22.6 C
Bengaluru
Saturday, July 27, 2024

ಬಹುಕೋಟಿ ಲಂಚ ಪ್ರಕರಣ: EX MLA ಮಾಡಾಳ್ ವಿರುಪಾಕ್ಷಪ್ಪ ವಿರುದ್ಧ DA Case ದಾಖಲಾಗಲಿಲ್ಲವೇ?

#Karnataka Lokayuktha #Bribe #Ex MLA Madal Virupakshappa #DA Case
ಬೆಂಗಳೂರು, ನ. 13: ಚನ್ನಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಬಹುಕೋಟಿ ಲಂಚ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಲಂಚ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಅನುಮತಿ ಕೋರಿ ಮೂರು ತಿಂಗಳಾದರೂ ಸರ್ಕಾರ ಅನುಮತಿ ನೀಡಿಲ್ಲ! ಒಂದೆರಡು ಲಕ್ಷ ರೂ. ಲಂಚ ಪ್ರಕರಣದಲ್ಲಿ ಸಿಲುಕುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರತ್ಯೇಕ ಕೇಸು ದಾಖಲಿಸಿ ತನಿಖೆ ನಡೆಸುವ ಲೋಕಾಯುಕ್ತ ಪೊಲೀಸರು ಮಾಡಾಳ್ ಲಂಚ ಪ್ರಕರಣದಲ್ಲಿ ಮೌನ ವಹಿಸಿರುವುದು ಅಧಿಕಾರಿ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಅದೂ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಾಡಾಳ್ ವಿರುಪಾಕ್ಷಪ್ಪನ ಪುತ್ರ ಪ್ರಶಾಂತ್ ಮಾಡಾಳ್ ಕೂಡ ಸರ್ಕಾರಿ ಅಧಿಕಾರಿಯೇ. ಮಿಗಿಲಾಗಿ ಗುತ್ತಿಗೆ ನೀಡಲು 40 ಲಕ್ಷ ರೂ. ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದರು. ಪ್ರಶಾಂತ್ ಖಾಸಗಿ ಕಚೇರಿಯಲ್ಲಿ 1.62 ಕೋಟಿ ರೂ. ಪತ್ತೆಯಾಗಿತ್ತು. ಮರುದಿನ ಮಾಡಾಳ್ ವಿರುಪಾಕ್ಷಪ್ಪ ಮನೆಯಲ್ಲಿ 6.26 ಕೋಟಿ ರೂ. ನಗದು ಪತ್ತೆಯಾಗಿತ್ತು.
ಇಂತಹ ಬಹುಕೋಟಿ ಪತ್ತೆಯಾದ ಪ್ರಕರಣದಲ್ಲಿ ಸಾಮಾನ್ಯವಾಗಿ ಅದಾಯ ತೆರಿಗೆ ಅಧಿಕಾರಿಗಳು, ಜಾರಿ ನಿರ್ದೇಶನಾಲಯ ತನಿಖೆ ನಡೆಯಬೇಕಿತ್ತು. ಬಹುಮುಖ್ಯವಾಗಿ ಆದಾಯದ ಮೂಲದ ಬಗ್ಗೆ ಲೋಕಾಯುಕ್ತ ಪೊಲೀಸರೇ ಅಕ್ರಮ ಆಸ್ತಿ ಗಳಿಕೆ ದಾಖಲಿಸಿ ಪಾರದರ್ಶಕ ತನಿಖೆ ನಡೆಸಲು ಅರ್ಹವುಳ್ಳ ಪ್ರಕರಣ ಇದಾಗಿತ್ತು. ದೊಡ್ಡ ಮೊತ್ತದ ಲಂಚ ಪ್ರಕರಣದಲ್ಲಿ ಸಿಲುಕಿದ ಮಾಜಿ ಶಾಸಕರ ಪುತ್ರ ಹಾಗೂ ಶಾಸಕರ ವಿರುದ್ಧ ಪ್ರತ್ಯೇಕ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಾಗಲಿದೆ ಎಂಬ ಮಾತು ಲೋಕಾಯುಕ್ತ ಪೊಲೀಸ್ ವಲಯದಲ್ಲಿ ಕೇಳಿ ಬಂದಿತ್ತು. ಇದೀಗ ಲಂಚ ಪ್ರಕರಣದ ತನಿಖೆಗೆ ಸೀಮಿತಗೊಳಿಸಿರುವ ಲೋಕಾಯುಕ್ತ ಪೊಲೀಸರು ತನಿಖೆ ಮುಗಿಸಿ ದೋಷಾರೋಪ ಪಟ್ಟಿ ಸಲ್ಲಿಸಲು ಅಭಿಯೋಜನಾ ಮಂಜೂರಾತಿ ಕೋರಿದ್ದಾರೆ. ಲೋಕಾಯುಕ್ತ ಪೊಲೀಸರು ಅಭಿಯೋಜನಾ ಮಂಜೂರಾತಿ ಕೋರಿ ಮೂರು ತಿಂಗಳಾದರೂ ಸರ್ಕಾರ ( ವಿಧಾನಸಭೆ ಅಧ್ಯಕ್ಷರು ) ಕಾನೂನು ಸಲಹೆ ಪಡೆಯಲು ಮಂದಾಗಿದ್ದಾರೆ. ಆದರೆ, ಮಾಡಾಳ್ ವಿರುಪಾಕ್ಷಪ್ಪ ಮನೆಯಲ್ಲಿ ಆರು ಕೋಟಿ ರೂ. ಸಿಕ್ಕಿದರೂ ಅದರ ಮೂಲ ಪತ್ತೆ ಬಗ್ಗೆ, ಅವರು ಶಾಸಕರ ಅವಧಿಯಲ್ಲಿ ಗಳಿಸಿರುವ ಆಸ್ತಿ, ಆದಾಯದ ಬಗ್ಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಯಾಕೆ ದಾಖಲಿಸಲಿಲ್ಲ ಎಂಬ ಪ್ರಶ್ನೆ ಎದ್ದಿದೆ ?
ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಲಂಚ ಪ್ರಕರಣ ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬೆಳಕಿಗೆ ಬಂದ ಈ ಪ್ರಕರಣ ಬಿಜೆಪಿಗೆ ಮುಜುಗರ ಉಂಟು ಮಾಡಿತ್ತು. ಆಗಷ್ಟೇ ಸರ್ಕಾರದ ನಿಯಂತ್ರಣದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳ ರದ್ದಾಗಿ ಲೋಕಾಯುಕ್ತ ವ್ಯಾಪ್ತಿಗೆ ಭ್ರಷ್ಟಾಚಾರ ನಿಗ್ರಹ ದಳ ಬಂದಿತ್ತು. ಲೋಕಾಯುಕ್ತ ಪೊಲೀಸರು ಮಾಡಾಳ್ ವಿರುಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಕೋಟಿ ಕೋಟಿ ಸಿಕ್ಕಿದರೂ ಯಾಕೆ ಅದನ್ನು ಲಂಚ ಪ್ರಕರಣಕ್ಕೆ ಸೀಮಿತಗೊಳಿಸಿ ತನಿಖೆ ನಡೆಸಲಿಲ್ಲ ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಈ ಹಿಂದೆ ಒಂದು ಲಕ್ಷ ರೂ., ಎರಡು ಲಕ್ಷ ರೂ. ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರತ್ಯೇಕವಾಗಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಅಕ್ರಮ ಆಸ್ತಿ ಕಂಡು ಬಂದಿದ್ದು, ಪ್ರತ್ಯೇಕ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ ಉದಾಹರಣೆಗಳಿವೆ. ಆದರೆ, ಪ್ರಭಾವಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಬಹುಕೋಟಿ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸದಿರುವ ಬಗ್ಗೆ ಅಧಿಕಾರಿ ವಲಯದಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ.
ಇನ್ನು ಮಾಡಾಳ್ ವಿರುಪಾಕ್ಷಪ್ಪ ಆಗಲೀ ಅವರ ಪುತ್ರನ ವಿರುದ್ಧವಾಗಲೀ ಲಂಚ ಪ್ರಕರಣ ಸಂಬಂಧ ಪ್ರತ್ಯೇಕ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿದ ಬಗ್ಗೆ ಲೋಕಾಯುಕ್ತ ಸಂಸ್ಥೆ ಈವರೆಗೂ ಅಧಿಕೃತವಾಗಿ ಏನೂ ಪ್ರಕಟಣೆ ನೀಡಿಲ್ಲ. ಲೋಕಾಯುಕ್ತ ಪೊಲೀಸ್ ಮೂಲಗಳ ಪ್ರಕಾರ ಈವರೆಗೂ ಮಾಡಾಳ್ ವಿರುದ್ಧ ಲಂಚ ಪ್ರಕರಣ ಹೊರತು ಪಡಿಸಿ ಯಾವುದೇ ಕೇಸು ದಾಖಲಿಸಿಲ್ಲ ಎಂದು ಗೊತ್ತಾಗಿದ್ದು, ಒಂದು ವೇಳೆ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದೇ ಆಗಿದ್ದಲ್ಲಿ ಈವರೆಗೆ ಸುದ್ದಿ ಹೊರ ಬರುತ್ತಿತ್ತುನ ಅಲ್ಲವೇ?
Bribe Case: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಲಿಗೆ ಕಚ್ಚಾ ವಸ್ತು ಪೂರೈಕೆಯ ಟೆಂಡರ್ ಪಡೆದಿದ್ದ ಶ್ರೇಯಸ್ ಎಂಬ ಗುತ್ತಿಗೆದಾರನಿಂದ ವಿರುಪಾಕ್ಷಪ್ಪ ಅವರ ಪುತ್ರ, ಬೆಂಗಳೂರು ಜಲ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ( ಎಸಿಬಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿದ್ದರು) ಪ್ರಶಾಂತ್ ಮಾಡಾಳ್‌ ಅಪ್ಪನ ಪರವಾಗಿ 40 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಪ್ರಶಾಂತ್ ಖಾಸಗಿ ಕಚೇರಿ ಶೋಧ ನಡೆಸಿದಾಗ 1.62 ಕೋಟಿ ರೂ. ನಗದು ಹಣ ಪತ್ತೆಯಾಗಿತ್ತು. ಮಗನ ಬಂಧನದ ಬಳಿಕ ಮಾಡಾಳ್ ವಿರುಪಾಕ್ಷಪ್ಪ ತಲೆ ಮರೆಸಿಕೊಂಡಿದ್ದರು. ಅವರ ಮನೆಯಲ್ಲಿ ಶೋಧ ನಡೆಸಿದಾಗ 6.26 ಕೋಟಿ ರೂ. ನಗದು ಪತ್ತೆಯಾಗಿತ್ತು. ಹೈಕೋರ್ಟ್‌ ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆ ನಂತರ ಹೈಕೋರ್ಟ್‌ ನಿಂದ ಮಧ್ಯಂತರ ಜಾಮೀನು ತಿರಸ್ಕೃತಗೊಂಡು ಮಡಾಳ್ ವಿರುಪಾಕ್ಷಪ್ಪ ಬಂಧನಕ್ಕೆ ಒಳಗಾಗಿದ್ದರು.

Related News

spot_img

Revenue Alerts

spot_img

News

spot_img