26.7 C
Bengaluru
Sunday, December 22, 2024

ಆಲಿಭಾಗ್‌ನಲ್ಲಿ ಹೊಸ ಮನೆ ಖರೀದಿಸಿದ ದೀಪಿಕಾ–ರಣವೀರ್‌ ದಂಪತಿ: ಮನೆಯ ಬೆಲೆ ಎಷ್ಟು ಗೊತ್ತೇ?

ಬಾಲಿವುಡ್‌ನ ಸ್ಟಾರ್‌ ದಂಪತಿ ರಣವೀರ್‌ ಸಿಂಗ್‌ ಹಾಗೂ ದೀಪಿಕಾ ಪಡುಕೋಣೆ ಆಲಿಭಾಗ್‌ನಲ್ಲಿ ಹೊಸ ಮನೆಯನ್ನು ಖರೀದಿ ಮಾಡಿದ್ದು, ಆಗಸ್ಟ್‌ 19ರಂದು ಈ ಮನೆಯ ಗೃಹಪ್ರವೇಶ ನಡೆದಿದೆ. ಸಮಾರಂಭದಲ್ಲಿ ಬಾಲಿವುಡ್‌ನ ಅನೇಕ ಸ್ಟಾರ್‌ ನಟ– ನಟಿಯರು ಭಾಗವಹಿಸಿದ್ದು, ಅವರು ಈ ಖುಷಿ ಸಂಗತಿಯನ್ನು ಟ್ವಿಟರ್‌, ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದೀಪಿಕಾ– ರಣವೀರ್‌ ಒಡೆತನದ ಈ ಹೊಸ ಲಕ್ಷುರಿ ಮನೆಯ ಒಟ್ಟು ಮೌಲ್ಯ ₹22 ಕೋಟಿ ಎನ್ನಲಾಗಿದೆ.

ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಈ ಮನೆಯ ಸ್ಟ್ಯಾಂಪ್‌ ಡ್ಯೂಟಿ ಮುಗಿದಿದ್ದು, 1.32 ಕೋಟಿ ತೆರಿಗೆಯನ್ನು ಈಗಾಗಲೇ ಪಾವತಿಸಿದ್ದಾರೆ. ಆಲಿಭಾಗ್‌ನ ಮಾಪ್‌ಗಾಂವ್‌ ಎಂಬಲ್ಲಿರುವ ಈ ಮನೆಯನ್ನು ಸುಮಾರು 2.25 ಎಕರೆ ವಿಸ್ತಾರದಲ್ಲಿ ಕಟ್ಟಲಾಗಿದೆ. 18000 ಚದರ ಅಡಿ ವ್ಯಾಪ್ತಿಯಲ್ಲಿರುವ ಬಂಗಲೆಯು ಐದು ಬೆಡ್‌ರೂಮ್‌, ವಿಶಾಲವಾದ ಹಾಲ್‌ ಸೇರಿದಂತೆ ಸಕಲ ಸೌಲಭ್ಯಗಳನ್ನು ಹೊಂದಿದೆ. ಮನೆಯಿಂದ 10 ನಿಮಿಷ ದೂರದಲ್ಲಿ ಸಮುದ್ರ ಕಿನಾರೆಯಿದೆ.

ಈ ಮನೆಯನ್ನು ದೀಪಿಕಾ ಪಡುಕೋಣೆ ಪಾಲುದಾರರಾಗಿರುವ ಕೆಎ ಎಂಟರ್‌ಪ್ರೈಸಸ್ ಮತ್ತು ರಣವೀರ್ ಸಿಂಗ್ ನಿರ್ದೇಶಕರಾಗಿರುವ ಆರ್‌ಎಸ್ ವರ್ಲ್ಡ್‌ವೈಡ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಮೂಲಕ ಖರೀದಿಸಲಾಗಿದೆ.

ಆಲಿಭಾಗ್‌ನಲ್ಲಿನ ಈ ಹೊಸ ಮನೆಯು ದೀಪಿಕಾ– ರಣವೀರ್‌ ಒಟ್ಟಾಗಿ ಖರೀದಿ ಮಾಡಿದ ಎರಡನೇ ಮನೆಯಾಗಿದೆ. ಈ ದಂಪತಿ ಈಗಾಗಲೇ ಮುಂಬೈನ ಬಾಂದ್ರಾದ ಪ್ರತಿಷ್ಠಿತ ‘ಸಾಗರ್‌ ರೇಶಮ್‌’ ಟವರ್‌ನಲ್ಲಿ ಸಮುದ್ರ ತೀರಕ್ಕೆ ಮುಖ ಮಾಡಿರುವ 119 ಕೋಟಿ ಮೌಲ್ಯದ ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್‌ನ್ನು ಹೊಂದಿದ್ದಾರೆ. ಈ ಮನೆಯು 16,17,18 ಹಾಗೂ 19ನೇ ಫ್ಲೋರ್‌ಗಳಲ್ಲಿ ಹರಡಿದೆ.

ಬಾಂದ್ರಾದ ಮನೆಯ ಒಟ್ಟು ಕಾರ್ಪೆಟ್‌ ಏರಿಯಾ 11,266 ಚದರ ಅಡಿ ಹೊಂದಿದ್ದು, 1,300 ಚದರಡಿ ಟೆರೇಸ್‌ ಹೊಂದಿದೆ. 19 ಪಾರ್ಕಿಂಗ್‌ ಲಾಟ್‌ಗಳನ್ನು ಹೊಂದಿದೆ. ಈ ಅಪಾರ್ಟ್‌ಮೆಂಟ್‌ ಶಾರುಕ್‌ ಖಾನ್‌ನ ಬಂಗಲೆ ಮನ್ನತ್‌ ಹಾಗೂ ಸಲ್ಮಾನ್‌ ಖಾನ್‌ ಗ್ಯಾಲಕ್ಷಿ ಅಪಾರ್ಟ್‌ಮೆಂಟ್‌ಗೆ ಸಮೀಪದಲ್ಲಿದೆ.

2018ರ ನವೆಂಬರ್‌ ತಿಂಗಳಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ರಣವೀರ್‌ ಅವರು ದೀಪಿಕಾ ಪಡುಕೋಣೆಯ ಅವರ ಪ್ರಭಾದೇವಿ ಹೋಮ್‌ಗೆ ಬಂದಿದ್ದರು. ಇದು ಮುಂಬೈನ ಬಿಯೊಮೆಂಟ್‌ ಟವರ್‌ನ 26 ಅಂತಸ್ತಿನಲ್ಲಿರುವ 4 ಬೆಡ್‌ರೂಮ್‌ಗಳ್ಳುಳ್ಳ ಅಪಾರ್ಟ್‌ಮೆಂಟ್‌ ಆಗಿದೆ. ದೀಪಿಕಾ ಇದನ್ನು 2010ರಲ್ಲಿ 16 ಕೋಟಿಗೆ ಖರೀದಿ ಮಾಡಿದ್ದರು. ಬಳಿಕ ಅದನ್ನು ತಮ್ಮ ಆಸಕ್ತಿಗನುಗುಣವಾಗಿ ಒಳಾಂಗಣ ವಿನ್ಯಾಸ ಮಾಡಿಕೊಂಡಿದ್ದರು. ಈ ಮನೆಯ ರಿಜಿಸ್ಟ್ರೇಶನ್‌ಗೆ ಸ್ಟ್ಯಾಂಪ್‌ ಡ್ಯೂಟಿ 79 ಲಕ್ಷ ರೂಪಾಯಿಯನ್ನು ದೀಪಿಕಾ ಪಾವತಿಸಿದ್ದಾರೆ.

Related News

spot_img

Revenue Alerts

spot_img

News

spot_img