ಬೆಂಗಳೂರು, ಜ. 01: ರಾಜಧಾನಿಯ ವಿವಿಧ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಜಂಟಿ ಖಾತೆ ದಾಸ್ತವೇಜುಗಳನ್ನು ನಿಯಮ ಬಾಹಿರವಾಗಿ ನೋಂದಣಿ ಮಾಡಿ ಅಕ್ರಮ ಎಸಗಿರುವ ಸಂಗತಿ ಬಯಲಾಗಿದೆ.
ಜಂಟಿ ಖಾತೆಯ ಎರಡು ದಾಸ್ತವೇಜನ್ನು ನಿಯಮಬಾಹಿರವಾಗಿ ನೋಂದಣಿ ಮಾಡಿರುವ ಬನಶಂಕರಿ ಹಿರಿಯ ಉಪ ನೋಂದಣಾಧಿಕಾರಿ ಎಲ್ ಶಂಕರಮೂರ್ತಿ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಮಹಾ ಪರಿವೀಕ್ಷಕಿ, ಮುದ್ರಾಂಕ ಆಯುಕ್ತೆ ಡಾ. ಬಿ.ಆರ್. ಮಮತಾ ಅವರು ಆದೇಶಿಸಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಎಸ್. ಸಿ. ಇಂಗಳಗಿ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ವಿಚಾರಣಾಧಿಕಾರಿಗಳ ಮುಂದೆ ಪ್ರಕರಣ ಮಂಡಿಸಲು ಜಯನಗರ ಉಪ ನೋಂದಣಾಧಿಕಾರಿಗಳ ಹಿರಿಯ ಉಪ ನೋಂದಣಾಧಿಕಾರಿ ಗುರುರಾಘವೇಂದ್ರ ಅವರನ್ನು ಮಂಡಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಮೂರು ತಿಂಗಳ ಒಳಗೆ ವಿಚಾರಣೆ ಮುಗಿಸಲು ಕಾಲಮಿತಿ ನಿಗದಿ ಮಾಡಲಾಗಿದೆ.
ಏನಿದು ಪ್ರಕರಣ:
ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳ ಚುಂಚನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇತೋಹಳ್ಳಿ ಗ್ರಾಮದ ಸರ್ವೆ ನಂಬರ್ 07 ರಲ್ಲಿರುವ ಸೈಟ್ ನಂಬರ್ 67 ರಲ್ಲಿರುವ ಸ್ವತ್ತುಗಳಿಗೆ ( ದಾಸ್ತವೇಜು – 369/2021-22 b ಮತ್ತು 371/2021-22 ) ಸಂಬಂಧಿಸಿದಂತೆ ಎರಡು ದಾಸ್ತವೇಜನ್ನು ನೋಂದಣಿ ಮಾಡಿದ್ದಾರೆ. ಸದರಿ ಗ್ರಾಮದ ಸರ್ವೆ ನಂಬರ್ 7/3 ರಲ್ಲಿರುವ ಸೈಟ್ ನಂಬರ್ 63 ಸ್ವತ್ತನ್ನು ( ದಾಸ್ತವೇಜು ಸಂಖ್ಯೆ 8075/2021-22 ) ರಲ್ಲಿ ನೋಮದಣಿ ಮಾಡಿದ್ದು, ಈ ಸ್ವತ್ತಿಗೆ ಸಂಬಂಧಿಸಿದಂತೆ ಜಂಟಿ ಖಾತೆ ಇದ್ದು, ಖಾತೆದಾರಳಾದ ಪ್ರೀತಿ ಕೆ. ಎಂಬುವರ ಸಹಿ ಪಡೆಯದೇ , ದಾಖಲೆಗಳನ್ನು ಪರಿಶೀಲಸದೇ ನೋಂದಣಿ ಮಾಡಿ ಅಕ್ರಮ ಎಸಗಿದ್ದಾರೆ.
ಈ ಸ್ವತ್ತಿಗೆ ಸಂಬಂಧಿಸಿದಂತೆ ಜಿಲ್ಲಾ ನೋಂದಣಾಧಿಕಾರಿ ಜಯನಗರ ಅವರು ಪತ್ರ ಬರೆದು, ಇ ಸ್ವೊತ್ತು ಖಾತೆ ಪಡೆದು ನೋಂದಾಯಿಸಲು ಸೂಚನೆ ನೀಡಲಾಗಿತ್ತು. ಆದರೆ, ಬೇಗೂರು ಉಪ ನೋಂದಣಾಧಿಕಾರಿಆಗಿದ್ದ ಎಲ್. ಶಂಕರಮೂರ್ತಿ ಅವರು ಜಿಲ್ಲಾ ನೋಂದಣಧಿಕಾರಿಗಳ ನಿರ್ದೇಶನ ಪಾಲಿಸದೇ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ನೋಂದಣಿ ಮಾಡಿದ್ದರು. ಈ ಕುರಿತು ಪರಿಶೀಲಿಸಿದ್ದ ಜಿಲ್ಲಾ ನೋಂದಣಾಧಿಕಾರಿಗಳು ಅಕ್ರಮ ನೋಂದಣಿ ಸಂಬಂಧ ದೋಷಾರೋಪಣ ಪಟ್ಟಿ ಜಾರಿ ಮಾಡಿ ಲಿಖಿತ ಹೇಳಿಕೆ ನೀಡುವಂತೆ ಸೂಚಿಸಲಾಗಿತ್ತು. ಎಲ್ . ಶಂಕರ್ ಮೂರ್ತಿ ಅವರ ಲಿಖಿತ ಹೇಳಿಕೆ ಸಮಂಸಜ ಇಲ್ಲದ ಕಾರಣ ಅಸಲಿ ಸತ್ಯ ಪರಿಶೀಲಿಸಲು ಇದೀಗ ಇಲಾಖಾ ವಿಚಾರಣೆಗೆ ಆದೇಶಿಸಿ ಮುದ್ರಾಂಕ ಆಯುಕ್ತರು ಸೂಚಿಸಿದ್ದಾರೆ.