ಬೆಂಗಳೂರು: ನಗರ ಪ್ರದೇಶಗಳಲ್ಲಿ ಮನೆ ಕಟ್ಟುವುದೇ ಎಷ್ಟೋ ಜನರಿಗೆ ಕನಸಿನ ಮಾತಾಗಿದ್ದರೆ, ವಿಲ್ಲಾಗಳಲ್ಲಿ ವಾಸಿಸಬಹುದು ಎಂಬುದು ಗಗನ ಕುಸುಮವೇ ಸರಿ. ವಿಲ್ಲಾ ಖರೀದಿಸಬೇಕು ಎಂದರೆ ಕೊಟ್ಯಂತರ ರೂಪಾಯಿ ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ, ಸಾಮಾನ್ಯವರ್ಗದವರೂ ಸಹ ವಿಲ್ಲಾಗಳಲ್ಲಿ ವಾಸಿಸುವ ಕನಸನ್ನು ನನಸು ಮಾಡಲು ಹೊರಟಿದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ.
ಬೆಂಗಳೂರು ನಗರದ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ದೇಶಿ ಮಾದರಿಯಲ್ಲಿ ವಿಲ್ಲಾ ನಿರ್ಮಿಸಲಾಗುತ್ತಿದೆ. ಈ ಸಂಬಂಧ ಬಿಡಿಎ ಪ್ರಾಯೋಗಿಕವಾಗಿ ತುಮಕೂರು ರಸ್ತೆ ಬಳಿ ಇರುವ ಆಲೂರಿನಲ್ಲಿ ಸಣ್ಣ ಪ್ರಮಾಣದ ವಿಲ್ಲಾಗಳನ್ನು ನಿರ್ಮಿಸಿ ಯಶಸ್ವಿಯಾಗಿದೆ. ಇದೇ ಮಾದರಿಯಾಗಿಟ್ಟುಕೊಂಡು ಹೆಸರಘಟ್ಟ ಸಮೀಪದ ಸಂಡೆಕೊಪ್ಪ ಬಳಿ ಹುಣ್ಣಿಗೆರೆ ಎಂಬ ಗ್ರಾಮದಲ್ಲಿ 26 ಎಕರೆ ಪ್ರದೇಶದಲ್ಲಿ ಬೃಹತ್ ವಿಲ್ಲಾ ಯೋಜನೆಯನ್ನು ರೂಪಿಸಿದೆ.
ಬಿಡಿಎ ಇತಿಹಾಸದಲ್ಲಿಯೇ ಮೊದ ಬಾರಿಗೆ ವಿಲ್ಲಾಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದ್ದು, 2023ರ ಯುಗಾದಿ ವೇಳೆಗೆ ವಿಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಇವುಗಳ ಹಂಚಿಕೆಗಾಗಿ ಅರ್ಜಿ ಕರೆಯುವ ನಿರೀಕ್ಷೆ ಇದೆ. ವಿಲ್ಲಾಗಳ ದರ ಎಷ್ಟು ಇರಬಹುದು ಎಂಬುದು ಇನ್ನೂ ನಿರ್ಧಾರ ಆಗಿಲ್ಲ.
ಸದ್ಯ ಬಿಡಿಎದಿಂದ ನಿರ್ಮಿಸುತ್ತಿರುವ ಈ ವಿಲ್ಲಾಗಳು ನಿರ್ಮಾಣ ಹಂತದಲ್ಲಿವೆ. 26 ಎಕರೆ ಪ್ರದೇಶದಲ್ಲಿ 332 ವಿಲ್ಲಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ 4 ಬಿಎಚ್‌ಕೆ ಹೊಂದಿರುವ 121 ಮತ್ತು 3 ಬಿಎಚ್‌ಕೆ ಹೊಂದಿರುವ 170 ವಿಲ್ಲಾಗಳು ನಿರ್ಮಾಣ ಆಗುತ್ತಿವೆ. 4 ಬಿಎಚ್‌ಕೆ ವಿಲ್ಲಾ 1800 ಚ.ಅಡಿ ಹೊಂದಿದ್ದರೆ 3 ಬಿಎಚ್‌ಕೆ ವಿಲ್ಲಾ 1300 ಚ.ಅಡಿ ಹೊಂದಿವೆ. ಈ ವಿಲ್ಲಾಗಳಿಗೆ ಹೆಚ್ಚಿನ ಕಾಂಕ್ರೀಟ್, ಕಬ್ಬಿಣ ಬಳಸದೆ ದೇಸಿ ಟಚ್ ನೀಡಲಾಗಿದೆ. ಕಿಟಕಿ ಬಾಗಿಲುಗಳು ಸಂಪೂರ್ಣ ಮರದ್ದೇ ಆಗಿವೆ. ಮನೆಯ ಮುಂದೆ ಗ್ರಾಮೀಣ ಮನೆಗಳ ಮಾದರಿಯ ಹೆಂಚುಗಳನ್ನು ಹಾಕಲಾಗಿದೆ. ನೆಲಹಾಸಿಗೆ ಇಂಟರ್‌ಲಾಕಿಂಗ್ ಮಾಡಲಾಗುತ್ತಿದೆ.
ಈ ವಿಲ್ಲಾಗಳಲ್ಲಿ ವಾಸಿಸುವ ಜನರಿಗಾಗಿ ಇದೇ ದಿನಸಿ ಮಳಿಗೆ, ಕ್ಲಬ್ ಹೌಸ್, ಈಜುಕೊಳ, ಕಿರು ಉದ್ಯಾನ, ಆಟದ ಮೈದಾನ ಇದೆ. ಈ ಆವರದಲ್ಲಿ ಗ್ರೀನರಿ ಹೆಚ್ಚಿಸುವ ಉದ್ದೇಶದಿಂದ ಎರಡು ಸಾವಿರ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಇದರಲ್ಲಿ 1200 ಕ್ಕೂ ಹೆಚ್ಚಿನ ಹೊಂಗೆ, ನೇರಳೆ, ರಾಮಫಲ, ಮಹಾಗನಿ, ಹೊನ್ನೆ, ಟೀಕ್, ಆಕಾಶ ಮಲ್ಲಿಗೆ, ಸಂಪಿಗೆ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ.