ಬೆಂಗಳೂರಿನ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾದ ಭಾರಿ ಪ್ರವಾಹವು ರಿಯಲ್ ಎಸ್ಟೇಟ್ ಯೋಜನೆಗಳಿಗೆ ತೊಡಕಾಗಿ ಪರಿಣಮಿಸಿದೆ. ವಿಶೇಷವಾಗಿ ಟೆಕ್ ಪ್ರದೇಶಗಳು ಮತ್ತು ಹೊರವಲಯಗಳ ವಸತಿ ಯೋಜನೆಗಳಿಗೆ ಸಮಸ್ಯೆ ಉಂಟಾಗಿದೆ.
ಈಗ ಸಂಭಾವ್ಯ ಮನೆ ಖರೀದಿದಾರರು, “ನಿಮ್ಮ ಬಿಲ್ಡಿಂಗ್ ಇರುವ ಪ್ರದೇಶದಲ್ಲೂ ಪ್ರವಾಹದಿಂದಾಗಿ ಸಮಸ್ಯೆ ಉಂಟಾಗಿತ್ತೇ?”, “ನೀವು ಡೆವಲಪ್ ಮಾಡುತ್ತಿರುವ ಪ್ರದೇಶವು ಮಳೆ ನೀರು ಚರಂಡಿಯಿಂದ ಎಷ್ಟು ದೂರದಲ್ಲಿದೆ?”, “ಈ ಪ್ರದೇಶದಲ್ಲೂ ಪ್ರವಾಹ ಉಂಟಾಗುವುದಿಲ್ಲ ಎಂದು ಸಾಕ್ಷೀಕರಿಸಲು ನಿಮ್ಮ ಬಳಿ ನಕ್ಷೆ ಇದೆಯೇ?” ಹೀಗೆ ಹಲವು ಪ್ರಶ್ನೆಗಳನ್ನು ರಿಯಲ್ ಎಸ್ಟೇಟ್ ಕಂಪನಿಗಳ ಎದುರು ಇಡುತ್ತಿದ್ದಾರೆʼ ಎಂದು ರಿಯಲ್ ಎಸ್ಟೇಟ್ ಕಂಪನಿಯೊಂದರ ಸೇಲ್ಸ್ ಹೆಡ್ ವಿವರಿಸುತ್ತಾರೆ.
ಪ್ರವಾಹದಿಂದಾಗಿ ತೊಂದರೆಗೆ ಒಳಗಾಗಿದ್ದ ಯಮಲೂರು, ಬೆಳ್ಳಂದೂರು, ವೈಟ್‌ಫೀಲ್ಡ್, ಔಟರ್ ರಿಂಗ್ ರೋಡ್, ಸರ್ಜಾಪುರ ರಸ್ತೆ, ಮಾರತ್ತಹಳ್ಳಿ ಮತ್ತು ಬಿಇಎಂಎಲ್ ಲೇಔಟ್ ಪ್ರದೇಶಗಳಲ್ಲಿ ಮನೆ ಖರೀದಿ ಮಾಡುವವರು ಸೂಕ್ತ ಜಾಗ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಸಾಕಷ್ಟು ಎಚ್ಚರ ವಹಿಸುತ್ತಿದ್ದಾರೆ. ಪ್ರವಾಹ ಪೂರ್ವ ಸಂದರ್ಭದಲ್ಲಾಗಿದ್ದರೆ ಈ ಏರಿಯಾಗಳು ಮನೆ ಖರೀದಿದಾರರ ನೆಚ್ಚಿನ ತಾಣಗಳಾಗಿದ್ದವು.
ಸಂಭವನೀಯ ಖರೀದಿದಾರರಲ್ಲದೇ, ಈಗಾಗಲೇ ಈ ಪ್ರದೇಶಗಳ ಸ್ವತ್ತುಗಳಲ್ಲಿ ಹೂಡಿಕೆ ಮಾಡಿರುವವರ ಭಾವನೆಗಳಿಗೆ ಕೂಡ ಪ್ರವಾಹವು ಧಕ್ಕೆ ತಂದಿದೆ.
ʻನಾನು ಒಂದು ವರ್ಷದ ಈಚೆಗೆ ವೈಟ್‌ಫೀಲ್ಡ್‌ನಲ್ಲಿ 1.2 ಕೋಟಿ ರೂಪಾಯಿಗೆ ಮನೆ ಖರೀದಿ ಮಾಡಿದ್ದೇನೆ. ಆಗ ಅದು ಒಳ್ಳೆಯ ಡೀಲ್ ಎನ್ನಿಸಿತ್ತು. ಆದರೆ ಪ್ರವಾಹ ಸಂದರ್ಭದಲ್ಲಿ ಆರು ಅಡಿ ಎತ್ತರಕ್ಕೆ ನಿಂತಿದ್ದ ನೀರು ನನ್ನ ಕಣ್ಣು ತೆರೆಸಿದೆʼ ಎಂದು ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ನೋವು ತೋಡಿಕೊಳ್ಳುತ್ತಾರೆ. ʻಈಗ ಈ ಮನೆ ಮಾರಿ ಬೇರೆ ಕಡೆ ಖರೀದಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ. ಮನೆಗಿಂತ ಹೆಚ್ಚಾಗಿ ತಳಮಹಡಿಯಲ್ಲಿ ನಿಲ್ಲಿಸಿದ್ದ ಕಾರಿನ ಸುರಕ್ಷತೆ ನನಗೆ ನಿರಂತರವಾಗಿ ಕಾಡುತ್ತಿತ್ತುʼ ಎನ್ನುತ್ತಾರೆ ಅವರು.
ಅವರು ವಾಸವಾಗಿರುವಂತಹ ಪ್ರದೇಶಗಳಲ್ಲಿ ದರ ಕುಸಿಯುವ ನಿರೀಕ್ಷೆ ಇರುವುದರಿಂದ ಕಾಯುವುದರ ಹೊರತಾಗಿ ಬೇರೆ ದಾರಿಯಿಲ್ಲ. ಇದೇ ಪರಿಸ್ಥಿತಿಯೇ ಇನ್ನೂ ಅನೇಕರದ್ದು.
ಪರಿಣಾಮ ಇಲ್ಲ:
ಆದರೆ ಕೆಲವು ಬಿಲ್ಡರ್‌ಗಳು ಮತ್ತು ಪ್ರಮೋಟರ್‌ಗಳು, ಈ ವಿಪತ್ತು ರಿಯಲ್ ಎಸ್ಟೇಟ್ ಮೇಲೆ ಏನೂ ಪರಿಣಾಮ ಬೀರಲಾರದು ಎಂದು ಹೇಳುತ್ತಾರೆ.
“ಪ್ರವಾಹವು ರಿಯಲ್ ಎಸ್ಟೇಟ್ ಕ್ಷೇತ್ರಕ್ಕಿಂತ ನಗರದ ವರ್ಚಸ್ಸಿಗೆ ಹೆಚ್ಚು ಹಾನಿ ಮಾಡಿದೆ” ಎಂದು ರಿಯಲ್ ಎಸ್ಟೇಟ್ ಏಜೆನ್ಸಿಯೊಂದರ ವ್ಯವಸ್ಥಾಪಕ ನಿರ್ದೇಶಕರು ಹೇಳುತ್ತಾರೆ.
“ಮಳೆ ಮುಗಿದ ನಂತರ ಈ ಪರಿಸ್ಥಿತಿ ಮಾಯವಾಗುತ್ತದೆ. ಅದೂ ಅಲ್ಲದೆ, ಸರ್ಕಾರ ಈ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡಿ ಚರಂಡಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ ನಂತರ ಎಲ್ಲವೂ ಸಹಜ ಸ್ಥಿತಿಗೆ ಬರುತ್ತದೆ,” ಎಂಬುದು ಅವರ ವಿಶ್ವಾಸ.
ಇನ್ನೊಬ್ಬ ಆಸ್ತಿ ಏಜೆಂಟ್, 2015ರ ಪ್ರವಾಹ ಪರಿಸ್ಥಿತಿಯ ಹೊರತಾಗಿಯೂ ಚೆನ್ನೈನ ರಿಯಲ್ ಎಸ್ಟೇಟ್ ವಲಯವು ಭಾರಿ ಕುಸಿತ ಕಂಡಿರಲಿಲ್ಲ ಎಂದು ಗಮನ ಸೆಳೆಯುತ್ತಾರೆ. ಅದಕ್ಕೆ ವಿರುದ್ಧವಾಗಿ, ಆ ವರ್ಷ ತಮಿಳುನಾಡಿನ ರಾಜಧಾನಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಶೇ 60ರಷ್ಟು ಪ್ರಗತಿ ಕಂಡಿತ್ತು ಎಂದು ಅವರು ವಿವರಿಸಿದರು.
ಅದೇ ರೀತಿ, ಐಟಿ ಟೆಕ್ ಪಾರ್ಕ್‌ಗಳಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಾದಂತೆ, ಅವರು ಕೆಲಸಕ್ಕೆ ಹತ್ತಿರವಾದ ಸ್ಥಳದಲ್ಲೇ ವಾಸಿಸಲು ಇಷ್ಟಪಡುವುದರಿಂದ ಬೆಂಗಳೂರಿನಲ್ಲಿ ಕೂಡ ರಿಯಲ್ ಎಸ್ಟೇಟ್ ಉದ್ಯಮ ಭಾರಿ ಪ್ರಮಾಣದಲ್ಲಿ ಚಿಗುರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಒಬ್ಬರ ನಷ್ಟದಲ್ಲಿ ಇನ್ನೊಬ್ಬರ ಲಾಭ ಅಡಗಿರುತ್ತದೆ ಎನ್ನುವ ಅವರು, ಪ್ರವಾಹ ಬಾಧೆಗೆ ಒಳಗಾಗದ ಪ್ರದೇಶಗಳಲ್ಲಿ ಆಸ್ತಿಗಳಿಗೆ ಬೇಡಿಕೆ ಹೆಚ್ಚಲಿದೆ ಮತ್ತು ಬಾಡಿಗೆ ಮೌಲ್ಯವೂ ಹೆಚ್ಚಲಿದೆ ಎಂಬ ಅಂಶವನ್ನು ಗುರುತಿಸುತ್ತಾರೆ.