ನಕಲಿ ದಾಖಲೆಗಳನ್ನು ಸಲ್ಲಿಸಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ರೆರಾ) ಪ್ರಮಾಣಪತ್ರ ಪಡೆದು ಮನೆ ಖರೀದಿದಾರರಿಗೆ ವಂಚಿಸಿದ ಆರೋಪದ ಮೇಲೆ ಮುಂಬೈನ ಕಲ್ಯಾಣ್-ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಪ್ರದೇಶದ 65 ಬಿಲ್ಡರ್‌ಗಳ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.
ಜಾರಿ ನಿರ್ದೇಶನಾಲಯವು ಕೆಲವು ದಿನಗಳಿಂದ ಬಿಲ್ಡರ್‌ಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದೆ. ಹೆಚ್ಚಾಗಿ ಸ್ಥಳೀಯರೇ ಆಗಿರುವ ಡೆವಲಪರ್ಗಳು, ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿ, ನಕಲಿ ಪರವಾನಗಿಗಳ ದಾಖಲೆಗಳನ್ನು ಸಿದ್ಧಪಡಿಸಿ, ರೇರಾ ಪ್ರಮಾಣ ಪತ್ರಗಳನ್ನು ಪಡೆದು ಫ್ಲಾಟ್ಗಳನ್ನು ಮಾರಾಟ ಮಾಡಿದ್ದಾರೆ. ಫ್ಲಾಟ್‌ಗಳನ್ನು ಮಾರಾಟ ಮಾಡಲು ಈ ಪ್ರಮಾಣಪತ್ರ ಅಗತ್ಯ. ಬಿಲ್ಡರ್‌ಗಳು ಕೆಡಿಎಂಸಿ ಮತ್ತು ಸಂಬಂಧಿಸಿದ ಇತರ ಇಲಾಖೆಗಳಿಂದ ಕಟ್ಟಡ ನಿರ್ಮಾಣ ಅನುಮತಿಯನ್ನೇ ತೆಗೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ. ವಂಚನೆಗೆ ಸಂಬಂಧಿಸಿದಂತೆ ಕೆಡಿಎಂಸಿ ಎರಡು ಪೊಲೀಸ್ ಪ್ರಕರಣಗಳನ್ನು ದಾಖಲಿಸಿದೆ.
ಹಣದ ಬೆನ್ನು ಹತ್ತಿದ ಇ.ಡಿ
ನಕಲಿ ದಾಖಲೆ ಸೃಷ್ಟಿಸಿ ರೆರಾ ಪ್ರಮಾಣಪತ್ರ ಪಡೆದು ವಂಚಿಸಿದ ಆರೋಪ ಎದುರಿಸುತ್ತಿರುವ ಕೆಡಿಎಂಸಿ ಪ್ರದೇಶದ 65 ಡೆವಲಪರ್ಗಳು ಮನೆ ಖರೀದಿದಾರರಿಂದ ಸಂಗ್ರಹಿಸಿದ ಹಣದ ಜಾಡು ಹಿಡಿದು ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ.
ಅಕ್ರಮ ಕಟ್ಟಡ ನಿರ್ಮಾಣಕ್ಕೆ ಹೂಡಿಕೆಯಾದ ಹಣದ ಮೂಲವನ್ನೂ ಇ.ಡಿ ಹುಡುಕುತ್ತಿದೆ. ಕಟ್ಟಡ ನಿರ್ಮಾಣ ಪರವಾನಗಿ ನೀಡುವ ಪ್ರಕ್ರಿಯೆ ಮತ್ತು ರೆರಾ ನೋಂದಣಿ ಕುರಿತು ಅರಿತುಕೊಳ್ಳಲು ಕೆಡಿಎಂಸಿ ಮತ್ತು ಮಹಾರಾಷ್ಟ್ರ ರೆರಾ ಅಧಿಕಾರಿಗಳ ಹೇಳಿಕೆಯನ್ನೂ ಅಧಿಕೃತವಾಗಿ ದಾಖಲಿಸಿಕೊಳ್ಳುತ್ತಿದೆ.
ಡೊಂಬಿವಿಲಿ ಪೊಲೀಸ್ ಠಾಣೆಯಲ್ಲಿ ಕೆಡಿಎಂಸಿ ದಾಖಲಿಸಿದ ದೂರಿನ ಆಧಾರದಲ್ಲಿ ವಿಶೇಷ ತನಿಖಾ ತಂಡವನ್ನೂ (ಎಸ್ಐಟಿ) ರಚಿಸಲಾಗಿದೆ. ವಂಚನೆಯ ಕುರಿತು ಇ.ಡಿ ಸೇರಿದಂತೆ ಎಲ್ಲ ಸಂಸ್ಥೆಗಳಿಗೆ ಎಸ್ಐಟಿ ಮಾಹಿತಿ ನೀಡಿತ್ತು ಮತ್ತು ತನಿಖೆಯ ಭಾಗವಾಗಿ ಬಿಲ್ಡರ್ಗಳನ್ನೂ ಸೇರಿದಂತೆ ಹತ್ತು ಜನರನ್ನು ಬಂಧಿಸಿತ್ತು.
ಇಂತಹ ವಂಚನೆಗಳನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚಿನ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಎಲ್ಲಾ ಸ್ಥಳೀಯ ಆಡಳಿತಗಳು ಕಟ್ಟಡ ನಿರ್ಮಾಣ ಪ್ರಕ್ರಿಯೆಯ ಪ್ರಮುಖ ಅನುಮೋದನೆಗಳನ್ನು ಆನ್ಲೈನ್ನಲ್ಲಿ ನೀಡುವಂತೆ ಆಗಬೇಕು ಎಂದು ಮಹಾರಾಷ್ಟ್ರ ರೆರಾ ವಿಭಾಗವು ಅಲ್ಲಿನ ನಗರಾಭಿವೃದ್ಧಿ ಇಲಾಖೆಗೆ ವಿನಂತಿಸಿದೆ.
ಮಹಾರಾಷ್ಟ್ರ ರೆರಾದ ಅಧ್ಯಕ್ಷ ಅಜೋಯ್ ಮೆಹ್ತಾ ಅವರು, ʻಸಂಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ ವ್ಯವಸ್ಥೆ ಅಡಿ ತರುವ ವರೆಗೆ ಯೋಜನೆಗಳ ನೋಂದಣಿಗಾಗಿ ಆಫ್ಲೈನ್ ಪ್ರಕ್ರಿಯೆಗಳ ಜೊತೆಗೆ ಎಲ್ಲಾ ಪುರಸಭೆಗಳು ತಮ್ಮ ಅಧಿಕೃತ ಇ-ಮೇಲ್ ವಿಳಾಸದ ಮೂಲಕವೇ ಕಟ್ಟಡಕ್ಕೆ ಮಂಜೂರು ಮಾಡಿದ ಅನುಮತಿಗಳನ್ನು ಕಳುಹಿಸುವಂತಾಗಬೇಕುʼ ಎಂದೂ ಸರ್ಕಾರಕ್ಕೆ ತಿಳಿಸಿದ್ದಾರೆ.
ಪ್ರಸ್ತುತ, ಮುಂಬೈ ಮತ್ತು ಪುಣೆ ಮಹಾನಗರ ಪಾಲಿಕೆ ಸೇರಿದಂತೆ ಕೆಲವು ಸ್ಥಳೀಯ ಆಡಳಿತಗಳು ಮಾತ್ರ ಕಟ್ಟಡ ನಿರ್ಮಾಣ ಪರವಾನಗಿಯನ್ನು ಆನ್ಲೈನ್ ಮೂಲಕ ನೀಡುವ ವ್ಯವಸ್ಥೆಯನ್ನು ಹೊಂದಿವೆ.
ʻಬಿಲ್ಡರ್ಗಳು ನೀಡುವ ಪ್ರಮಾಣೀಕೃತ ಪ್ರತಿಗಳನ್ನು ಆಧರಿಸಿ ನಾವು ನೋಂದಣಿ ಪ್ರಮಾಣಪತ್ರಗಳನ್ನು ಜಾರಿ ಮಾಡುತ್ತೇವೆ. ಆ ದಾಖಲೆಗಳು ನಿಜವೇ ಎಂದು ಪರಿಶೀಲಿಸಲು ಯಾವುದೇ ಕಾರ್ಯವಿಧಾನವಿಲ್ಲʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.