28.2 C
Bengaluru
Wednesday, July 3, 2024

ನೋಂದಣಿ ಇಲ್ಲದೇ ರಿಯಲ್ ಎಸ್ಟೇಟ್ ವಹಿವಾಟು ನಡೆಸಿದ್ರೆ ಬೀಳುತ್ತೆ ದುಬಾರಿ ದಂಡ!

ಬೆಂಗಳೂರು, ಆ. 18 : ರಿಯಲ್ ಎಸ್ಟೇಟ್‌ ಬ್ರೋಕರ್ ಗಳು ಅಂದ್ರೆ ಸಾಕು ನಂಬಬೇಕೋ ಬೇಡವೋ ಎನ್ನುವ ಮಟ್ಟಿಗೆ ಭಯ. ಯಾಕೆಂದ್ರೆ ಸ್ವಲ್ಪ ಯಾಮಾರಿದ್ರೆ ಮೋಸ ಮಾಡುತ್ತಾರೆ. ಗೊತ್ತಿಲ್ಲದೇ ಹೆಚ್ಚು ಕಮೀಷನ್ ಪಡೆಯುತ್ತಾರೆ. ಇಲ್ಲವೇ ಏನಾದ್ರೂ ಬೋಗಸ್ ಮಾಡಿ ಟೋಪಿ ಹಾಕುತ್ತಾರೆ ಎನ್ನುವ ಭಾವನೆಯಿದೆ.

ಕಮೀಷನ್ ಆಸೆಗೆ ವಿವಾದಿತ ನಿವೇಶನ, ಪ್ಲಾಟ್ ಕೊಡಿಸಿ ಕೈತೊಳೆದುಕೊಳ್ಳುವ ರಿಯಲ್ ಎಸ್ಟೇಟ್ ಏಜೆಂಟ್ ಕಂ ಬ್ರೋಕರ್ ಗಳಿಗೆ ಬುದ್ಧಿ ಕಲಿಸಲು ಕರ್ನಾಟಕ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಣಿ ಮಾಡದೇ ರಿಯಲ್ ಎಸ್ಟೇಟ್ ವಹಿವಾಟು ನಡೆಸುವರಿಗೆ ದುಬಾರಿ ದಂಡಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ನೋಂದಣಿ ಇಲ್ಲದೇ ರಿಯಲ್ ಎಸ್ಟೇಟ್ ವಹಿವಾಟು ನಡೆಸಿ ಸಿಕ್ಕಿ ಬೀಳುವ ರಿಯಲ್ ಎಸ್ಟೇಟ್ ಏಜೆಂಟರಿಗೆ ವಹಿವಾಟು ನಡೆಸಿದ ಆಸ್ತಿಯ ಮೌಲ್ಯದ ಶೇ. 5 ರಷ್ಟು ದಂಡ ವಿಧಿಸಲಿದೆ.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಜನ ಸಾಮಾನ್ಯರಿಗೆ ಆಗುತ್ತಿರುವ ಅನ್ಯಾಯಗಳಿಗೆ ನಿಯಂತ್ರಣ ಹಾಕಲು ಕೇಂದ್ರ ಸರ್ಕಾರ 2016 ರಲ್ಲಿ ರಿಯಲ್ ಎಸ್ಟೇಟ್ ಮತ್ತು ಅಭಿವೃದ್ಧಿ ಕಾಯ್ದೆ ಜಾರಿಗೆ ತಂದಿದೆ. ರೇರಾ ಕಾಯ್ದೆಯನ್ನು ಜಾರಿಗೆ ತರುವ ಸಲುವಾಗಿ ಕರ್ನಾಟಕ ಸರ್ಕಾರ ಕೂಡ 2017 ರಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್, ರೆಗುಲೇಷನ್ ಅಂಡ್ ಡೆವಲಪ್ ಮೆಂಟ್ ನಿಯಮ ಜಾರಿಗೆ ತರಲಾಗಿದೆ. ಅದರ ಪ್ರಕಾರ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ರಚನೆ ಮಾಡಲಗಿತ್ತು.

ಏಜೆಂಟ್ ನೋಂದಣಿ: ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ ಸೆಕ್ಷನ್ 9 ರ ಪ್ರಕಾರ ಪ್ರತಿಯೊಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಪ್ರಾಧಿಕಾರದಲ್ಲಿ ನೋಂದಣಿ ಮಾಡಬೇಕು. ಯಾವುದೇ ವ್ಯಕ್ತಿ ಪರವಾಗಿ, ಕಂಪನಿ ಪರವಾಗಿ ನಿವೇಶನ, ಕಟ್ಟಡ ಮಾರಾಟ ಮಾಡಿದ್ರೆ ಅಂತಹ ಏಜೆಂಟರು ಕಡ್ಡಾಯವಾಗಿ ನೋಂದಣಿ ಮಾಡಿಸಿರಲೇಬೇಕು. ಅದರಲ್ಲೂ ರೇರಾ ಸೆಕ್ಷನ್ 3 ರ ಅಡಿ ನೋಂದಣಿ ಮಾಡಿಸಿರುವ ರಿಯಲ್ ಎಸ್ಟೇಟ್ ಕಂಪನಿಯ ನಿವೇಶನ, ಅಪಾರ್ಟ್ ಮೆಂಟ್ ನ್ನು ಮಾರಾಟ ಮಾಡುವರು ನೋಂದಣಿ ಮಾಡಿಸಿರಬೇಕು.

ನೋಂದಣಿಗೆ ಡೆಡ್ ಲೈನ್ : ರೇರಾ ಕಾಯ್ದೆ ಸೆಕ್ಷನ್ 25 ಮತ್ತು 27 ಪ್ರಕಾರ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಸುತ್ತೋಲೆ ಹೊರಡಿಸಿತ್ತು. 2022 ಮಾರ್ಚ್ 30 ರ ಒಳಗೆ ನೊಂದಣಿ ಮಾಡುವಂತೆ ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಬ್ರೋಕರ್ ಗಳಿಗೆ ಕಾಲಾವಕಾಶ ನೀಡಿತ್ತು. ಈವರೆಗೆ ಕರ್ನಾಟಕದ ರೇರಾದಲ್ಲಿ 3468 ಏಜೆಂಟರು ನೋಂದಣಿ ಮಾಡಿಸಿದ್ದಾರೆ. ಇವರು ರಿಯಲ್ ಎಸ್ಟೇಟ್ ವಹಿವಾಟು ನಡೆಸಲು ಅರ್ಹರಾಗಿರುತ್ತಾರೆ.

ನೋಂದಣಿ ಇಲ್ಲದೇ ವಹಿವಾಟು ನಡೆಸಿದ್ರೆ ಬೀಳುವ ದಂಡ : ಇನ್ನು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೊಂದಣಿ ಮಾಡದೇ ಏಜೆಂಟರು, ಫರ್ಮ್ ರಿಯಲ್ ಎಸ್ಟೇಟ್ ವಹಿವಾಟು ನಡೆಸುವುದು ರೇರಾ ಸೆಕ್ಷನ್ 62 ಪ್ರಕಾರ ಅಪರಾಧ. ಅಂತಹ ರಿಯಲ್ ಎಸ್ಟೇಟ್ ಏಜೆಂಟ್ ಅಥವಾ ಬ್ರೋಕರ್ ಮೇಲೆ ದಂಡ ವಿಧಿಸಲು ಅವಕಾಶವಿದೆ. ರೇರಾ ನಿಯಮದ ಪ್ರಕಾರ ನೋಂದಣಿ ಇಲ್ಲದ ಏಜೆಂಟ್ ವಹಿವಾಟು ನಡೆಸಿದ ಆಸ್ತಿ, ಪ್ಲಾಟ್, ಅಪಾರ್ಟ್ ಮೆಂಟ್ ನ ಮೌಲ್ಯದಲ್ಲಿ ಶೇ. 05 ರಷ್ಟು ದಂಡ ವಿಧಿಸಲಾಗುತ್ತದೆ. ಉದಾಹರಣೆಗೆ 2 ಕೋಟಿ ಮೊತ್ತದ ಪ್ಲಾಟ್ ವಹಿವಾಟು ನಡೆಸಿದ್ರೆ, ಹತ್ತು ಲಕ್ಷ ರೂ. ಗಳನ್ನು ರೇರಾಗೆ ದಂಡ ವಿಧಿಸಲಾಗುತ್ತದೆ. ಜನ ಸಾಮಾನ್ಯರು ಕೂಡ ನೋಂದಾಯಿತ ರಿಯಲ್ ಎಸ್ಟೇಟ್ ಏಜೆಂಟರಿಂದ ವಹಿವಾಟು ನಡೆಸಿದಾಗ, ಏಜೆಂಟರು ಮೋಸ ಮಾಡಿದ್ರೆ ಅವರ ವಿರುದ್ಧ ರೇರಾ ದಲ್ಲಿ ಕೇಸು ದಾಖಲಿಸಿ ನ್ಯಾಯ ಪಡೆಯಲು ಅವಕಾಶವಿದೆ.

Related News

spot_img

Revenue Alerts

spot_img

News

spot_img