ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ ಗಾಯತ್ರಿ ರವರ ಅಧ್ಯಕ್ಷತೆಯಲ್ಲಿ ಬ್ಯಾಂಕ್ ವಹಿವಾಟಿನಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಅಂಗವಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ಲೀಡ್ ಬ್ಯಾಂಕ್ ಅಧಿಕಾರಿಗಳ ಸಭೆ ಜರುಗಿತು.
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಜಿಪಂ ಸಭಾಂಗಣದಲ್ಲಿ ನಡೆದ ಬ್ಯಾಂಕ್ ವಹಿವಾಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತುಎಲ್ಲಾ ಬ್ಯಾಂಕುಗಳು ತಮ್ಮ ಶಾಖೆಗಳಲ್ಲಿ ನಡೆಯುವ ದೊಡ್ಡ ಮೊತ್ತದ ವ್ಯವಹಾರದ ಸಮಗ್ರ ವಿವರ ಪ್ರತೀನಿತ್ಯ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವನ್ನು ಸಹಿಸಲಾಗದು. ಯಾವುದೇ ಬ್ಯಾಂಕ್ ಮಾಹಿತಿ ನೀಡದಿದ್ದರೆ, ಅಂತಹ ಬ್ಯಾಂಕುಗಳಿಗೆ ಬೀಗ ಹಾಕಲೂ ಹಿಂಜರಿಯುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು. ಪ್ರಜಾಪ್ರಾತಿನಿಧ್ಯ ಕಾಯಿದೆ ಇತರೆ ಎಲ್ಲಾ ಕಾಯಿದೆಗಳಿಗಿಂತಲೂ ಮಿಗಿಲಾಗಿದೆ ಎಂದರು.
ಸಹಕಾರ ಬ್ಯಾಂಕುಗಳಲ್ಲಿ ನಡೆಯುತ್ತಿರುವ ವ್ಯವಹಾರವನ್ನೂ ಪರಿಶೀಲಿಸಬೇಕು. ಇದಲ್ಲದೇ ಹವಾಲ ಮೂಲಕ ನಡೆಯುತ್ತಿರುವ ಹಣದ ಚಲಾವಣೆಯ ಮೇಲೆ ತೀವ್ರ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಆರ್ಥಿಕ ವಹಿವಾಟು ಹಾಗೂ ನಗದು ಚಲಾವಣೆಯ ಮೇಲೆ ಗಮನಿಸಲು ಆದಾಯ ತೆರಿಗೆ, ಕಸ್ಟಮ್ಸ್, ಬ್ಯಾಂಕುಗಳು ಮತ್ತು ಪೊಲೀಸ್ ಇಲಾಖೆಗಳನ್ನೊಳಗೊಂಡ ಅಧಿಕಾರಿಗಳ ತಂಡ ರಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಸ್ವೀಪ್ ಕಾರ್ಯಕ್ರಮದ ಅಂಗವಾಗಿ ವೋಟರ್ ರಿಜಿಸ್ಟ್ರೇಷನ್ ಅಪ್ಲಿಕೇಶನ್ ಕುರಿತು ಬ್ಯಾಂಕ್ ಮ್ಯಾನೇಜರ್ ಗಳಿಗೆ ಮಾಹಿತಿ ನೀಡಿದರು.
ಈ ವೇಳೆಯಲ್ಲಿ ಆಯುಕ್ತರು, ಪ್ರಾಚ್ಯ ವಸ್ತು ಮತ್ತು ಸಂಗ್ರಹಾಲಯ, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಮುಖ್ಯ ಲೆಕ್ಕಾಧಿಕಾರಿಗಳು, ಜಿಲ್ಲಾ ಪಂಚಾಯತ್, ಹಾಗೂ ಮೈಸೂರು ಜಿಲ್ಲೆಯ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರು ಹಾಜರಿದ್ದರು.