ಬೆಂಗಳೂರು, ಜ. 05 : ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭದ ಆದಾಯ ತೆರಿಗೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ದೇಶದಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲ, ಡೀಸೆಲ್ ಮತ್ತು ವಿಮಾನ ಇಂಧನ ರಫ್ತಿನ ಮೇಲೆ ಆಕಸ್ಮಿಕ ಲಾಭ ತೆರಿಗೆಯನ್ನು ಕೇಂದ್ರ ವಿಧಿಸುತ್ತದೆ. ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೆರಿಗೆಯನ್ನು ಜಾಸ್ತಿ ಮಾಡಲಾಗಿದೆ. ಒಎನ್‌ಜಿಸಿ ಮತ್ತು ಅದರಂತಹ ಕಂಪನಿಗಳು ಉತ್ಪಾದನೆ ಮಾಡುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ಹೆಚ್ಚಿಸಲಾಗಿದೆ. ಕಚ್ಚಾ ತೈಲದ ಪ್ರತಿ ಟನ್‌ಗೆ ₹ 2,100ಕ್ಕೆ ಹೆಚ್ಚಿಸಲಾಗಿದೆ. ಈ ಹಿಂದೆ ಟನ್ ಗೆ ₹ 1,700 ಅನ್ನು ತರಿಗೆ ವಿಧಿಸಲಾಗಿತ್ತು.
ಡೀಸೆಲ್ ರಫ್ತಿನ ಮೇಲೆ ಆಕಸ್ಮಿಕ ಲಾಭ ತೆರಿಗೆಯನ್ನು ಪ್ರತಿ ಲೀಟರ್‌ಗೆ ₹ 6.5ಕ್ಕೆ ಹೆಚ್ಚಿಗೆ ಮಾಡಲಾಗಿದೆ. ಈ ಹಿಂದೆ ಲೀಟರ್‌ಗೆ ₹ 5 ಆಲಸ್ಮಿಕ ತೆರಿಗೆ ಇತ್ತು. ಇನ್ನು ಎಟಿಎಫ್ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ಹೆಚ್ಚಿಸಲಾಗಿದ್ದು, ಲೀಟರ್‌ಗೆ ₹ 4.5ಕ್ಕೆ ಏರಿಕೆ ಮಾಡಲಾಗಿದೆ. ನಿನ್ನೆಯಿಂದ ತೆರಿಗೆ ಹೆಚ್ಚಳ ಜಾರಿಗೆ ಬಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಆಗಿತ್ತು. ಹಾಗಾಗಿ ಡಿಸೆಂಬರ್ 16ರಂದು ಆಕಸ್ಮಿಕ ಲಾಭ ತೆರಿಗೆಯನ್ನು ಕೇಂದ್ರ ಸರ್ಕಾರ ಕಡಿಮೆ ಮಾಡುತ್ತು. ಇದೀಗ ಕೇವಲ ಎರಡುವಾರದ ಅಂತರದಲ್ಲಿ ಮತ್ತೆ ಕಚ್ಚಾ ತೈಲ ಬೆಲೆಯು ಹೆಚ್ಚಳ ಕಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ನಯಾರಾ ಎನರ್ಜಿ ಕಂಪನಿಗಳು ದೇಶದಿಂದ ಇಂಧನವನ್ನು ರಫ್ತು ಮಾಡುವ ಪ್ರಮುಖ ಕಂಪನಿಗಳಾಗಿವೆ. ಕಳೆದ ವರ್ಷ ಜುಲೈನಲ್ಲಿ ಕೇಂದ್ರ ಸರ್ಕಾರವು ಮೊದಲು ಆಕಸ್ಮಿಕ ಲಾಭ ತೆರಿಗೆ ವಿಧಿಸಿತ್ತು. ಆಗ ಪೆಟ್ರೋಲ್ ಹಾಗೂ ಎಟಿಎಫ್ ರಫ್ತಿಗೆ ಪ್ರತಿ ಲೀಟರಿಗೆ ತಲಾ ₹ 6 ತೆರಿಗೆಯನ್ನು ವಿಧಿಸಲಾಗಿತ್ತು. ಡೀಸೆಲ್ ಪ್ರತಿ ಲೀಟರಿಗೆ ₹ 13 ತೆರಿಗೆಯನ್ನು ವಿಧಿಸಲಾಗಿತ್ತು. ದೇಶೀಯ ಕಚ್ಚಾ ತೈಲ ಉತ್ಪಾದನೆಯ ಮೇಲೆ ಪ್ರತಿ ಟನ್‌ಗೆ ₹ 23,250 ತೆರಿಗೆಯನ್ನು ಮೊದಲಿಗೆ ವಿಧಿಸಲಾಯ್ತು. ಇದಾದ ಬಳಿಕ ಪೆಟ್ರೋಲ್ ರಫ್ತಿನ ಮೇಲಿನ ತೆರಿಗೆಯನ್ನು ರದ್ದು ಮಾಡಲಾಯ್ತು. ಇನ್ನು ಈ ಆಕಸ್ಮಿಕ ಲಾಭ ತೆರಿಗೆಯ ದರವನ್ನು ಪ್ರತಿ ಹದಿನೈದು ದಿನಕ್ಕೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ.
ಇನ್ನು ಕಳೆದ ತಿಂಗಳು ಆಕಸ್ಮಿಕ ಲಾಭ ತೆರಿಗೆಯನ್ನು ಕೇಂದ್ರ ಸರ್ಕಾರ ತಗ್ಗಿಸಿತ್ತು. ಇದರ ಜೊತೆಗೆ ಡೀಸೆಲ್ ಮತ್ತು ವಿಮಾನ ಇಂಧನ ರಫ್ತು ಮೇಲಿನ ತೆರಿಗೆಯನ್ನೂ ಕಡಿಮೆ ಮಾಡಿತ್ತು. ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಂತಹ (ಒಎನ್‌ಜಿಸಿ) ಕಂಪನಿಗಳು ದೇಶದಲ್ಲಿ ಕಚ್ಚಾ ತೈಲವನ್ನು ಉತ್ಪಾದನೆ ಮಾಡುತ್ತಿವೆ. ಇದರ ಮೇಲೆ ಪ್ರತಿ ಟನ್‌ಗೆ ₹4,900 ಇದ್ದ ಆಕಸ್ಮಿಕ ಲಾಭ ತೆರಿಗೆಯನ್ನು ₹ 1,700ಕ್ಕೆ ಇಳಿಕೆ ಮಾಡಿ ಕಳೆದ ತಿಂಗಳು ಆದೇಶ ನೀಡಿತ್ತು. ಡೀಸೆಲ್ ಮೇಲಿನ ರಫ್ತು ತೆರಿಗೆಯನ್ನು ಲೀಟರಿಗೆ ₹ 8 ರಷ್ಟು ಇತ್ತು. ಇದನ್ನು ₹5ಕ್ಕೆ ಇಲಿಕೆ ಮಾಡಲಾಗಿತ್ತು. ಇನ್ನು ವಿಮಾನ ಇಂಧನದ ರಫ್ತು ಮೇಲಿನ ತೆರಿಗೆಯನ್ನು ಲೀಟರಿಗೆ ₹ 5ರಷ್ಟು ಇದ್ದನ್ನು ₹1.5ಕ್ಕೆ ಕಡಿಮೆ ಮಾಡಿತ್ತು. ಇದೀಗ ಮತ್ತೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.