ಆಸ್ತಿಗಳ ಮೇಲಿನ ಹೂಡಿಕೆ ಅತ್ಯಂತ ಸುರಕ್ಷಿತ ಎಂದು ಹಿಂದಿನಿಂದಲೂ ನಂಬಲಾಗಿದೆ. ಭಾರತದ ಬಹುತೇಕ ನಗರಗಳಲ್ಲಿ ಸಾಕಷ್ಟು ಬೆಳವಣಿಗೆ ಕಾಣುತ್ತಿರುವುದರಿಂದಾಗಿ ಭವಿಷ್ಯದಲ್ಲಿ ಆಸ್ತಿಗಳ ಬೆಲೆ ದುಬಾರಿ ಆಗುವ ಎಲ್ಲ ನಿರೀಕ್ಷೆಗಳೂ ಇವೆ. ಈ ಬೆಳವಣಿಗೆಯ ಅಲೆಯನ್ನು ನೀವೂ ಬಳಸಿಕೊಂಡು ಇಂಥ ನಗರಗಳಲ್ಲಿ ಆಸ್ತಿಗಳ ಮೇಲೆ ಹೂಡಿಕೆ ಮಾಡುವ ಮೂಲಕ ಒಳ್ಳೆಯ ಲಾಭ ಪಡೆಯಬಹುದು. ನಿಮ್ಮ ಹೂಡಿಕೆ ಮೇಲೆ ಹೆಚ್ಚಿನ ಲಾಭಾಂಶ ಸಿಗುವಂತಾಗಲು ನೀವು ಗಮನ ಹರಿಸಬೇಕಾದ ಕೆಲವು ಅಂಶಗಳು ಇಲ್ಲಿವೆ.
ಜಾಗ
ಆಸ್ತಿಯು ಎಂಥ ಜಾಗದಲ್ಲಿದೆ ಎಂಬುದು ಅದರ ಮೌಲ್ಯವನ್ನು ನಿರ್ಧರಿಸುವ ಪ್ರಾಥಮಿಕ ಅಂಶ. ನೀವು ದೀರ್ಘಾವಧಿಯಲ್ಲಿ ಉತ್ತಮ ಆದಾಯ ಗಳಿಸಲೆಂದೇ ಆಸ್ತಿ ಮೇಲೆ ಹೂಡಿಕೆ ಮಾಡಲು ಬಯಸುತ್ತೀರಾದರೆ, ಬೆಳವಣಿಗೆ ಹೊಂದುತ್ತಿರುವ ಪ್ರದೇಶದಲ್ಲಿ ಹೂಡಿಕೆ ಮಾಡುವುದು ಒಳಿತು. ಈಗಾಗಲೇ ಬೆಳವಣಿಗೆ ಹೊಂದಿರುವ ಜಾಗಗಳಿಗೆ ಹೋಲಿಸಿದರೆ ಇದರ ವೆಚ್ಚವೂ ಕಡಿಮೆ.
ಸೌಕರ್ಯಗಳು
ಶಾಪಿಂಗ್ ಕಾಂಪ್ಲೆಕ್ಸ್, ಪಾರ್ಕ್, ಶಾಲೆ, ಆಸ್ಪತ್ರೆಗಳಂತಹ ಸಾಮಾನ್ಯ ಸೌಕರ್ಯಗಳು ಇರುವ ಪ್ರದೇಶಗಳಲ್ಲಿನ ಆಸ್ತಿಗಳ ಮೌಲ್ಯ ಹೆಚ್ಚಾಗಿರುವ ಜೊತೆಗೆ ಬೇಡಿಕೆಯೂ ಹೆಚ್ಚು. ಆದ್ದರಿಂದ ನೀವು ಆಸ್ತಿ ಖರೀದಿಸುವ ಸಂದರ್ಭದಲ್ಲಿ ಈ ಎಲ್ಲ ಅಂಶಗಳು ಇರುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಆಸ್ತಿಯು ಅಂತಹ ವಿಸ್ತರಣೆಯ ಸಾಧ್ಯತೆಯನ್ನಾದರೂ ಹೊಂದಿರಬೇಕು.
ಸಮುದಾಯ ಸಾರಿಗೆ
ಆಸ್ತಿ ಖರೀದಿ ಅಂತಿಮಗೊಳಿಸುವ ಮುನ್ನ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ, ಸಮುದಾಯ ಸಾರಿಗೆ. ಉತ್ತಮ ಸಂಪರ್ಕ ಸೌಕರ್ಯಗಳು ಇರುವಷ್ಟೂ ಆಸ್ತಿಯ ಮೌಲ್ಯ ಹೆಚ್ಚುತ್ತದೆ ಮತ್ತು ಖರೀದಿದಾರರಿಗೆ ಆಸಕ್ತಿ ಮೂಡಿಸುತ್ತದೆ. ನೀವು ಆಸ್ತಿ ಖರೀದಿಸುವ ಜಾಗದಿಂದ ನಗರದ ಇತರ ಭಾಗಗಳಿಗೆ, ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಿಗೆ ಒಳ್ಳೆಯ ಸಾರಿಗೆ ಸಂಪರ್ಕ ಇರುವಂತೆ ಗಮನ ಹರಿಸಿ.
ಬಾಡಿಗೆ ತರುವ ಆಸ್ತಿ
ಬಾಡಿಗೆ ಆದಾಯ ತರುವ ಆಸ್ತಿಯ ಮೇಲೆ ಹೂಡಿಕೆ ಮಾಡುವುದು ಎರಡು ಪ್ರಯೋಜನಗಳನ್ನು ಹೊಂದಿದೆ. ಕ್ರಮೇಣ ಆಸ್ತಿಯ ಮೌಲ್ಯ ಹೆಚ್ಚುವ ಜೊತೆಗೆ, ಇವು ಮಾಲೀಕರಿಗೆ ನಿರಂತರ ಆದಾಯ ಮೂಲವಾಗಿಯೂ ಪರಿಣಮಿಸುತ್ತವೆ. ಬಾಡಿಗೆಯಿಂದ ಬಂದ ಆದಾಯದಲ್ಲಿಯೇ ಆಸ್ತಿಯ ನಿರ್ವಹಣೆ ಮತ್ತು ತೆರಿಗೆ ಭರಿಸುವುದು ಸಾಧ್ಯವಾಗುತ್ತದೆ.
ವಾಣಿಜ್ಯ ಕೇಂದ್ರಗಳ ಸಾಮೀಪ್ಯ
ವಾಣಿಜ್ಯ ಕೇಂದ್ರಗಳು, ಕಾರ್ಪೊರೇಟ್ ಕಚೇರಿಗಳು ಇರುವ ಪ್ರದೇಶದಲ್ಲಿ ಅಥವಾ ಭವಿಷ್ಯದಲ್ಲಿ ಇಂಥ ಕೇಂದ್ರಗಳು ಬರುವ ಸಾಧ್ಯತೆ ಇರುವಂತಹ ಆಸ್ತಿ ಮೇಲಿನ ಹೂಡಿಕೆಯು ಉತ್ತಮ ಆದಾಯವನ್ನು ತಂದುಕೊಡುತ್ತದೆ. ಒಂದೊಮ್ಮೆ ವಾಣಿಜ್ಯ ಸಾಧ್ಯತೆಗಳಿರುವ ಆಸ್ತಿಗಳ ಮೇಲೆ ಹೂಡಿಕೆ ಮಾಡುತ್ತೀರಾದರೆ, ಮುಂದೆ ಕಾರ್ಪೊರೇಟ್ ಕಚೇರಿಗಳಿಗೆ ಬಾಡಿಗೆಗೆ ನೀಡಿ ಉತ್ತಮ ಆದಾಯ ಗಳಿಸಬಹುದು. ವಸತಿ ಪ್ರದೇಶವಾದರೆ, ನೌಕರದಾರರಿಗೆ ನೀಡಿ ಬಾಡಿಗೆ ಆದಾಯ ಗಳಿಸಬಹುದು.
ಅಂತಿಮವಾಗಿ, ಯಾವುದೇ ಆಸ್ತಿ ಖರೀದಿಗೂ ಮುನ್ನ, ಎಲ್ಲ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳಬೇಕು ಮತ್ತು ಆಳವಾದ ಮಾರುಕಟ್ಟೆ ಅಧ್ಯಯನ ಮಾಡಬೇಕಿರುವುದು ಪ್ರಾಥಮಿಕ ಸಂಗತಿ.