#Land #Land Law #Converted land registratiion ban, #Revenue department #Karnataka,
ಬೆಂಗಳೂರು, ಡಿ. 14: ಭೂ ಪರಿವರ್ತಿತ ಜಮೀನನ್ನು ನೋಂದಣಿ ಮಾಡದಂತೆ ಕಂದಾಯ ಇಲಾಖೆ ಆಯುಕ್ತಾಲಯ ಹೊರಡಿಸಿರುವ ಆದೇಶ ನೋಂದಣಿ ನಿಯಮ 1965 ಹಾಗೂ ನ್ಯಾಯಾಲಯದ ತೀರ್ಪಿನ ಉಲ್ಲಂಘನೆಯಾಗಿದೆ. ಕಂದಾಯ ಇಲಾಖೆ ಹೊರಡಿಸಿರುವ ಈ ಅವೈಜ್ಞಾನಿಕ ಆದೇಶವನ್ನು ವಾಪಸು ಪಡೆಯುವುದು ಸೂಕ್ತ ಎಂಬ ಅಭಿಪ್ರಾಯ ಕಂದಾಯ ಅಧಿಕಾರಿಗಳ ವ್ಯಾಪ್ತಿಯಲ್ಲಿ ಕೇಳಿ ಬರುತ್ತಿದೆ.
ಭೂ ಪರಿವರ್ತನೆಯಾದ ಜಮೀನನ್ನು ಉಪ ನೋಂದಣಾಧಿಕಾರಿಗಳು ನೋಂದಣಿ ಮಾಡದಂತೆ ಕಾವೇರಿ 2.0 ತಂತ್ರಾಂಶದಲ್ಲಿ ಮಾರ್ಪಾಡು ಮಾಡುಂತೆ ಕಂದಾಯ ಇಲಾಖೆಯ ಆಯುಕ್ತಾಲಯ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭೂ ಪರಿವರ್ತನೆಯಾದ ಜಮೀನುಗಳ ಪಹಣಿಗಳಿಗೆ ನಿಯಮಾನುಸಾರ ಭೂ ಕಂದಾಯ ಕಡಿತಗೊಳಿಸಿ ನಗರ ಸ್ಥಳೀಯ ಸಂಸ್ಥೆಗಳು ಆಸ್ತಿ ಗುರುತಿನ ಸಂಖ್ಯೆ ನೀಡಿ ಖಾತೆ ನಿರ್ವಹಿಸಬೇಕಿದ್ದು, ಕಾರ್ಯದಲ್ಲಿ ಕ್ರಮ ಬದ್ಧತೆ ಇಲ್ಲ. ಹೀಗಾಗಿ ಇ ಖಾತಾ ಮತ್ತು ಭೂಮಿ ಪಹಣಿ ಆಧಾರದ ಮೇಲೆ ನಿಯಮ ಬಾಹಿರವಾಗಿ ಎರಡು ಕಡೆ ವಹಿವಾಟು ನಡೆಯುತ್ತಿರುವುದಾದಿಂದ ವ್ಯಾಜ್ಯಗಳು ಆಗುವ ಸಂಭವ ವಿದೆ ಎಂಬ ಕಾರಣ ನೀಡಿ ಭೂ ಪರಿವರ್ತನೆ ಭೂಮಿಯ ನೋಂದಣಿಗೆ ಒಂದು ಸುತ್ತೋಲೆ ಮೂಲಕ ನಿರ್ಬಂಧ ವಿಧಿಸಲು ಕಂದಾಯ ಇಲಾಖೆ ಮುಂದಾಗಿದೆ.
ವಾಸ್ತವದಲ್ಲಿ ಕಾನೂನು ಮತ್ತು ನ್ಯಾಯಾಲಯದ ಪ್ರಕರಣಗಳು ಬೇರೆಯದ್ದೇ ಹೇಳುತ್ತವೆ. ಕಂದಾಯ ಇಲಾಖೆಯ ಈ ಆದೇಶ ಕಾನೂನಿಗೆ ವಿರುದ್ಧವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನೋಂದಣಿ ನಿಯಮ 1965 ರೂಲ್ 73 ಪ್ರಕಾರ, ಒಂದು ಸ್ವತ್ತನ್ನು ಕೊಡುವರು ಮತ್ತು ಪಡೆಯುವರು ಪರಸ್ಪರ ಒಪ್ಪಿ ಒಂದು ದಸ್ತಾವೇಜನ್ನು ನೋಂದಣಿಗೆ ಹಾಜರು ಪಡಿಸಿದಲ್ಲಿ, ಉಪ ನೋಂದಣಾಧಿಕಾರಿಗಳು ನೋಂದಣಿ ನಿರಾಕರಣೆ ಮಾಡುವಂತಿಲ್ಲ ಎಂದು ಹೇಳುತ್ತದೆ. ಆದರೆ, ಕಂದಾಯ ಇಲಾಖೆ ಭೂ ಪರಿವರ್ತಿತ ಜಮೀನಿನ ನೋಂದಣಿಗೆ ನಿರ್ಬಂಧ ವಿಧಿಸಿರುವುದು ನೋಂದಣಿಯ ಮೂಲ ನಿಯಮಕ್ಕೆ ತದ್ವಿರುದ್ಧವಾಗಿದೆ.
ಕಂದಾಯ ಇಲಾಖೆಯ ಕಂ.ಇ. 344 ಮುನೊಮು 2008 ಸುತ್ತೋಲೆಯಲ್ಲಿ ಕಂದಾಯ ಇಲಾಖೆಯು ಆಸ್ತಿ ನೋಂದಣಿ ಮಾಡುವಾಗ EC ನೋಡಬೇಕು ಎಂದು ಎಲ್ಲೂ ಹೇಳಿಲ್ಲ. ಹೀಗಾಗಿ ಇಸಿ ನೋಡಿ ದಾಸ್ತವೇಜುಗಳನ್ನು ನೋಂದಣಿ ಮಾಡುವುದು ಉಪ ನೋಂದಣಾಧಿಕಾರಿಗಳಿಗೆ ಹೇಳಿಲ್ಲದ ಕಾರಣ, ಕಂದಾಯ ಇಲಾಖೆಯ ಭೂ ಪರಿವರ್ತಿತ ಭೂಮಿಯ ನೋಂದಣಿಗೆ ನಿರ್ಬಂಧ ವಿಧಿಸಿರುವುದು ಈ ಸುತ್ತೋಲೆಯ ಉಲ್ಲಂಘನೆಯಾಗಲಿದೆ.
ನ್ಯಾಯಾಲಯದ ತೀರ್ಪು ಹೀಗಿದೆ:
ಇನ್ನು ದಾಖಲೆಗಳ ನೈಜತೆಯನ್ನು ಪರಿಶೀಲಿಸುವ ಸಂಬಂಧ ಸುಲೋಚನಮ್ಮ vs ಉಪ ನೋಂದಣಾಧಿಕಾರಿಗಳು ಕನಕಪುರ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನೋಂದಣಿಗೆ ಹಾಜರು ಪಡಿಸಿದ ದಾಸ್ತವೇಜುಗಳ ನೈಜತೆಯನ್ನು ಪ್ರಶ್ನಿಸುವ ಹಕ್ಕು ಉಪ ನೋಂದಣಾಧಿಕಾರಿಗಳಿಗೆ ಇಲ್ಲ ಎಂದು ತೀರ್ಪು ನೀಡಿದ್ದು, ಇದರ ಪ್ರಕಾರ, ಕೊಡುವರು ಮತ್ತು ಕೊಳ್ಳುವರು ಒಂದು ದಸ್ತಾವೇಜನ್ನು ಹಾಜರು ಪಡಿಸಿದರೆ ದಾಖಲೆಗಳ ನೈಜತೆ ಕಾರಣ ನೀಡಿ ಉಪ ನೋಂದಣಾಧಿಕಾರಿ ನೋಂದಣಿ ನಿರಾಕರಣೆ ಮಾಡುವಂತಿಲ್ಲ ಎಂದಿದೆ. ಈ ಹೈಕೋರ್ಟ್ ತೀರ್ಪು ಪಾಲನೆ ಮಾಡಿದ್ದಾದಲ್ಲಿ ಕಂದಾಯ ಇಲಾಖೆಯ ಭೂ ಪರಿವರ್ತನೆಯ ಜಮೀನು ನೋಂದಣಿಯನ್ನು ಉಪ ನೋಂದಣಾಧಿಕಾರಿಗಳು ನಿರಾಕರಣೆ ಮಾಡುವುದು ಹೈಕೋರ್ಟ್ ತೀರ್ಪು ಉಲ್ಲಂಘನೆ ಮಾಡಿದಂತಾಗುತ್ತದೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸದೇ ಕಂದಾಯ ಇಲಾಖೆ ಭೂ ಪರಿವರ್ತಿತ ಜಮೀನಿನ ನೋಂದಣಿಗೆ ನಿರ್ಬಂಧ ವಿಧಿಸಿರುವುದು ಉಪ ನೋಂದಣಾಧಿಕಾರಿಗಳನ್ನು ಗೊಂದಲಕ್ಕೆ ತಳ್ಳಿದೆ. ಇತ್ತ ಹೈಕೋರ್ಟ್ ಆದೇಶ ಪಾಲಿಸಬೇಕೋ ಇಲ್ಲವೇ ಕಂದಾಯ ಇಲಾಖೆಯ ಸುತ್ತೋಲೆ ಪಾಲಿಸಬೇಕಾ ಎಂಬ ಪ್ರಶ್ನೆ ಎದುರಾಗಿದೆ.
ಸನ್ನದಿ ಪ್ರಕರಣ:
1908 ಮತ್ತು ಇದರಲ್ಲಿ ರಚಿತವಾದ ಕರ್ನಾಟಕ ನೋಂದಣಿ ನಿಯಮದ ಪ್ರಕಾರ, ಸರ್ಕಾರವಾಗಲೀ, ನ್ಯಾಯಾಲಯಗಳಾಗಲೀ, ಉಪ ನೋಂದಣಾಧಿಕಾರಿಗಳಿಗೆ ಅಥವಾ ಭೂಮಿಯ ಕಾನೂನು ವ್ಯವಹರಿಸುವ ಅಧಿಕಾರಿಗಳಿಗಾಗಿ ಕೆಲಸ ಮಾಡಬೇಡಿ. ನೋಂದಣಿ ಮಾಡಬೇಡಿ ಎಂದು ಎಂದು ಹೇಳಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಭಾರತೀಯ ನೋಂದಣಿ ಕಾನೂನು ಕಂದಾಯ ಅಧಿಕಾರಿಗಳಿಗೆ ನೀಡಿರುವ ಅಧಿಕಾರವನ್ನೇ ಮರೆತು ಕೆಲವರು ನೋಂದಣಿ ಮಾಡದೇ ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಕೆಲವು ಪ್ರಕರಣದಲ್ಲಿ ನ್ಯಾಯಾಧೀಶರೇ ನೋಂದಣಿ ಪ್ರಕ್ರಿಯೆಗೆ ಅಡ್ಡಿ ಪಡಿಸಿ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿ ಸ್ಥಿರ ಸ್ವತ್ತುಗಳ ನೋಂದಣಿ ಸಂಬಂಧಸಿದಂತೆ ನ್ಯಾಯಾಲಯ ನೀಡುವ ತಡೆಯಾಜ್ಞೆ – ತೀರ್ಪು ಕೇವಲ ಅರ್ಜಿದಾರ ಮತ್ತು ಪ್ರತಿವಾದಿಗೆ ಸಂಬಂಧಿಸಿರುತ್ತದೆ.
ದಸ್ತಾವೇಜುಗಳ ನೋಂದಣಿ ಸಂಬಂಧ ಉಪ ನೋಂದಣಾಧಿಕಾರಿಗಳಿಗೆ ಇರುವ ಅಧಿಕಾರ ( ಕಂದಾಯ ಸಂಗ್ರಹ ಅಧಿಕಾರಿಗಳು)ದ ಬಗ್ಗೆ ನ್ಯಾಯಾಲಯದ ಪ್ರಕರಣವೊಂದು ಇಲ್ಲಿ ಸ್ಪಷ್ಟವಾಗಿ ತಿಳಿಸುತ್ತದೆ. ದಾಸ್ತವೇಜು ನೋಂದಣಿ ಸಂಬಂಧ ನ್ಯಾ. ಯು.ಬಿ. ಸನ್ನದಿ ಮುನ್ಸಿಪ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶರು ಚನ್ನಗಿರಿ ಇವರು ಉಪ ನೋಂದಣಾಧಿಕಾರಿ ಚನ್ನಗಿರಿ ಇವರಿಗೆ ಕೆಲವು ದಾಸ್ತವೇಜು ನೋಂದಣಿ ಮಾಡದಂತೆ ನಿರ್ದೇಶನ ನೀಡಿದ್ದರು. ಇದನ್ನು ಗಂಭಿರವಾಗಿ ಪರಿಗಣಿಸಿದ ಸರ್ಕಾರ, ಈ ವಿಚಾರವನ್ನು ಅಂದಿನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ವರದಿ ಮಾಡಿದ್ದು, ಮುಖ್ಯ ನ್ಯಾಯಾಧೀಶರು, ಇಲಾಖಾ ವಿಚಾರಣೆ, ನಡೆಸಿದ್ದರು. ಯು.ಬಿ. ಸನ್ನದಿ ಅವರು ಉಪ ನೋಂದಣಾಧಿಕಾರಿಗಳಿಗೆ ನೋಂದಣಿ ಮಾಡಬಾರದು ಎಂದು ನಿರ್ದೇಶನ ನೀಡಿರುವುದು ತಪ್ಪು ಎಂಬ ಆರೋಪ ಸಾಬೀತಾಯಿತು.
ಈ ಬಗ್ಗೆ ಅಂದಿನ ರಾಜ್ಯಪಾಲರಿಗೆ ವರದಿ ನೀಡಿದ್ದು, ಮುನ್ಸಿಪಲ್ ನ್ಯಾಯಾಧೀಶರನ್ನು ಕರ್ತವ್ಯದಿಂದ ಬಿಡುಗಡೆಮಾಡಲಾಗಿತ್ತು. ಈ ಪ್ರಕರಣದ ತಾತ್ಪರ್ಯ ವೇನೆಂದರೆ, ಆಸ್ತಿ ನೋಂದಣಿಗೆ ತಡೆಯೊಡ್ಡುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ ( ಕೆಲವು ಕ್ರಿಮಿನಲ್ ಅಪರಾಧ ಪರಕರಣ ಹೊರತು ಪಡಿಸಿ) ಎಂಬುದನ್ನು ತೋರುತ್ತದೆ.ನೋಂದಣಿ ಕಾಯ್ದೆ ಮತ್ತು ನಿಯಮಗಳು, ಮುದ್ರಾಂಕ ಕಾಯ್ದೆ ಮತ್ತು ನಿಯಮಗಳು ಇವುಗಳ ಮೂಲ ಉದ್ದೇಶ ಸರ್ಕಾರರಕ್ಕೆ ರಾಜ್ಯಸ್ವ ಸಂಗ್ರಹ ಮಾಡುವುದು. ನೋಂದಣಿ ಆಗುವುದರಿಂದ ಸರ್ಕಾರದ ನಂಬಿಕೆಗೆ ಸಾಕ್ಷಿ ಸೃಷ್ಟಿಯಾಗುತ್ತದೆ. ಯಾವುದೇ ನೋಂದಣಿಯಾಗಲೀ , ಖಾತಾ ಆಗಲೀ, ಕಂದಾಯ ಕಟ್ಟಿದ ತಕ್ಷಣ, ಕಾನೂನು ಪ್ರಕಾರ ಸ್ವತ್ತುಗಳ ಬರವಣಿಗೆ ಕ್ರಮ ಬದ್ಧವಾಗಿಲ್ಲದಿದ್ದರೆ, ಆ ಸ್ವತ್ತು ಸರಿಯಾದ ವರ್ಗಾವಣೆ ಆಗುವುದಿಲ್ಲ. ದಾಸ್ತವೇಜುಗಳು ಕಾನೂನುಬದ್ಧವಾಗಿರಬೇಕು. ಮುದ್ರಾಂಕ ಕಾಯ್ದೆ , ಯಾವುದೇ ಸುಂಕ ಪಡೆಯುವರ ಬಳಿ ಸುಃಖ ದುಖಃ ನಡೆಯುವುದಿಲ್ಲ ಎಂಬ ಗಾದೆ ಅನ್ವಯ ನೊಂದಣಿಯನ್ನು ಯಾವುದೇ ಅಧಿಕಾರಿ ನಿಲ್ಲಿಸಲಾಗುವುದಿಲ್ಲ. ನಿಲ್ಲಿಸುವ ಅಧಿಕಾರವೂ ಇಲ್ಲ.