26.9 C
Bengaluru
Friday, July 5, 2024

ರೂಪಾಯಿ ಮೌಲ್ಯ ಕುಸಿತ: ರಿಯಲ್‌ ಎಸ್ಟೇಟ್‌ ಕಡೆಗೆ ಅನಿವಾಸಿ ಭಾರತೀಯರ ಕಣ್ಣು

ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಕಾಣುತ್ತಿರುವುದು ಹಾಗೂ ಭಾರತೀಯ ವಸತಿ ಮಾರುಕಟ್ಟೆಯಲ್ಲಿನ ನಿರಂತರ ಏರಿಳಿತದಿಂದಾಗಿ ಅನಿವಾಸಿ ಭಾರತೀಯರು (NRI) ಹೈದರಾಬಾದ್‌ ರಿಯಲ್‌ ಎಸ್ಟೇಟ್‌ನಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ದೇಶಾದ್ಯಂತ ವಸತಿ ಹೂಡಿಕೆಗೆ ಹೈದರಾಬಾದ್‌ ಉನ್ನತ ಆಯ್ಕೆಯಾಗಿದೆ.

ಸಿಐಐ- ಅನಾರಾಕ್‌ ಕನ್ಸ್ಯೂಮರ್‌ ಸೆಂಟಿಮೆಂಟ್‌ ಸಮೀಕ್ಷೆಯ ಪ್ರಕಾರ, ವಸತಿ ಹೂಡಿಕೆಯ ವಿಷಯದಲ್ಲಿ ಹೈದರಾಬಾದ್‌, ನ್ಯಾಷನಲ್‌ ಕ್ಯಾಪಿಟಲ್‌ ರೀಜನ್‌ (NCR) ಹಾಗೂ ಬೆಂಗಳೂರು NRIಗಳ ಮುಖ್ಯ ಆಯ್ಕೆಯಾಗಿದೆ. ಆಶ್ಚರ್ಯ ಎಂದರೆ ಮುಂಬೈ ಮೆಟ್ರೊಪಾಲಿಟನ್‌ ಪ್ರದೇಶ (MMR) ಆಯ್ಕೆ ಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆದುಕೊಂಡಿದೆ. ಪ್ರತಿಕ್ರಿಯಿಸಿರುವ ಕನಿಷ್ಠ ಶೇ ೬೦ರಷ್ಟು NRIಗಳು ಮೊದಲ ಮೂರು ನಗರಗಳಲ್ಲಿ ಮನೆ ಕೊಳ್ಳಲು ಹೆಚ್ಚು ಆಸಕ್ತಿ ತೋರಿದ್ದಾರೆ. ಅದರಲ್ಲಿ ಶೇ 22 ರಷ್ಟು ಮಂದಿ ಹೈದರಾಬಾದ್‌, ಶೇ 20 ರಷ್ಟು ಮಂದಿ NCR ಹಾಗೂ ಶೇ 18 ರಷ್ಟು ಮಂದಿ ತಮ್ಮ ಆಯ್ಕೆ ಬೆಂಗಳೂರು ಎಂದಿದ್ದಾರೆ.

ಸಮೀಕ್ಷೆಯಲ್ಲಿ ಒಟ್ಟೂ 5500 ಮಂದಿ ಭಾಗವಹಿಸಿದ್ದರು. ಅದರಲ್ಲಿ ಶೇ 7 ರಷ್ಟು ಮಂದಿ ಅಮೆರಿಕ, ಕೆನಡಾ, ಗಲ್ಫ್‌, ಯುರೋಪ್‌ ಹಾಗೂ ಅನೇಕ ಏಷ್ಯ ದೇಶಗಳಲ್ಲಿ ವಾಸವಾಗಿದ್ದಾರೆ. ಹೆಚ್ಚಿನ NRIಗಳು ಷೇರು, ಮ್ಯೂಚುವಲ್‌ ಫಂಡ್‌, ಚಿನ್ನ, ಸ್ಥಿರ ಠೇವಣಿಗಳಿಗಿಂತ ಭಾರತೀಯ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ. ಅಲ್ಲದೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮೊದಲ ಒಂಭತ್ತು ತಿಂಗಳಲ್ಲಿ ವಸತಿ ಕ್ಷೇತ್ರದ ಬಗ್ಗೆ NRIಗಳ ಬೇಡಿಕೆ ಶೇ 15-20ರಷ್ಟು ಏರಿಕೆ ಕಂಡಿದೆ.

ʼಕೋವಿಡ್‌ 19 ಬಂದ ಮೇಲಂತೂ NRIಗಳು ಪರದೇಶಗಳಲ್ಲಿ ವಾಸಿಸುವ ಬಗ್ಗಿರುವ ಅನಿಶ್ಚಿತತೆಯ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ. ಹೀಗಾಗಿ ತಮ್ಮದೇ ದೇಶದಲ್ಲಿ ಸ್ವಂತ ಮನೆ ಹೊಂದುವುದು ಭಾರತೀಯರ ಆದ್ಯತೆ ಆಗುತ್ತಿದೆ. ಗೃಹ ಸಾಲದ ಬಡ್ಡಿ ದರಗಳು ಹಾಗೂ ಪ್ರಾಪರ್ಟಿ ಬೆಲೆಗಳು ಹೆಚ್ಚಿದ್ದರೂ ರೂಪಾಯಿ ಮೌಲ್ಯ ಕುಸಿಯುತ್ತಿರುವುದು NRIಗಳಿಗೆ ವಿಶೇಷ ಪ್ರಯೋಜನವಾಗಿದೆʼ ಎಂಬುದು ಅನಾರಾಕ್‌ ಗ್ರೂಪ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ನಿರ್ದೇಶಕರಾಗಿರುವ ಪ್ರಶಾಂತ್‌ ಠಾಕೂರ್‌ ಅವರ ಅಭಿಪ್ರಾಯ.

ಪ್ರತಿ ತ್ರೈಮಾಸಿಕದಲ್ಲಿ ಸರಾಸರಿಯಾಗಿ ಮಾರಾಟವಾದ ಮನೆಗಳಲ್ಲಿ 10-15 ಪ್ರತಿಶತದಷ್ಟು ಮನೆಗಳನ್ನು NRIಗಳೇ ಖರೀದಿಸಿದ್ದಾರೆ. ಕೋವಿಡ್‌ ಬಂದ ನಂತರದ ಕಾಲದಲ್ಲಿ ದೊಡ್ಡದಾದ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಗಮನಾರ್ಹ ಬೆಳವಣಿಗೆ. ಮನೆಯಲ್ಲಿ ಹೆಚ್ಚುವರಿ ಸ್ಥಳ ಇರಬೇಕೆಂಬ ಬಯಕೆ ಇಂದಿಗೂ ಮೊದಲ ಆಯ್ಕೆಯಾಗಿಯೇ ಉಳಿದಿದೆ. ಅನುಕೂಲಕರ ವಿನಿಮಯ ದರವು NRIಗಳಿಗೆ ದೊಡ್ಡ ದೊಡ್ಡ ಮನೆಗಳನ್ನು ಸುರಕ್ಷಿತಗೊಳಿಸಿಕೊಳ್ಳಲು ಪ್ರಮುಖ ಪ್ರೇರಣೆಯಾಗಿದೆ.

ಎಚ್‌1 2022ರ ಸಮೀಕ್ಷೆ ಪ್ರಕಾರ ಶೇ 77ರಷ್ಟು NRIಗಳು ದೊಡ್ಡ ಮನೆಯನ್ನು ಖರೀದಿಸುತ್ತಾರಂತೆ. ಶೇ 54ರಷ್ಟು ಮಂದಿ 3 ಬಿಎಚ್‌ಕೆ ಹಾಗೂ ಶೇ 23ರಷ್ಟು ಮಂದಿ 4ಬಿಎಚ್‌ಕೆ ಮನೆ ಕೊಳ್ಳಲು ಆಸಕ್ತಿ ಇರುವುದಾಗಿ ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನವರು 95 ಲಕ್ಷ ರೂಪಾಯಿಯಿಂದ 1.5ಕೋಟಿ ರೂಪಾಯಿ ಮೌಲ್ಯದ ಪ್ರೀಮಿಯಂ ಪ್ರಾಪರ್ಟಿಗಳನ್ನು ಕೊಳ್ಳುವ ಬಗ್ಗೆ ಆಸಕ್ತಿ ತೋರಿದ್ದಾರೆ. ಅನೇಕ NRIಗಳು ಭಾರತಕ್ಕೆ ವಾಪಸ್‌ ಆಗಿ ತಾವು ಖರೀದಿಸಿರುವ ಮನೆಗಳಲ್ಲಿ ವಾಸಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ ಹಾಗೂ ರಷ್ಯಾ ಯುದ್ಧದ ಬಳಿಕ ಅನೇಕ ದೇಶಗಳು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿವೆ. ಅದೃಷ್ಟವಶಾತ್‌ ಭಾರತದ ಆರ್ಥಿಕತೆ ಗಮನಾರ್ಹವಾಗಿ ಉತ್ತಮವಾಗಿದೆ ಎಂದೆನ್ನಬಹುದು.

Related News

spot_img

Revenue Alerts

spot_img

News

spot_img