27.4 C
Bengaluru
Monday, July 8, 2024

ಮನೆಯಲ್ಲಿ ನೀರಿನ ಕಾರಂಜಿ ನಿರ್ಮಾಣದಿಂದ ಅದೃಷ್ಟಲಕ್ಷ್ಮಿಯ ಪ್ರವೇಶ

ನೀರಿನ ಕಾರಂಜಿಗಳು ಕ್ಷಣ ಮಾತ್ರದಲ್ಲಿ ಮನಸ್ಸನ್ನು ಸೆಳೆದು ಬಿಡುತ್ತವೆ. ಇವು ಜುಳು ಜುಳು ಸದ್ದಿನ ಜೊತೆಗೆ ಸುತ್ತಲಿನ ಪರಿಸರದಲ್ಲಿ ಶಾಂತ, ಆಹ್ಲಾದಕರ ವಾತಾವರಣವನ್ನು ಕಟ್ಟಿಕೊಡುತ್ತದೆ. ಈಗ ಒಳಾಂಗಣ ವಿನ್ಯಾಸದಲ್ಲೂ ಕಾರಂಜಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಾಸ್ತು ಹಾಗೂ ವಿನ್ಯಾಸ ಎರಡರಲ್ಲೂ ಉತ್ತಮ ಎನ್ನಲಾಗಿದೆ. ಮನೆಯ ವಿನ್ಯಾಸ ಮಾಡುವಾಗ ಕೆಲವರು ಮನೆಯೊಳಗೆ ಅಥವಾ ಮನೆಯ ಹೊರಭಾಗದಲ್ಲಿ, ಆಫೀಸ್‌ ಜಾಗದಲ್ಲಿ ಕಾರಂಜಿ ನಿರ್ಮಾಣಕ್ಕೆ ಒತ್ತು ಕೊಡುತ್ತಿದ್ದಾರೆ. ಕಾರಂಜಿಗಳು ಪಾಸಿಟಿವ್‌ ಎನರ್ಜಿ ತುಂಬುವುದೇ ಇದಕ್ಕೆ ಕಾರಣ. ಆದರೆ ಕಾರಂಜಿಗೂ ವಾಸ್ತುಗೂ ಸಂಬಂಧವಿರುವುದರಿಂದ ನಿರ್ಮಾಣ ಮಾಡುವ ಮೊದಲು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಾಣ ಮಾಡಿದರೆ, ಸಂಪತ್ತು, ಅದೃಷ್ಟ ಹಾಗೂ ಕೈಹಿಡಿದ ಕೆಲಸಗಳೆಲ್ಲ ಸರಾಗವಾಗಿ ಮುಂದುವರಿಯುತ್ತವೆ.

ಮನೆಯಲ್ಲಿ ಕಾರಂಜಿ ಎಲ್ಲಿರಬೇಕು?
ವಾಸ್ತುಶಾಸ್ತ್ರದಲ್ಲಿ ಹರಿಯುವ ನೀರು, ಹಣ, ಸಂಪತ್ತು ಹಾಗೂ ಸಂತೋಷ ವೃದ್ಧಿಯ ಸಂಕೇತ ಎಂದು ಪರಿಗಣಿಸಲಾಗಿದೆ. ಹಾಗಾಗಿ ಮನೆಯ ಒಳಗಿರುವ ಕಾರಂಜಿಯನ್ನು ಅದೃಷ್ಟ ಲಕ್ಷ್ಮಿ ಎಂದಿದ್ದಾರೆ. ಕಾರಂಜಿಯನ್ನು ಮನೆಯ ಬಲಮೂಲದಲ್ಲಿ ಇರಿಸಿದರೆ ಅದೃಷ್ಟ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಮನೆಯ ಮುಖ್ಯ ದ್ವಾರದ ಬಳಿ ಕಾರಂಜಿ ನಿರ್ಮಾಣ ಮಾಡಿದರೆ ಇದು ಮನೆಯೊಳಗೆ ಪ್ರವೇಶಿಸುವ ನೆಗೆಟೀವ್‌ ಎನರ್ಜಿಗಳನ್ನು ಪ್ರವೇಶದಲ್ಲಿಯೇ ತಡೆಯುತ್ತವೆ. ಹಾಗೇ ಕಾರಂಜಿಗೆ ಯಾವಾಗಲೂ ಶುಭ್ರ ನೀರನ್ನೇ ಬಳಕೆ ಮಾಡುವುದು ಉತ್ತಮ.

ಇದು ಒಳಾಂಗಣ ವಿನ್ಯಾಸದ ಸೊಬಗನ್ನು ಹೆಚ್ಚುಗೊಳಿಸುವುದಲ್ಲದೇ ಆಸ್ತಿ ವೃದ್ಧಿಗೂ ಕಾರಣವಾಗಬಹುದು. ಕಾರಂಜಿಯಲ್ಲಿ ನೀರು ಜಿನುಗುವ ಸದ್ದು ಮನೆಯ ಸದಸ್ಯರ ಆಲಸ್ಯವನ್ನು ದೂರ ಮಾಡಿ, ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುವಂತೆ ಮಾಡಿ ಸುತ್ತಮುತ್ತ ಹಿತಕರ ವಾತಾವರಣವನ್ನು ಸೃಷ್ಟಿ ಮಾಡುತ್ತದೆ ಎಂಬುದನ್ನಂತೂ ತಳ್ಳಿ ಹಾಕುವಂತಿಲ್ಲ.

ಮನೆಯೊಳಗೆ ಕಾರಂಜಿ ನಿರ್ಮಾಣ ಮಾಡುವಾಗ ಕೆಲವೊಂದು ಸಂಗತಿಗಳು ಮುಖ್ಯವಾಗುತ್ತವೆ. ಬೆಡ್‌ರೂಮ್‌ಗಳಲ್ಲಿ ಕಾರಂಜಿ ನಿರ್ಮಾಣ ಶುಭದಾಯಕವಲ್ಲ. ಮನೆಯ ದಕ್ಷಿಣ, ಆಗ್ನೇಯ ಭಾಗದಲ್ಲೂ ಕಾರಂಜಿ ಇರಬಾರದು ಎಂಬುದು ವಾಸ್ತು ತಜ್ಞರ ಮಾತು.

ಕಾರಂಜಿ ವಿನ್ಯಾಸ
ಮನೆ ಪ್ರಶಾಂತವಾಗಿ, ವಿಶ್ರಾಂತಿ ಪಡೆಯುವಂತಿರಬೇಕು ಎಂದು ಬಯಸುವವರು ಮನೆಯೊಳಗೆ ಕಾರಂಜಿ ನಿರ್ಮಾಣವನ್ನು ಪರಿಗಣಿಸಬಹುದು. ನೀರು ಜಿನುಗುವ ಅಥವಾ ಹರಿಯುವ ಶಬ್ದವು ಮನಸ್ಸಿಗೆ ಹಿತವೆನಿಸಿ ವಿಶ್ರಾಂತಿಯನ್ನು ಒದಗಿಸುತ್ತದೆ. ಒತ್ತಡದಿಂದ ಬಳಲುತ್ತಿದ್ದರೆ ಅದನ್ನು ದೂರ ಮಾಡುವ ಶಕ್ತಿ ಕಾರಂಜಿಗಿದೆ.

ಕಾರಂಜಿ ಅಂದರೆ ಆಳೆತ್ತರದ, ಎತ್ತರದ ಅಥವಾ ಅಗಲವಾದ ಜಾಗದಲ್ಲಿ ನಿರ್ಮಾಣ ಮಾಡಬೇಕೆಂದಿಲ್ಲ. ಈಗ ಆಮೆಜಾನ್‌ ಅಥವಾ ಇನ್ನಿತರ ಸೈಟ್‌ಗಳಲ್ಲಿ ಟೀಪಾಯಿ ಗಾತ್ರದ ಕಾರಂಜಿಯಿಂದ ಹಿಡಿದು ಗೋಡೆ ಗಾತ್ರದ ಕಾರಂಜಿಗಳು ಲಭ್ಯವಿವೆ. ಹಾಗೇ ವಿನ್ಯಾಸದಲ್ಲೂ ನಾನಾ ಬಗೆ ಲಭ್ಯವಿವೆ. ಸಾಫ್ಟ್‌ ಎಲ್‌ಇಡಿ ಬಲ್ಬ್‌ಗಳು, ಕಲರ್‌ಫುಲ್‌ ಲೈಟ್‌ಗಳು, ಸೆರಾಮಿಕ್‌ ಟೇಬಲ್‌ಟಾಪ್‌ ವಾಟರ್‌ ಫೌಂಟೇನ್‌ನ್ನೊಳಗೊಂಡ ವಿನ್ಯಾಸಗಳೂ ಇವೆ. ಬೆಲೆಗಳೂ ದುಬಾರಿಯಾಗಿಲ್ಲ.

Related News

spot_img

Revenue Alerts

spot_img

News

spot_img