22.9 C
Bengaluru
Friday, July 5, 2024

ವಾಣಿಜ್ಯ ರಿಯಲ್‌ ಎಸ್ಟೇಟ್‌ ಬೂಮ್‌; ವೃತ್ತಿಪರ ಪರಿಣತರಿಗೆ ಹೆಚ್ಚಿದ ಬೇಡಿಕೆ

ವಾಣಿಜ್ಯ ರಿಯಲ್ ಎಸ್ಟೇಟ್ ಭಾರಿ ಪ್ರಮಾಣದ ಹೂಡಿಕೆ ಆಕರ್ಷಿಸುವ ಜೊತೆಗೆ ಪರಿಸರ, ಸಾಮಾಜಿಕ ಮತ್ತು ಆಡಳಿತಾತ್ಮಕ ಅಂಶಗಳಿಗೆ ಹೆಚ್ಚಿನ ಒತ್ತು ನೀಡುವುದನ್ನು ಪ್ರೇರೇಪಿಸುತ್ತಿದೆ. ಇದೇ ಕಾರಣಕ್ಕೆ ಕಚೇರಿಗಳನ್ನು ನಿರ್ಮಿಸುವ ಬಿಲ್ಡರ್‌ರಗಳು ಮತ್ತು ಹೂಡಿಕೆದಾರರು ಮುಂಬರುವ ತಮ್ಮ ನಿರ್ಮಾಣ ಯೋಜನೆಗಳ ಮೌಲ್ಯಮಾಪನಕ್ಕೆ ಮತ್ತು ಈಗಾಗಲೇ ಹಳೆಯದಾಗಿರುವ ತಮ್ಮ ಕಟ್ಟಡಗಳನ್ನು ಮೇಲ್ದರ್ಜೆಗೇರಿಸಲು ವೃತ್ತಿಪರ ಪರಿಣತರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಒತ್ತು ನೀಡುತ್ತಿದ್ದಾರೆ.

ʻಆರು ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ದೆಹಲಿ-ರಾಷ್ಟ್ರ ರಾಜಧಾನಿ ವಲಯ, ಹೈದರಾಬಾದ್, ಮುಂಬೈ ಮತ್ತು ಪುಣೆಗಳಲ್ಲಿ ಮುಂದಿನ 2-3 ವರ್ಷಗಳಲ್ಲಿ ಸಾಕಷ್ಟು ಕಚೇರಿ ನಿರ್ಮಾಣ ಆಗಲಿವೆ. ಸರಿಸುಮಾರು 180 ಮಿಲಿಯನ್ ಚದರ ಅಡಿ ʻಎʼ ಗ್ರೇಡ್ ಕಚೇರಿಗಳ ನಿರ್ಮಾಣ ವಿವಿಧ ಹಂತಗಳಲ್ಲಿವೆ. ಅದೇ ವೇಳೆಗೆ, ಈ ನಗರಗಳಲ್ಲಿ 15 ವರ್ಷಗಳಿಗೂ ಹಳೆಯದಾದ ಸುಮಾರು 120 ಮಿಲಿಯನ್ ಚದರ ಅಡಿ ʻಎʼ ಗ್ರೇಡ್ ಕಚೇರಿಗಳ ನವೀಕರಣದ ನಿರೀಕ್ಷೆಯೂ ಇದೆʼ ಎಂದು ಕಾಲಿಯರ್ಸ್ ವರದಿ ತಿಳಿಸಿದೆ.

“ದೇಶದಲ್ಲಿ ಹೂಡಿಕೆ ಹೆಚ್ಚಳ ಕಾಣುತ್ತಿರುವ ಹೊತ್ತಿಗೆ, ತಾಂತ್ರಿಕತೆ ಮತ್ತು ಕಾರ್ಯಾಚರಣೆಯಲ್ಲಿ ಅತ್ಯಾಧುನಿಕ ದರ್ಜೆಯ ರಿಯಲ್ ಎಸ್ಟೇಟ್ ನಿರ್ಮಾಣ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಉಂಟಾಗುವ ಪ್ರಯೋಜನಗಳು ಅದಕ್ಕೆ ತಗುಲುವ ವೆಚ್ಚವನ್ನು ಮೀರಿಸುತ್ತವೆ. ಏಕೆಂದರೆ ಪಾಲುದಾರರ ಹಣ, ಸಮಯ ಉಳಿಸುವ ಜೊತೆಗೆ ಮತ್ತು ಕಾನೂನು ತೊಡಕುಗಳನ್ನು ದೂರಮಾಡುತ್ತದೆ,” ಎಂದು ಕಾಲಿಯರ್ಸ್ ಇಂಡಿಯಾದ ಅಧಿಕಾರಿ ಜತಿನ್ ಶಾ ತಿಳಿಸಿದರು.

ಸ್ವತ್ತುಗಳ ಕಾನೂನು ತೊಡಕುಗಳನ್ನು ನಿವಾರಿಸುವುದು ನಿರ್ಮಾಣ ಯೋಜನೆಯ ಒಟ್ಟು ವೆಚ್ಚದ ಶೇ 0.3ಕ್ಕಿಂತ ಕಡಿಮೆ ಇರುತ್ತದೆ. ಡೆವಲಪರ್ಗಳು ಮತ್ತು ಹೂಡಿಕೆದಾರರು ಹೊಸ ಭೌಗೋಳಿಕ ಮತ್ತು ಸ್ವತ್ತುಗಳ ಪರಿಸರದಲ್ಲಿ ಕಾರ್ಯನಿರ್ವಹಿಸುವುದರಿಂದ ಅವರಿಗೆ ಕಾನೂನು ತೊಡಕುಗಳಿಂದ ರಕ್ಷಣೆ ನೀಡುತ್ತದೆ. ಹಳೆಯ ಕಟ್ಟಡಗಳನ್ನು ಮೇಲ್ದರ್ಜೆಗೇರಿಸುವುದರಿಂದ ಹೆಚ್ಚಿನ ಬಾಡಿಗೆ ವರಮಾನ ಗಳಿಸುವುದಲ್ಲದೆ ಕಟ್ಟಡದ ಬಾಳಿಕೆ ಹೆಚ್ಚುವ ಜೊತೆಗೆ ಮೌಲ್ಯವನ್ನೂ ಹೆಚ್ಚಿಸುತ್ತದೆ.

“ಹಳೆಯ ಕಟ್ಟಡಗಳನ್ನು ನವೀಕರಿಸುವುದರಿಂದ ಸಹವರ್ತಿ ಉದ್ಯಮವನ್ನು ಬೃಹತ್ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕರೆತರುವ ಮೌಲ್ಯವರ್ಧನೆಯ ಸಾಧ್ಯತೆಗಳು ಹೆಚ್ಚುತ್ತವೆ. ಹಳೆಯ ಕಟ್ಟಡವನ್ನು ನವೀಕರಿಸಲು ನಾವು ಸಾಕಷ್ಟು ಅಪಾಯವನ್ನು ಎದುರಿಸುತ್ತೇವೆ ಮತ್ತು ಆ ಮೂಲಕ ಗ್ರಾಹಕರಿಗೆ ಅದು ಹಳೆಯ ಕಟ್ಟಡ ಎಂಬ ಅನುಮಾನವೂ ಬಾರದಷ್ಟು ಚೆನ್ನಾಗಿ ಹೊಸರೂಪ ನೀಡುತ್ತೇವೆ. ಇದರಿಂದಾಗಿ ಕಟ್ಟಡ ಮತ್ತು ಸುತ್ತಲಿನ ಪರಿಸರದ ಮೌಲ್ಯ ಹೆಚ್ಚಳವಾಗುತ್ತದೆ,” ಎಂದು ಬಿಹೈವ್ ಇನ್ವೆಸ್ಟೆಕ್ ಸಂಸ್ಥೆಯ ಸಹ ಸ್ಥಾಪಕ ಶೇಶರಾವ್ ಪಾಪ್ಲಿಕರ್ ಹೇಳುತ್ತಾರೆ.

“ಸಾಂಕ್ರಾಮಿಕೋತ್ತರ ಕಾಲದ ಡೆವಲಪರ್ಗಳು ಮತ್ತು ಹೂಡಿಕೆದಾರರು ತಾವು ನಿರ್ಮಿಸುವ ಕಟ್ಟಡಗಳ ದಕ್ಷತೆಯ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ನಿರೀಕ್ಷಿತ ಯೋಜನೆಗಳ ಸಂಬಂಧಿತ ಅಪಾಯಗಳು ಮತ್ತು ಏರಿಳಿತಗಳನ್ನು ಅರ್ಥ ಮಾಡಿಕೊಳ್ಳುವುದು ಅವರ ಆದ್ಯತೆಯಾಗಿದೆ. ಸಣ್ಣ ವೆಚ್ಚ ಮಾಡುವುದರಿಂದ ದೊಡ್ಡ ಮಟ್ಟದ ಅಪಾಯಗಳನ್ನು ನಿವಾರಿಸಿಕೊಳ್ಳಬಹುದು ಮತ್ತು ಹೆಚ್ಚಿನ ಆದಾಯವನ್ನು ಗಳಿಸಬಹುದು,” ಎಂದು ಕಾಲಿಯರ್ಸ್ ಇಂಡಿಯಾದ ಸಂಶೋಧನಾ ವಿಭಾಗದ ಹಿರಿಯ ನಿರ್ದೇಶಕ ವಿಮಲ್ ನಾಡಾರ್ ತಿಳಿಸುತ್ತಾರೆ.

ಜಾಗತಿಕ ಹೂಡಿಕೆಯ ಪರಿಣಾಮ ಕಳೆದ ಐದು ವರ್ಷಗಳಲ್ಲಿ ಭಾರತೀಯ ವಾಣಿಜ್ಯ ರಿಯಲ್ ಎಸ್ಟೇಟ್ ಉದ್ಯಮವು ಮೂರು ಪಟ್ಟು ಪ್ರಗತಿ ಕಂಡಿದೆ. ಅದಕ್ಕೂ ಹಿಂದಿನ ಐದು ವರ್ಷಗಳ ಅವಧಿಗೆ ಹೋಲಿಸಿದರೆ ವಿದೇಶಿ ಬಂಡವಾಳದ ಹರಿವಿನಿಂದಾಗಿ ಉದ್ಯಮದ ಮೌಲ್ಯವು 24 ಬಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಿದೆ.

Related News

spot_img

Revenue Alerts

spot_img

News

spot_img