26.7 C
Bengaluru
Sunday, December 22, 2024

ಧಾರವಾಡದಲ್ಲಿ KIADB ಭೂ ಕರ್ಮಕಾಂಡ: ದಾಖಲೆಗಳಲ್ಲಿ ಬಹಿರಂಗ ಒಂದೇ ಭೂಮಿಗೆ ಎರಡು ಸಲ ಪರಿಹಾರ: 21 ಕೋಟಿ ರೂ. ವಂಚನೆ !

ಬೆಂಗಳೂರು, ಡಿ. 06: ಕೈಗಾರಿಕೆಗಳ ಅಭಿವೃದ್ಧಿಗೆ ಭೂಮಿ ಜತೆಗೆ ಮೂಲ ಸೌಕರ್ಯ ಕಲ್ಪಿಸಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ‘ಮಹಾ ಭ್ರಷ್ಟಾಚಾರ ಮಂಡಳಿ’ಯಾಗಿ ರೂಪಗೊಂಡಿದೆ.

ಭೂ ಪರಿಹಾರದಲ್ಲಿ, ಭೂ ಸ್ವಾಧೀನದಲ್ಲಿ ಅಕ್ರಮ ಎಸಗಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಕೋಟಿ ಕೋಟಿ ಲೂಟಿ ಮಾಡಿ ಸರ್ಕಾರದ ಭೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿದ್ದಾರೆ. ಈ ಹಿಂದೆ ಕೆಐಎಡಿಬಿ ಹಗರಣದಲ್ಲಿ ಸಿಲುಕಿ ಈ ಹಿಂದೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರೇ ಜೈಲು ಸೇರಿದ್ದರು. ಧಾರವಾಡದಲ್ಲಿ ಅಭಿವೃದ್ಧಿ ಪಡಿಸಿರುವ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಒಂದೇ ಭೂಮಿಗೆ ಎರಡು ಸಲ ಕೋಟಿ ಕೋಟಿ ಭೂ ಪರಿಹಾರವನ್ನು ನೀಡುವ ಮೂಲಕ ಕೆಐಎಡಿಬಿ ಧಾರವಾಡ ವಲಯದ ಅಧಿಕಾರಿಗಳು ಅಕ್ರಮ ಎಸಗಿರುವ ದಾಲೆಗಳು revenuefacts.com ಗೆ ಸಿಕ್ಕಿವೆ. ಈ ಕುರಿತ ವಿಶೇಷ ವರದಿ ಇಲ್ಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತವರು ನೆಲ ಹುಬ್ಬಳ್ಳಿ ಧಾರವಾಡದಲ್ಲಿ ಕೈಗಾರಿಕಾ ವಲಯಗಳನ್ನು ಸ್ಥಾಪಿಸಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಧಾರವಾಡದ ಕೆಳಗೇರಿ, ಮುಮ್ಮಿಗಟ್ಟಿ, ಕೋತೂರ್ ಹಳ್ಳಿಗಳಲ್ಲಿ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಎರಡೆರಡು ಸಲ ಪರಿಹಾರ ನೀಡಿ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟವುಂಟು ಮಾಡಲಾಗಿದೆ. ಈ ಭೂ ಸ್ವಾಧೀನ ಪ್ರಕ್ರಿಯೆಲ್ಲಿ ಕೆಐಎಡಿಬಿ ಅಧಿಕಾರಿಗಳು ಶಾಮೀಲಾಗಿ ಒಂದೇ ಭೂಮಿಗೆ ಎರಡೆರಡು ಸಲ ಪರಿಹಾರ ನೀಡಿ ಭಾರೀ ಅಕ್ರಮ ಎಸಗಿರುವುದು ದಾಖಲೆಗಳಲ್ಲಿ ಬಹಿರಂಗವಾಗಿದೆ. ಈ ದಾಖಲೆಗಳು ರೆವಿನ್ಯೂ ಫ್ಯಾಕ್ಟ್ ಗೆ ಲಭ್ಯವಾಗಿವೆ.

ಹುಬ್ಬಳ್ಳಿ ಧಾರವಾಡದಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವ ಹಲವು ಯೋಜನೆಗಳನ್ನು ಕೆಐಎಡಿಬಿ ಕೈಗೆತ್ತಿಕೊಂಡಿದೆ. ಈ ಯೋಜನೆಗಳಿಗಾಗಿ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ.

ದಶಕದ ಹಿಂದೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಸ್ವಾಧೀನ ಪಡಿಸಿಕೊಂಡಿದ್ದ ರೈತರ ಭೂಮಿಗೆ ಧಾರವಾಡ ವಲಯ ವಿಶೇಷ ಭೂ ಸ್ವಾಧೀನಾಧಿಕಾರಿಗಳು 2012- 13 ರಲ್ಲಿಯೇ ಪರಿಹಾರ ವಿತರಣೆ ಮಾಡಿದ್ದಾರೆ. ಇದಾದ ಬಳಿಕ ಆದೇ ಜಮೀನುಗಳಿಗೆ 2022 ರಲ್ಲಿ ಪುನಃ ಮತ್ತೊಮ್ಮೆ ಕೋಟಿ ಕೋಟಿ ಪರಿಹಾರ ವಿತರಣೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕೆಐಎಡಿಬಿ ನಡೆಸಿರುವ ಆಂತರಿಕ ತನಿಖೆಯಲ್ಲಿ ಈ ಕರ್ಮಕಾಂಡ ಬಟಾ ಬಯಲಾಗಿದೆ.

ಕೆಐಎಡಿಬಿ ಧಾರವಾಡ ವಲಯ ಕಚೇರಿಯಲ್ಲಿ 2012- 13 ರಲ್ಲಿ ಸ್ವಾಧೀನಗೊಂಡ ಭೂಮಿಗೆ ಪರಿಹಾರ ವಿತರಿಸಿದ್ದು, ಇದೇ ಭೂಮಿಗೆ 2022 ರಲ್ಲೂ ಪರಿಹಾರ ವಿತರಣೆ ಮಾಡಿ ಕೆಐಎಡಿಬಿ ಅಧಿಕಾರಿಗಳು ಭಾರೀ ಅಕ್ರಮ ಎಸಗಿದ್ದಾರೆ. ಬರೋಬ್ಬರಿ 21 ಕೋಟಿ ರೂಪಾಯಿ ಪರಿಹಾರ ನೀಡಿದ್ದು, ಕಮೀಷನ್ ಅಸೆಗೆ ಬಿದ್ದು ಈ ಅಕ್ರಮ ಎಸಗಿದರೇ ಎಂಬ ಅನುಮಾನ ಮೂಡಿಸಿದೆ.

ಒಂದೇ ಭೂಮಿಗೆ ಎರಡು ಸಲ ಪರಿಹಾರ ಪಡೆದ ಭೂ ಸ್ವಾಧೀನ ಪ್ರಕರಣಗಳ ವಿವರ.
ಪ್ರಕರಣ 1 :ಮುರಳೀಧರ್ s/o ಶ್ರೀನಿವಾಸರಾವ್ ಜಹಗೀರ್ ಎಂಬುವರಿಗೆ ಧಾರವಾಡ ತಾಲೂಕಿನ ಕೆಳಗೇರಿ ಗ್ರಾಮದ ಸರ್ವೆ ನಂಬರ್ 731/2 ರಲ್ಲಿರುವ 15 ಎಕರೆ ಭೂಮಿಗೆ ಎಕರೆಗೆ ತಲಾ 26 ಲಕ್ಷ ರೂ. ನಂತೆ 2012-13 ರಲ್ಲಿ 4,11, 45,000 ರೂ.ಗಳನ್ನು 2012 ರಲ್ಲಿ ಚೆಕ್ /ಆರ್‌ಟಿಜಿಎಸ್ ನಂಬರ್ 572482 ಮೂಲಕ ಭೂ ಮಾಲೀಕರಾದ ಸುರೇಂದ್ರ ಶ್ರೀನಿವಾಸ ರಾವ್, ವಿಜಯೇಂದ್ರ ಶ್ರೀನಿವಾಸ ರಾವ್, ನಾಗರಾಜ ಶ್ರೀನಿವಾಸರಾವ್, ಮುರಳೀಧರ ಶ್ರೀನಿವಾಸ್ ರಾವ್ ಅವರಿಗೆ ಪಾವತಿ ಮಾಡಲಾಗಿತ್ತು. 06-09-2012 ರಲ್ಲಿ ಪರಿಹಾರ ಹಣ ಪಾವತಿ ಮಾಡಲಾಗಿತ್ತು. ಈ ವೇಳೆ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಎಸ್‌.ಎಸ್. ಸಂಪಗಾಂವ ಅವರು ಕಾರ್ಯ ನಿರ್ವಹಿಸಿದ್ದರು.

ಅಚ್ಚರಿ ಏನೆಂದರೆ ಇದೇ ಜಮೀನಿಗೆ 2022 ರಲ್ಲಿ ಮುರಳೀಧರ್ s/o ಶ್ರೀನಿವಾಸರಾವ್ ಜಹಗೀರ್ ರವರಿಗೆ 31/11/2022 ರಲ್ಲಿ ಕೆಳಗೇರಿ ಸರ್ವೆ ನಂಬರ್ 731/2 ಕ್ಕೆ ರೂ. 4,11, 45,000 ( 4 ಕೋಟಿ ರೂ. ) ಹಣವನ್ನು ಎರಡನೇ ಸಲ ಪರಿಹಾರ ವಿತರಿಸಿ ಕೆಐಡಿಬಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ. ಈ ಹಿಂದೆ ಭೂ ಪರಿಹಾರ ನೀಡಿದ ವಿಶೇಷ ಭೂ ಸ್ವಾಧೀನ ಅಧಿಕಾರಿ ಅವರ ಸಹಿ ಇಲ್ಲದೇ ಪರಿಹಾರ ವಿತರಿಸಿದ್ದು, ಭಾರೀ ಅಕ್ರಮ ನಡೆದಿದೆ.

ಪ್ರಕರಣ – 02 :
ಧಾರವಾಡ ಜಿಲ್ಲೆಯ ಕೋತೂರು ಗ್ರಾಮದ ಮೆಹಬೂಬ್ ಸುಬಾನಿ ಶಿರೂರ್ ಎಂಬುವರಿಗೆ ಸೇರಿದ ಕೋತೂರು ಸರ್ವೆ ನಂಬರ್ 635 ರಲ್ಲಿರುವ ಎರಡು ಎಕರೆ ಅರು ಗಂಟೆ ಜಮೀನಿಗೆ 2012- ರಲ್ಲಿ ಕೆಐಎಡಿಬಿ ವತಿಯಿಂದ ಪರಿಹಾರ ನೀಡಲಾಗಿದೆ. ಇದೇ ಭೂಮಿಗೆ ಮಹಬೂಬ್ ಸುಭಾನಿ ಶಿರೂರ್ ಅವರಿಗೆ 30/03/2022 ರಲ್ಲಿ ಆರ್‌ಟಿಜಿಎಸ್ ನಂಬರ್ 47 ರ ಮೂಲಕ 64 ಲಕ್ಷ ರೂ. ಪರಿಹಾರ ನೀಡಲಾಗಿದೆ. ಈ ಭೂಮಿಗೆ ಈ ಹಿಂದೆಯೂ ಪರಿಹಾರ ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.

ಪ್ರಕರಣ – 03 : ಮುಮ್ಮಿಗಟ್ಟಿ ಗ್ರಾಮದ ಸರ್ವೆ ನಂಬರ್ 150 ರಲ್ಲಿ ಸಂಜಯ್ s/o ಅಬಾ ಸಹೇಬ್ ದೇಸಾಯಿ ಅವರಿಗೆ ಸೇರಿದ 12 ಎಕರೆ ಭೂಮಿಗೆ 2012 -13 ರಲ್ಲಿ 3.17 ಕೋಟಿ ರೂ. ಪರಿಹಾರ ಪಡೆಯಲಾಗಿದೆ. ಇದೇ ಜಮೀನಿಗೆ 28/02/2022 ರಲ್ಲಿ ಪುನಃ ಸಂಜಯ್ ಅಬಾ ಸಹೇಬ್ ಅವರಿಗೆ ಆರ್‌ಟಿಜಿಎಸ್ 392 ಮೂಲಕ 3.17,85,000 ರೂ. ಪರಿಹಾರ ನೀಡಲಾಗಿದೆ.
ಇದೇ ರೀತಿ ಎಂಟು ರೈತರ ಹೆಸರಿನಲ್ಲಿ ಅಕ್ರಮ ಎಸಗಿದ್ದು, ಬರೋಬ್ಬರಿ 21, 14, 78,468 ರೂ. ಅಕ್ರಮ ಎಸಗಲಾಗಿದೆ.

ಕೆಳಗೇರಿ ಗ್ರಾಂದ ಸರ್ವೆ ನಂಬರ್ 707 ರಲ್ಲಿರುವ 5.8 ಮತ್ತು 720 ರಲ್ಲಿರುವ 4.9 ಎಕರೆ ಭೂಮಿಗೆ 2022 ಏಪ್ರಿಲ್ 1 ರಂದು 2.51 ಕೋಟಿ ರೂ. ಎರಡನೇ ಸಲ ಪರಿಹಾರ ಶಿವನಗೌಡ ವೆಂಕಟಗೌಡ ಪಾಟೀಲ ಹೆಸರಿಗೆ ಅರ್‌ಟಿಜಿಎಸ್ 05 ರ ಮೂಲಕ ವಿತರಣೆ ಮಾಡಲಾಗಿದೆ.

ಕೆಳಗೇರಿ ಗ್ರಾಮದ ಸರ್ವೆ ನಂಬರ್ 709 ರಲ್ಲಿರುವ ಮೂರು ಎಕರೆ ಜಮೀನಿಗೆ 2022 ಏಪ್ರಿಲ್ 19 ರಂದು ಅರ್‌ಟಿಜಿಎಸ್ 12 ರ ಮೂಲಕ ಬಸಪ್ಪ ನಾಗಪ್ಪ ಶಿರೂರು ಅವರಿಗೆ 78 ಲಕ್ಷ ರೂ. ಭೂ ಸ್ವಾಧೀನ ಪರಿಹಾರ ದನ ನೀಡಲಾಗಿದೆ. ಇದೇ ರೀತಿ ಎಂಟು ಪ್ರಕರಣದಲ್ಲಿ ಎರಡನೇ ಸಲ ಪರಿಹಾರ ವಿತರಣೆ ಮಾಡಿ ಅಕ್ರಮ ಎಸಗಲಾಗಿದೆ.

ಇದರಲ್ಲಿ ಕೆಐಎಡಿಬಿ ಅಧಿಕಾರಿಗಳು ಶಾಮೀಲಾಗಿದ್ದು, ತನಿಖೆ ನಡೆದಲ್ಲಿ ಅಕ್ರಮದ ಹೂರಣ ಬಯಲಿಗೆ ಬರಲಿದೆ. ಈಗಾಗಲೇ ಈ ಅಕ್ರಮಕ್ಕೆ ಸಂಬಂಧಪಟ್ಟಂತೆ ಜನ ಜಾಗೃತಿ ಸಂಘ ಧಾರವಾಡ ಜಿಲ್ಲಾಧಿಕಾರಿಗೆ ದೂರು ನೀಡಿ ಸಿಬಿಐ ತನಿಖೆಗೆ ಆಗ್ರಹಿಸಿದೆ. ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲೆಗಳು ಬಹಿರಂಗವಾಗಿದ್ದು, ಕೆಲವು ಏಜೆಂಟರು ಮತ್ತು ಅಧಿಕಾರಿಗಳು ಶಾಮೀಲಾಗಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ. ಪರಿಹಾರ ಹೆಚ್ಚಳ ಕೋರಿ ಕಾನೂನು ಹೋರಾಟ ನಡೆಸುತ್ತಿದ್ದ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಅರೋಪವಿದ್ದು, ಇದರಲ್ಲಿ ಕಾಣದ ಕೈಗಳ ಕೈವಾಡ ಕೇಳಿ ಬರುತ್ತಿದೆ.

ಏನಿದು ಕೆಐಎಡಿಬಿ : ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲು ಅಗತ್ಯ ಮೂಲ ಸೌಕರ್ಯ ರೂಪಿಸಲು 1966 ರಲ್ಲಿ ಕೆಐಎಡಿಬಿ ಸ್ಥಾಪಿಸಲಾಗಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಈವರೆಗೂ 170 ಕ್ಕೂ ಹೆಚ್ಚು ಕೈಗಾರಿಕಾ ವಲಯಗಳನ್ನು ಸ್ಥಾಪಿಸಿದೆ. ಪದೇ ಪದೇ ಭೂ ಸ್ವಾಧೀನದಲ್ಲಿ ಅಕ್ರಮ ಎಸಗುತ್ತಿದ್ದು, ಮುಖ್ಯಮಂತ್ರಿಗಳ ತವರು ಜಿಲ್ಲೆಧಾರವಾಡದಲ್ಲೂ ಕೆಐಎಡಿಬಿ ಭೂ ಪರಿಹಾರದಲ್ಲಿ ಅಕ್ರಮ ನಡೆದಿದ್ದು, ತನಿಖೆ ನಡೆದಲ್ಲಿ ಮತ್ತಷ್ಟು ಅಕ್ರಮ ಬಯಲಿಗೆ ಬರಲಿದೆ.

Related News

spot_img

Revenue Alerts

spot_img

News

spot_img