ಬೆಂಗಳೂರು, ಆ. 18 : ಮನೆಯನ್ನು ನಿರ್ಮಿಸುವ ಮುನ್ನ ಮೊದಲು ವಾಸ್ತು ಪ್ರಕಾರ ಮನೆಯ ಮುಖ್ಯದ್ವಾರ ಯಾವ ದಿಕ್ಕಿನಲ್ಲಿ ಬರಬೇಕು ಎಂಬುದನ್ನು ನೋಡುತ್ತೇವೆ. ಆದರೆ ಕೆಲವೊಮ್ಮೆ ಮನೆ ಕಟ್ಟುವ ಸ್ಥಳ ಹೆಂಡತಿಯ ಹೆಸರಿನಲ್ಲೋ ಇಲ್ಲ ಮಕ್ಕಳ ಹೆಸರಿನಲ್ಲೋ ಇರುತ್ತದೆ. ಆದರೆ, ಮನೆಯ ಯಜಮಾನ ನಿರ್ಮಾಣ ಮಾಡುತ್ತಾರೆ. ಹೀಗಿರುವಾಗ ಯಾರ ರಾಶಿಗೆ ವಾಸ್ತುವನ್ನು ನೋಡಬೇಕು ಎಂಬ ಗೊಂದಲ ಇದ್ದೇ ಇರುತ್ತದೆ. ವಾಸ್ತು ನೋಡುವಾಗ ಜನ್ಮ ರಾಶಿ, ನಾಮ ರಾಶಿಯನ್ನು ನೋಡಿ ಅವರಿಗೆ ಶುಭ ದಿಕ್ಕನ್ನು ನೋಡಬೇಕಾಗುತ್ತದೆ ಎಂದು ಡಾ. ರೇವತಿ ವೀ ಕುಮಾರ್ ಅವರು ಹೇಳುತ್ತಾರೆ.
ಆಸ್ತಿ ಯಾರ ಹೆಸರಿನಲ್ಲಿದೆ ಎಂಬುದನ್ನು ಕೂಡ ನೋಡಬೇಕಾಗುತ್ತದೆ. ಅದರ ಜೊತೆಗೆ ಮನೆಯ ಯಜಮಾನನ ರಾಶಿಯನ್ನು ನೋಡಿ, ಇಬ್ಬರಿಗೂ ಅನುಕೂಲವಾಗುವಂತೆ ವಾಸ್ತುವನ್ನು ನೋಡಬೇಕು. ಸಾಮಾನ್ಯವಾಗಿ ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಜನ ಇರುವುದರಿಂದ ಸಾಮಾನ್ಯವಾಗಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿದ್ದರೆ ಒಳ್ಳೆಯದು. ಮನೆಯ ಯಜಮಾನ, ಅಥವಾ ಒಡತಿಗೆ ದಕ್ಷಿಣ ಅಥವಾ ಪಶ್ಚಿಮದಲ್ಲಿ ಮುಖ್ಯ ದ್ವಾರವಿದ್ದರೆ ಒಳ್ಳೆಯದು ಎಂದು ಇದ್ದರೂ ಕೂಡ ಮನೆಯ ಇತರ ಸದಸ್ಯರನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ಜನ ಪೂರ್ವ ಮತ್ತು ಉತ್ತರ ದಿಕ್ಕನ್ನೇ ಪರಿಗಣಿಸುತ್ತಾರೆ.
ಆದರೆ ವಾಸ್ತುವಿನಲ್ಲಿ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲೂ ಮುಖ್ಯದ್ವಾರ ವಿದ್ದರೂ ಪರವಾಗಿಲ್ಲ. ಕೆಲವು ರಾಶಿಗಳಿಗೆ ಈ ದಿಕ್ಕುಗಳಲ್ಲಿ ಮನೆಯ ಮುಖ್ಯದ್ವಾರವಿದ್ದರೆ, ಬಹಳಷ್ಟು ಒಳ್ಳೆಯದಾಗುತ್ತದೆ. ಆದರೆ ಮನೆಯೂ ಸಂಪೂರ್ಣವಾಗಿ ವಾಸ್ತು ಪ್ರಕಾರ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಇನ್ನು ಮನೆಯನ್ನು ಯಾರು ಕಟ್ಟುತ್ತಿದ್ದಾರೆ, ಯಾರ ಹೆಸರಲ್ಲಿ ಮನೆ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಬ್ಬರಿಗೂ ಅನೂಕೂಲವಾಗುವಂತೆ ನಿವೇಶನವನ್ನು ಕಟ್ಟುವುದು ಒಳ್ಳೆಯದು. ಆಗ ಮನೆಯಲ್ಲಿ ನೆಮ್ಮದಿ ಶಾಂತಿ ಉಳಿಯಲು ಸಹಾಯವಾಗುತ್ತದೆ.
ಇನ್ನು ಮನೆಯನ್ನು ತಂದೆಯೇ ಖರೀದಿಸಿದ್ದರೂ ವಯಸ್ಸಾಯಿತು ಎಂಬ ಕಾರಣಕ್ಕೋ ಅಥವಾ ಇನ್ನಿತರ ಕಾರಣಗಳಿಂದಾಗಿ ಮನೆಯ ಒಡೆಯ ಮಗನಾಗಿರುತ್ತಾನೆ. ಆಗ ಮನೆಯನ್ನು ನಿರ್ಮಿಸಬೇಕಾಗಿರುವುದು ಮಗನ ರಾಶಿ, ಹೆಸರ ಮೇಲೆ ವಾಸ್ತುವನ್ನು ಪರಿಗಣಿಸಬೇಕಾಗುತ್ತದೆ. ಮನೆಯಲ್ಲಿ ಮಗನ ಆಳ್ವಿಕೆ ಅಥವಾ ಯಜಮಾನನಾಗಿರುವುದರಿಂದ ಅವರ ಏಳಿಗೆಗೆ ವಾಸ್ತುವನ್ನು ಮಗನ ಹೆಸರಿನ ಪ್ರಕಾರ ನೋಡಿ, ಸಂಪೂರ್ಣ ಮನೆಯನ್ನು ನಿರ್ಮಿಸಬೇಕಾಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳಿದ್ದಾರೆ.