ಬೆಂಗಳೂರು ಏ17;ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ, ಪಕ್ಷದ ಅಭ್ಯರ್ಥಿಗಳಿಗೆ ಜಾರಿಯಾಗುವ ನೀತಿ ಸಂಹಿತೆ ಮಾಧ್ಯಮಗಳಿಗೂ ಅನ್ವಯಗೊಳ್ಳುತ್ತದೆ. ಪತ್ರಿಕೆ, ಚಾನಲ್, ರೇಡಿಯೂ ಸೇರಿದಂತೆ ಮಾಧ್ಯಮಗಳು ಪ್ರಕಟಿಸುವ, ಪ್ರಚುರಪಡಿಸುವ ವರದಿಗಳ ಮೇಲೆ ಎಂಸಿಎಂಸಿ ಸಮಿತಿ ತೀವ್ರ ನಿಗಾ ವಹಿಸುತ್ತದೆ. ನಿಯಮ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಯಾವುದೇ ಪೋಸ್ಟ್‍ಗಳಾಗಲಿ, ಕಾಮೆಂಟ್‍ಳಾಗಲೀ ಮಾಡುವಂತಿಲ್ಲ. ಅಂತಹ ಪೋಸ್ಟ್-ಕಮೆಂಟ್‍ಗಳು ಕಂಡು ಬಂದಲ್ಲಿ ಸಂಬಂಧಿಸಿದವರ ಮೇಲೆ ಮೂಕದ್ದಮೆ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಎಚ್ಚರಿಸಿದ್ದಾರೆ.
ಯಾವುದೇ ನೋಂದಾಯಿತ ರಾಜಕೀಯ ಪಕ್ಷ , ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಅಭ್ಯರ್ಥಿ ಅಥವಾ ಸಂಸ್ಥೆ, ಸಂಘಟನೆಗಳು ಜಾಹೀರಾತುಗಳನ್ನು ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಜಾಲಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವ ಮೊದಲು ಸಮಿತಿಯಿಂದ ರಾಜಕೀಯ ಜಾಹೀರಾತುಗಳ ಪ್ರಸಾರಕ್ಕೆ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಪ್ರಚಾರಕ್ಕಾಗಿ ಬಳಸುವ ಕರಪತ್ರ, ಪೋಸ್ಟರ್ಸ್, ಬ್ಯಾನರ್ಸ್, ಬ್ಯಾಂಡ್‌ಬಿಲ್, ಬಂಟಿಂಗ್ಸ್, ಕಿರುಹೊತ್ತಿಗೆ ಸೇರಿದಂತೆ ಇನ್ನಿತರ ಪ್ರಚಾರ ಸಾಮಗ್ರಿಗಳಿಗೆ ಪರವಾನಿಗೆ ಪಡೆದು ಅವುಗಳ ಮೇಲೆ ಮುದ್ರಕರ ಮತ್ತು ಪ್ರಕಾಶಕರ ವಿವರ ಮತ್ತು ಪ್ರತಿಗಳ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಪ್ರಜಾಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷ ನ್ 127ರಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು.
ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸಾಮಾನ್ಯ ಜನರು ಕೂಡಾ ಯಾವುದೇ ಜಾತಿ, ಧರ್ಮ, ಕೋಮು ಆಧರಿಸಿ ಚುನಾವಣಾ ಪ್ರಚಾರ ನಡೆಸುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಸಾರ್ವಜನಿಕರು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಕಟಿಸುವಾಗ, ಪೋಸ್ಟ್ ಮಾಡುವಾಗ, ಪಾರ್ವರ್ಡ್ ಮಾಡುವಾಗ, ಕಾಮೆಂಟ್ ಮಾಡುವಾಗ ಎಚ್ಚರಿಕೆ ವಹಿಸುವಂತೆ ಅವರು ತಿಳಿಸಿದ್ದಾರೆ.ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಳ್ಳುವ ಅಭ್ಯರ್ಥಿ ಮತ್ತು ಪಕ್ಷಗಳು ಮುಂಚಿತವಾಗಿಯೇ ಆಯೋಗದ ಅನುಮತಿ ಪಡೆಯುವಂತೆ ನಿರ್ದೇಶನ ನೀಡಲಾಗಿದೆ. ಈ ಮೂಲಕ ಪಡೆಯುವ ಪ್ರಚಾರ ವೆಚ್ಚವನ್ನು ಅಭ್ಯರ್ಥಿ ಮತ್ತು ಪಕ್ಷಗಳ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಸಹಾಯದೊಂದಿಗೆ ಮಾಡುವ ಪ್ರಚಾರವೂ ಮಾದರಿ ನೀತಿ ಸಂಹಿತೆ ಅಡಿ ಸೇರಲಿದೆ.