ನವದೆಹಲಿ ;ಕಾವೇರಿ ನೀರು ನಿಯಂತ್ರಣಾ ಸಮಿತಿಯ(Cauvery Water Regulation Committee) ಸಭೆ ಮತ್ತೆ ಇಂದು ನಡೆಯಲಿದೆ.ನವದೆಹಲಿಯ CWRC ಕಚೇರಿಯಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಈ ಸಭೆಯಲ್ಲಿ ಕರ್ನಾಟಕದ ಪರವಾಗಿ ಕಾವೇರಿ ನೀರಾವರಿ(cauvery water) ನಿಗಮದ ಎಂ.ಡಿ. ಮಹೇಶ್ ಭಾಗಿಯಾಗಲಿದ್ದಾರೆ. ಕಳೆದ ಬಾರಿ 3,000 ಕ್ಯೂಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಆದೇಶ ಹೊರಡಿಸಿದ್ದ ಸಮಿತಿ, ಈ ಸಲ ಹೊಸ ಆದೇಶ ನೀಡುವ ನಿರೀಕ್ಷೆ ಇದೆ. ರಾಜ್ಯದ ಹಲವು ತಾಲೂಕುಗಳಲ್ಲಿ ಬರ ಘೋಷಣೆಯಾಗಿರುವುದು, ಅಣೆಕಟ್ಟುಗಳಲ್ಲಿನ ನೀರಿನ ಪ್ರಮಾಣದ ಬಗ್ಗೆ ಸಮಿತಿಯ ಗಮನಕ್ಕೆ ತರಲು ಕರ್ನಾಟಕ ನಿರ್ಧರಿಸಿದೆ. ಅತ್ತ ತಮಿಳುನಾಡು ನಿತ್ಯ 13,000 ಕ್ಯೂಸೆಕ್ ನೀರು 15 ದಿನಗಳ ಕಾಲ ನೀರು ಬಿಡುವಂತೆ ಮನವಿ ಮಾಡಲು ತೀರ್ಮಾನಿಸಿದೆ ಎನ್ನಲಾಗಿದೆ.ಇಂದಿನ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸಲು ಮತ್ತೆ ಆದೇಶ ನೀಡಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಕೃಷಿಗೆ ಇರಲಿ ಕುಡಿಯುವ ನೀರಿಗೂ ಈಗಿರುವ ನೀರು ಸಾಕಾಗಲ್ಲ ಎನ್ನುವಂತಾಗಿದ್ದು ಮತ್ತೆ ತಮಿಳುನಾಡಿಗೆ ನೀರು ಹರಿದರೆ ಮಂಡ್ಯ, ಮೈಸೂರು, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳಿಗೆ ಭಾರಿ ಸಮಸ್ಯೆಯಾಗಲಿದೆ.ಸೆಪ್ಟೆಂಬರ್ 29ರಂದು ನಡೆದ ಸಭೆಯಲ್ಲಿ ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ ನೀಡಿತ್ತು. ಅಕ್ಟೋಬರ್ 15ಕ್ಕೆ ಆದೇಶದ ಅವಧಿ ಮುಗಿಯಲಿದ್ದು, ಇಂದು ನಡೆಯುವ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.