆಟುಕುವಂತೆ ಇಂಧನ ಲಭ್ಯವಾಗುವ ತಂತ್ರಜ್ಞಾನದ ಆಯ್ಕೆಯ ಅಗತ್ಯವನ್ನು ಚರ್ಚೆಗಳು ಒತ್ತಿಹೇಳಿವೆ ಎಂದರು. ಸದಸ್ಯ ರಾಷ್ಟ್ರಗಳು ಜನ-ಕೇಂದ್ರಿತ ಇಂಧನ ಪರಿವರ್ತನೆ ಕಾರ್ಯವಿಧಾನಕ್ಕೆ ಒಲವು ತೋರಿವೆ ಎಂದು ಅವರು ಹೇಳಿದರು.

ಪ್ರತಿನಿಧಿಗಳು ಸೌಭಾಗ್ಯ, ಉಜಾಲಾ ಮತ್ತು ಉಜ್ವಲ ಇಂಧನ ಯೋಜನೆಗಳ ಮಿಷನ್ ಮೋಡ್ ಅನುಷ್ಠಾನಕ್ಕಾಗಿ ಭಾರತವನ್ನು ಶ್ಲಾಘಿಸಿದರು. ಇದು ವಿದ್ಯುತ್, ಶುದ್ಧ ಅಡುಗೆ ಮತ್ತು ದಕ್ಷ ಬೆಳಕಿನ ಸಂಪೂರ್ಣ ಲಭ್ಯತೆಗೆ ಕಾರಣವಾಗಿದೆ.ಮುಂದಿನ ಇಟಿಡಬ್ಲ್ಯೂಜಿ ಸಭೆಯನ್ನು ಏಪ್ರಿಲ್ ಮೊದಲ ವಾರದಲ್ಲಿ ಗುಜರಾತ್ ನ ಗಾಂಧಿನಗರದಲ್ಲಿ ನಿಗದಿಪಡಿಸಲಾಗಿದೆ ಎಂದು ಇಂಧನ ಕಾರ್ಯದರ್ಶಿ ಮಾಹಿತಿ ನೀಡಿದರು.

ಈ ವಿಷಯದಲ್ಲಿ ಇಂಧನ ದಕ್ಷತೆ ಮತ್ತು ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದನ್ನು ಮತ್ತಷ್ಟು ಉತ್ತೇಜಿಸಲು ಭಾರತವು ಇಂಡೋನೇಷ್ಯಾ-ಮಲೇಷ್ಯಾ-ಥೈಲ್ಯಾಂಡ್ ಬೆಳವಣಿಗೆ ತ್ರಿಕೋನ ಜಂಟಿ ವ್ಯವಹಾರ ಮಂಡಳಿ ಯೊಂದಿಗೆ (ಐಎಂಟಿ-ಜಿಟಿ ಜೆಬಿಸಿ) ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ. ಇಂಧನ ಸಚಿವಾಲಯದ ಅಡಿಯಲ್ಲಿ ಬರುವ ಸಾರ್ವಜನಿಕ ವಲಯದ ಉದ್ಯಮವಾದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಭಾರತ ಇಂಧನ ಸಪ್ತಾಹ ಆಚರಣೆಯ ಸಂದರ್ಭದಲ್ಲಿ ಐಎಂಟಿ-ಜಿಟಿ ಜೆಬಿಸಿ ಮಲೇಷ್ಯಾದೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ.

ಈ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಿ, ಇಇಎಸ್ಎಲ್ ತನ್ನ ಪೋರ್ಟ್ಫೋಲಿಯೊದಿಂದ ಆಯ್ದ ಇಂಧನ ದಕ್ಷತೆಯ ಕಾರ್ಯಕ್ರಮಗಳನ್ನು ಯಶಸ್ವಿ ಅನುಷ್ಠಾನದ ಸಾಬೀತಾದ ದಾಖಲೆಗಳೊಂದಿಗೆ ಕಾರ್ಯಗತಗೊಳಿಸಲು ತಾಂತ್ರಿಕ ಸಲಹೆ, ಯೋಜನಾ ನಿರ್ವಹಣಾ ಬೆಂಬಲ, ಒಪ್ಪಂದ ಮತ್ತು ಅನುಷ್ಠಾನ ಬೆಂಬಲವನ್ನು ಒದಗಿಸುತ್ತದೆ.ಪ್ರತಿನಿಧಿಗಳನ್ನು ಇಂದು ನಗರದ ಇನ್ಫೋಸಿಸ್ ಗ್ರೀನ್ ಬಿಲ್ಡಿಂಗ್ಸ್ ಕ್ಯಾಂಪಸ್ ಗೆ ಕರೆದೊಯ್ಯಲಾಯಿತು. ನಾಳೆ ಪಾವಗಡ ಸೋಲಾರ್ ಪ್ಲಾಂಟ್ ಭೇಟಿಗೆ ಅವರನ್ನು ಕರೆದೊಯ್ಯಲಾಗುವುದು.

ಕೇಂದ್ರ ಇಂಧನ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ.ಸಿಂಗ್ ಅವರ ಪ್ರಮುಖ ಟಿಪ್ಪಣಿ ಭಾಷಣದೊಂದಿಗೆ ಮೂರು ದಿನಗಳ ಕಾರ್ಯಕ್ರಮ ನಿನ್ನೆ ಪ್ರಾರಂಭವಾಯಿತು. ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (ಯುಎನ್ಇಪಿ) ಮತ್ತು ಇತರ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲದೆ ಜಿ-20 ದೇಶಗಳು ಮತ್ತು ಒಂಬತ್ತು ವಿಶೇಷ ಆಹ್ವಾನಿತ ಅತಿಥಿ ದೇಶಗಳು ಸೇರಿದಂತೆ 150ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related News

spot_img

Revenue Alerts

spot_img

News

spot_img