ಬೆಂಗಳೂರು ಜುಲೈ 09: ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ನಾಳೆ ಬೆಂಗಳೂರಿನಲ್ಲಿ ಆಯೋಜಿತವಾಗಿರುವ ಡಿಜಿಟಲ್ ಇಂಡಿಯಾ ಸಂವಾದ ಕಲಾಪದಲ್ಲಿ “ಐಟಿ ಹಾರ್ಡ್‌ವೇರ್‌ಗಾಗಿ ಇತ್ತೀಚಿನ ಪರಿಷ್ಕೃತ ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್ ಐ)” ಕುರಿತು ಮಾತನಾಡಲಿದ್ದಾರೆ.
ಪ್ರೋತ್ಸಾಹಧನ ಒದಗಿಸುವ ಮೂಲಕ, ಸ್ಥಳೀಯ ಐಟಿ ಹಾರ್ಡ್‌ವೇರ್ ಘಟಕಗಳು ಮತ್ತು ಬಿಡಿ ಭಾಗಗಳ ಜೋಡಣೆ ಉದ್ಯಮಗಳನ್ನು ಉತ್ತೇಜಿಸಲು ಸರ್ಕಾರವು ಪ್ರಯತ್ನಿಸುತ್ತಿದೆ. ಈ ಯೋಜನೆಯು ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್ ಇನ್ ಒನ್ ಪಿಸಿಗಳು, ಸರ್ವರ್‌ಗಳು ಮತ್ತು ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಸಾಧನಗಳ ತಯಾರಿಕೆ ಮತ್ತು ಜೋಡಣೆಯನ್ನು ಒಳಗೊಂಡಿದೆ. ಹಾಗೆ ಮಾಡುವ ಮೂಲಕ, ಭಾರತದ ದೇಶೀಯ ಐಟಿ ಹಾರ್ಡ್‌ವೇರ್ ಉತ್ಪಾದನಾ ಪರಿಸರ ವ್ಯವಸ್ಥೆಗೆ ವೇಗ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ, ಈ ಮೂಲಕ ಐಟಿ ಹಾರ್ಡ್‌ವೇರ್ ಉದ್ಯಮದಲ್ಲಿ ಭಾರತೀಯ ಚಾಂಪಿಯನ್ ಗಳನ್ನು ಸೃಷ್ಟಿಸುವುದು ಸರ್ಕಾರದ ಉದ್ದೇಶವಾಗಿದೆ.
ಮೌಲ್ಯ ಸರಪಳಿಯಲ್ಲಿ ದೊಡ್ಡ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ದೇಶೀಯ ಉತ್ಪಾದನೆ ಉತ್ತೇಜಿಸಲು ಮತ್ತು ಧನಸಹಾಯದ ಪ್ರೋತ್ಸಾಹ ನೀಡಲು ಸರ್ಕಾರವು ಮೇ ತಿಂಗಳಲ್ಲಿ ಐಟಿ ಹಾರ್ಡ್‌ವೇರ್ ವಲಯಕ್ಕೆ 17,000 ಕೋಟಿ ರೂಪಾಯಿ ಗಾತ್ರದ ಪಿಎಲ್ಐ 2.0 ಯೋಜನೆಯನ್ನು ಅನಾವರಣಗೊಳಿಸಿದೆ. 2021ರಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾದ ಯೋಜನೆಗೆ ಹೋಲಿಸಿದರೆ, ಅನುದಾನವನ್ನು 2 ಪಟ್ಟು ಹೆಚ್ಚಿಸಲಾಗಿದೆ. ಈ ಯೋಜನೆ ಜಾರಿಯಾದ ನಂತರ, ಈ ಯೋಜನೆಯಲ್ಲಿ ಭಾಗವಹಿಸುವ ಕಂಪನಿಗಳಿಗೆ ಲಭ್ಯವಿರುವ ಗರಿಷ್ಠ ಪ್ರೋತ್ಸಾಹಧನದ ಮೇಲೆ ಮಿತಿ ಇರುತ್ತದೆ.
ಈ ಯೋಜನೆಯು ಸುಮಾರು 3.35 ಲಕ್ಷ ಕೋಟಿ ರೂ. ಮೌಲ್ಯದ ಒಟ್ಟಾರೆ ಉತ್ಪಾದನೆ ಅಥವಾ ತಯಾರಿಕೆಗೆ ಕಾರಣವಾಗುವ ನಿರೀಕ್ಷೆಯಿದೆ, ವಿದ್ಯುನ್ಮಾನ ಸರಕುಗಳ ತಯಾರಿಕಾ ವಲಯಕ್ಕೆ ಸುಮಾರು 2,430 ಕೋಟಿ ರೂ. ಹೆಚ್ಚುವರಿ ಹೂಡಿಕೆ ಆಕರ್ಷಿಸುವ ಮತ್ತು 75,000 ಹೆಚ್ಚುವರಿ ನೇರ ಉದ್ಯೋಗಗಳನ್ನು ಸೃಷ್ಟಿಸುವ ಅಪಾರ ನಿರೀಕ್ಷೆಯಿದೆ.
ಸಭೆಯಲ್ಲಿ ತಜ್ಞರು, ಉದ್ಯಮ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸ್ಟಾರ್ಟಪ್‌ಗಳು ಸೇರಿದಂತೆ ತಂತ್ರಜ್ಞಾನ ವಲಯದ ಪಾಲುದಾರರು ಪಾಲ್ಗೊಳ್ಳಲಿದ್ದಾರೆ. ಸುಧಾರಿತ ಪ್ರೊಸೆಸರ್ ಗಳು, ಬೌದ್ಧಿಕ ಆಸ್ತಿಯ ಗುಣಲಕ್ಷಣಗಳು (ಐಪಿಗಳು) ಮತ್ತು ಎಂಬೆಡೆಡ್ ಸಿಸ್ಟಮ್‌ಗಳ ಅಭಿವೃದ್ಧಿ ಉತ್ತೇಜಿಸುವ ಕುರಿತು ಸಭೆಯಲ್ಲಿ ಸಂವಾದ ಮತ್ತು ಸಮಾಲೋಚನೆಗಳು ನಡೆಯಲಿವೆ. ಈ ಸಮಾಲೋಚನೆಗಳು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಾನೂನು ಮತ್ತು ನೀತಿ ನಿರೂಪಣೆಯ ಸಮಾಲೋಚನಾ ವಿಧಾನಕ್ಕೆ ಅನುಗುಣವಾಗಿರುತ್ತವೆ. ಸಚಿವರು ನಾಳೆ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದು, ಸಮಾಲೋಚನೆಯ ನಂತರ ಅವರು ಮಾಧ್ಯಮ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.