ಭಾರತದ ಅತ್ಯಂತ ಶ್ರೀಮಂತ ಮುಖ್ಯಕಾರ್ಯನಿರ್ವಹಣಾಧಿಕಾರಿ (CEO)ಗಳಲ್ಲೊಬ್ಬರಾದ ಇಗ್ನೇಷಿಯಸ್ ನವಿಲ್ ನೊರಾನ್ಹಾ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ದುಬಾರಿ ಬೆಲೆಯ ಮನೆ ಕೊಂಡು ಸುದ್ದಿಯಲ್ಲಿದ್ದಾರೆ.
ಡಿಮಾರ್ಟ್ ರಿಟೇಲ್ ಸ್ಟೋರ್ಸ್‌ನ ಸಿಇಒ ಆಗಿರುವ ಇಗ್ನೇಷಿಯಸ್ ನವಿಲ್ ನೊರಾನ್ಹಾ ಮುಂಬೈನ ಬಾಂದ್ರಾದಲ್ಲಿ 66 ಕೋಟಿ ರೂ ಮೊತ್ತದ ಎರಡು ಮನೆಗಳನ್ನು ಖರೀದಿಸಿದ್ದಾರೆ. ಮುದ್ರಾಂಕ ಶುಲ್ಕವಾಗಿ ರೂ. 3.30 ಕೋಟಿಯನ್ನು ಪಾವತಿಸಿದ್ದಾರೆ. ರಿಯಲ್ ಎಸ್ಟೇಟ್ ಕಂಪೆನಿಯಾದ ರಸ್ತೋಮ್‌ಜೀ ಗ್ರೂಪ್ ನಿರ್ಮಿಸುತ್ತಿರುವ ಅಪಾರ್ಟ್‌ಮೆಂಟ್ ಇದಾಗಿದ್ದು ಇನ್ನೂ ನಿರ್ಮಾಣ ಹಂತದಲ್ಲಿದೆ. ಮುಂಬಯಿಯ ಜನಪ್ರಿಯ ಕುರ್ಲಾ ಕಾಂಪ್ಲೆಕ್ಸ್ ಬಳಿಯೇ ಈ ಅಪಾರ್ಟ್‌ಮೆಂಟ್ ನಿರ್ಮಾಣಗೊಳ್ಳುತ್ತಿದೆ.
ಮುಂಬೈ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇತ್ತೀಚೆಗೆ ನಡೆದ ಭಾರಿ ಮೊತ್ತದ ವರ್ಗಾವಣೆ ಇದಾಗಿದ್ದು ಮನೆಯ ಕಾರ್ಪೆಟ್ ಏರಿಯಾ 8640 ಚದರ ಅಡಿಯಷ್ಟು. ಡೆಕ್ ಹಾಗೂ ಟೆರೇಸ್ ಏರಿಯಾ ಸೇರಿ 912 ಚದರ ಅಡಿ ಇದೆ. ಒಟ್ಟಿನಲ್ಲಿ ನೊರೊನ್ಹಾ ಅವರ ಮನೆಯ ಒಟ್ಟೂ ವಿಸ್ತೀರ್ಣ 9,552 ಚದರ ಅಡಿಯಷ್ಟು. ಜೊತೆಗೆ ಹತ್ತು ಕಾರು ಪಾರ್ಕ್ ಮಾಡಲು ಬೇಕಾಗುವಷ್ಟು ಪಾರ್ಕಿಂಗ್ ಸ್ಥಳವೂ ಅವರದ್ದಾಗಿದೆ.
ಕಳೆದ ಹಲವು ದಶಕಗಳಿಂದ ಈ ಪ್ರದೇಶಗಳಲ್ಲಿ ಖರೀದಿದಾರರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವುದೇ ಇಲ್ಲಿ ಬೆಲೆ ಹೆಚ್ಚಾಗಲು ಮುಖ್ಯ ಕಾರಣವಾಗಿದೆ.
ಕಳೆದ ವರ್ಷ ಅವೆನ್ಯು ಸೂಪರ್‌ಮಾರ್ಟ್ಸ್‌ಗಳ ಷೇರು ಬೆಲೆ ಏರಿಕೆ ಕಾಣುವಲ್ಲಿ ಮುಖ್ಯ ಪಾತ್ರವಹಿಸಿದ್ದ ನೊರೊನ್ಹಾ, ಭಾರತದ ಶ್ರೀಮಂತ ವ್ಯವಸ್ಥಾಪಕರಾಗಿ ಹೊರಹೊಮ್ಮಿದರು. ಅವೆನ್ಯೂ ಸೂಪರ್‌ಮಾರ್ಟ್‌ಗಳಲ್ಲಿ ಶೇ2 ರಷ್ಟು ಪಾಲನ್ನು ನೊರಾನ್ಹಾ ಹೊಂದಿದ್ದು ಅದು ಡಿಮಾರ್ಟ್‌ನ ಮಾಲೀಕತ್ವ ಹಾಗೂ ನಿರ್ವಹಣಾ ಜವಾಬ್ದಾರಿಯನ್ನು ಹೊಂದಿದೆ.