17.9 C
Bengaluru
Thursday, January 23, 2025

ಬೆಂಗಳೂರಿನ ಟ್ವಿನ್ಸ್ ಟವರ್ ಯಾವ ಕೆರೆ ಒತ್ತುವರಿ ಮಾಡಿ ಕಟ್ಟಿದ್ದು ಗೊತ್ತಾ?

ಬೆಂಗಳೂರು: ಬೆಂಗಳೂರು ನಗರದಲ್ಲಿನ ಹತ್ತಾರು ಕೆರೆಗಳನ್ನು ಸಂಪೂರ್ಣವಾಗಿ ಕಬಳಿಸಿ ಅಕ್ರಮ ಬಡಾವಣೆಗಳನ್ನು ನಿರ್ಮಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಸರ್ಕಾರಕ್ಕೆ ಪ್ರತ್ರ ಬರೆದಿದ್ದಾರೆ.

ಈ ಸಂಬಂಧ ರಮೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು ನಗರ ಮತ್ತು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಕೆರೆಗಳ ಬಗ್ಗೆ ಈಗಾಗಲೇ ಎ.ಟಿ. ರಾಮಸ್ವಾಮಿ ಮತ್ತು ಕೆ.ಬಿ. ಕೋಳಿವಾಡ ಸಮಿತಿಯ ಸದಸ್ಯರು ಖುದ್ದಾಗಿ ಪರಿಶೀಲನೆ ನಡೆಸಿ ವರದಿಗಳನ್ನು ನೀಡಿದ್ದಾರೆ. ಈ ಎರಡು ಸಮಿತಿಗಳು ಕೆರೆಗಳ ಪರಿಶೀಲನೆ ಕಾರ್ಯ ಕೈಗೊಳ್ಳುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಅಧಿಕಾರಿಗಳು, ಬಿಬಿಎಂಪಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆರೆಗಳ ವಿಭಾಗದ ಅಧಿಕಾರಿಗಳು ದುರುದ್ದೇಶಪೂರ್ವಕವಾಗಿಯೇ ಹಲವಾರು ಕೆರೆಗಳ ಮಾಹಿತಿಗಳನ್ನು ಮೇಲೆ ತಿಳಿಸಿರುವ ಎರಡು ಸಮಿತಿಗಳ ಗಮನಕ್ಕೆ ಬಾರದಂತೆ ಮುಚ್ಚಿಡುವ ಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಯಾವ ಯಾವ ಕೆರೆಗಳು ಒತ್ತುವರಿಯಾಗಿವೆ ಎಂಬುದರ ಬಗ್ಗೆ ಎನ್‌.ಆರ್. ರಮೇಶ್ ಇಲ್ಲಿ ವಿವರಿಸಿದ್ದಾರೆ.

* ಪ್ರಸ್ತುತ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಯಲಹಂಕ ಹೋಬಳಿಯ ಸರ್ವೆ ನಂಬರ್ 102ರ ಸುಮಾರು 66.18 ಎಕರೆಗಳಷ್ಟು ವಿಸ್ತೀರ್ಣದ ಸಿಂಗಾಪುರ ಕೆರೆ ಸಂಪೂರ್ಣವಾಗಿ ಭೂಗಳ್ಳರಿಂದ ಕಬಳಿಸಲ್ಪಟ್ಟಿದೆ. ಅಕ್ರಮ ಬಡಾವಣೆಗಳು ನಿರ್ಮಾಣಗೊಂಡಿವೆ. ಸಿಂಗಾಪುರ ಕೆರೆಯನ್ನು 1528ರಲ್ಲಿ ನಾಲಪ್ಪ ನಾಯಕನು ನಿರ್ಮಿಸಿರುವ ಬಗ್ಗೆ ಸ್ಥಳದಲ್ಲಿಯೇ ಇರುವ ಶಾಸನವು ಇಂದಿಗೂ ಸಾರಿ ಹೇಳುತ್ತಿದೆ.

* ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯಲಹಂಕ ಹೋಬಳಿ ಸಿಂಗಾಪುರ ಗ್ರಾಮದ ಅಬ್ಬಿಗೆರೆ ಕೆರೆಯ ಸುಮಾರು 75 ಎಕರೆಗಳಿಗೂ ಹೆಚ್ಚು ವಿಸ್ತೀರ್ಣವಿದ್ದು, ಸಂಪೂರ್ಣ ಕೆರೆಯು ಒತ್ತುವರಿಯಾಗಿ ವಿನಾಯಕ ನಗರ ಎಂಬ ಬಡಾವಣೆಯೂ ಸಹ ತಲೆ ಎತ್ತಿದೆ.

* ಬೆಂಗಳೂರು ಉತ್ತರ ತಾಲ್ಲೂಕಿನ ಬಾಣಾವರ ಕೆರೆಯು ಸುಮಾರು 170 ಎಕರೆಗಳಷ್ಟು ವಿಸ್ತೀರ್ಣವಿದ್ದು, ಅದರ ಪೈಕಿ ಈಗಾಗಲೇ 20 ಎಕರೆಗಳಿಗೂ ಹೆಚ್ಚು ಪ್ರದೇಶವನ್ನು ಸರ್ಕಾರಿ ನೆಲಗಳ್ಳರು ಕಬಳಿಸಿ ಅಕ್ರಮ ಬಡಾವಣೆಗಳನ್ನು ನಿರ್ಮಾಣ ಮಾಡಿದ್ದಾರೆ.

* ಯಲಹಂಕ ಹೋಬಳಿ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಹೆಬ್ಬಾಳ ಕೆರೆಯನ್ನು 1974ರಲ್ಲಿ ಸರ್ವೆ ಮಾಡಿದ ಸಂದರ್ಭದಲ್ಲಿ ಕೆರೆಯ ಒಟ್ಟು ವಿಸ್ತೀರ್ಣ 75.95 ಹೆಕ್ಟೇರ್ (187.67 ಎಕರೆ) ಪ್ರದೇಶ ಇರುವುದು ದಾಖಲೆಗಳಿಂದ ಸ್ಪಷ್ಟವಿರುತ್ತದೆ. ಆದರೆ, 1998-99ರಲ್ಲಿ ಇದೇ ಕೆರೆಯನ್ನು ಮತ್ತೊಮ್ಮೆ ಸರ್ವೆ ಕಾರ್ಯ ನಡೆಸಿದಾಗ ಕೇವಲ 57.75 ಹೆಕ್ಟೇರ್ (142.70 ಎಕರೆ) ಪ್ರದೇಶಗಳಷ್ಟು ಮಾತ್ರವೇ ಇರುವ ದಾಖಲೆಗಳೂ ಸಹ ಲಭ್ಯವಾಗಿವೆ. ಸುಮಾರು 20 ಹೆಕ್ಟೇರ್ ಗಳಷ್ಟು ಹೆಬ್ಬಾಳ ಕೆರೆಯ ಪ್ರದೇಶವು ಸಂಪೂರ್ಣವಾಗಿ ಒತ್ತುವರಿಯಾಗಿರುವುದಲ್ಲದೆ ಈ ರೀತಿ ಒತ್ತುವರಿಯಾದ ಸ್ಥಳದಲ್ಲಿಯೇ Bearys Lakeside Habitat ಎಂಬ ಎರಡು ಟವರ್‌ಗಳನ್ನು ಒಳಗೊಂಡ 27 ಅಂತಸ್ಥಿನ ಸುಮಾರು 106 ಐಷಾರಾಮಿ ಯೂನಿಟ್‌ಗಳನ್ನು ಒಳಗೊಂಡ ಕಟ್ಟಡವು ತಲೆ ಎತ್ತಿದೆ.

ಈ ರೀತಿ ಹಲವಾರು ಐತಿಹಾಸಿಕ ಕೆರೆಗಳನ್ನು ಭೂ ಕಬಳಿಕೆದಾರರು ತಮಗಿರುವ ರಾಜಕೀಯ ಮತ್ತು ಹಣದ ಪ್ರಭಾವದಿಂದ ಕಬಳಿಸಿರುವ ದಾಖಲೆಗಳು ನಮ್ಮ ಮುಂದೆ ಇದ್ದರೂ ಸಹ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತುಬಿಬಿಎಂಪಿ, ಬಿಡಿಎ ಕೆರೆಗಳ ವಿಭಾಗದ ಅಧಿಕಾರಿಗಳು ಈ ಎಲ್ಲಾ ಮಾಹಿತಗಳನ್ನು ದುರುದ್ದೇಶಪೂರ್ವಕವಾಗಿ ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದಾರೆ.

ಆದಕಾರಣ ಈ ಮೇಲೆ ತಿಳಿಸಿದ ನಾಲ್ಕು ಐತಿಹಾಸಿಕ ಕೆರೆಗಳ ಸರ್ವೆ ಕಾರ್ಯ ನಡೆಸಬೇಕೆಂದು ಮತ್ತು ಹಳೆಯ ದಾಖಲೆಗಳನ್ನು ಪರಿಶೀಲಿಸಿ ಒತ್ತುವರಿದಾರರ ಮತ್ತು ಅಮೂಲ್ಯ ಕೆರೆಗಳ ಪ್ರದೇಶಗಳನ್ನು ಒತ್ತುವರಿ/ ಕಬಳಿಕೆ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎನ್‌.ಆರ್. ರಮೇಶ್ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

Related News

spot_img

Revenue Alerts

spot_img

News

spot_img