ಬೆಂಗಳೂರು, ಆ. 16 : ಜಗತ್ತು ಡಿಜಿಟಲೀಕರಣ ಆಗುತ್ತಿದ್ದಂತೆ ವಂಚಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮೊದಲೆಲ್ಲಾ ಸರಗಳ್ಳರು, ದರೋಡೆಕೋರರು ಇದ್ದರು. ಆದರೆ, ಈಗ ಎಲ್ಲಾ ಕ್ರೈಂಗಳು ಹೆಚ್ಚಾಗಿ ಆನ್ ಲೈನ್ ನಲ್ಲೇ ನಡೆಯುತ್ತವೆ. ವರ್ಚುವಲ್ ಜಗತ್ತಿನಲ್ಲಿ ಸೈಬರ್ ಅಪರಾಧದ ಘಟನೆಗಳು ವೇಗವಾಗಿ ಹೆಚ್ಚುತ್ತಿವೆ. ಸೈಬರ್ ದರೋಡೆಕೋರರು ಸ್ವಲ್ಪ ತಪ್ಪಿನ ಲಾಭವನ್ನು ಪಡೆಯುವ ಮೂಲಕ ನಿಮ್ಮನ್ನು ಬಡವರನ್ನಾಗಿ ಮಾಡಬಹುದು. ಆನ್‌ಲೈನ್ ಲಿಂಕ್ ಅನ್ನು ಕ್ಲಿಕ್ ಮಾಡಿ ಸಂಕಷ್ಟಕ್ಕೀಡಾಗಬಹುದು.
ದುಷ್ಕರ್ಮಿಗಳು ಆನ್‌ಲೈನ್ ಲಿಂಕ್ ಕಳುಹಿಸಿ ಜನರನ್ನು ವಂಚಿಸುತ್ತಿದ್ದಾರೆ. ಫೇಕ್ ಲಿಂಕ್ ಅನ್ನು ಕ್ಲಿಕ್ ಮಾಡಿ ಲಕ್ಷಾಂತರ ರೂಪಾಯಿ ಅನ್ನು ಕಳೆದುಕೊಳ್ಳಬಹುದು. ಪ್ರತಿ ಗ್ರಾಹಕರನ್ನು ವಂಚಿಸಲು ಸೈಬರ್ ದುಷ್ಕರ್ಮಿಗಳು ಪ್ರತಿ ಬಾರಿ ವಿಭಿನ್ನ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಫಿಶಿಂಗ್ ಮೇಲ್ ಮೂಲಕ ಮತ್ತು ಕೆಲವೊಮ್ಮೆ OTP ಮೂಲಕ ಮೋಸ ಮಾಡಲಾಗುತ್ತದೆ. ಇದೀಗ ಮತ್ತೊಂದು ಹೊಸ ರೀತಿಯಲ್ಲಿ ಸೈಬರ್ ವಂಚನೆ ಆಗುತ್ತದೆ.
ಅದೇ, ಅದೇ ಆದಾಯ ತೆರಿಗೆ ರಿಟರ್ನ್ಸ್ ಅನ್ನೇ ದಾಳ ಮಾಡಿಕೊಂಡಿದ್ದಾರೆ. ನಿಮ್ಮ ಆದಾಯ ತೆರೆಗೆಯ ರೀಫಂಡ್ ಬಂದಿದೆ. ಅದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆ ಹಾಗೂ ಇತರೆ ಮಾಹಿತಿಯು ಸರಿಯಿದೆಯೇ ಎಂದು ತಿಳಿಯಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ಮೆಸೇಜ್ ಬರುತ್ತದೆ. ನಿಜ ಎಂದು ನಂಬಿದರೆ ನಿಮ್ಮ ಹಣ ಗೋವಿಂದ ಆಗೋದಂತೂ ಸತ್ಯ. ಈ ಬಗ್ಗೆ ವ್ಯಕ್ತಿಯೊಬ್ಬರು ಸೈಬರ್ ಕ್ರೈಂ ಗೆ ದೂರು ನೀಡಿದ್ದು, ಈಗ ಸೈಬರ್ ಕ್ರೈಂ ಸಂಸ್ಥೆ ಈ ರೀತಿ ಮೆಸೇಜ್ ಬಂದರೆ ಎಚ್ಚರವಾಗಿರಿ ಎಂದು ಟ್ವೀಟ್ ಮಾಡಲಾಗಿದೆ. ಹಾಗಾಗಿ ನಿಮಗೂ ಇಂತಹ ಮೆಸೇಜ್ ಬಂದರೆ ಆದಷ್ಟು ಎಚ್ಚರವಾಗಿರುವುದು ಸೂಕ್ತ.