ಈ ಹಿಂದೆ ಮನೆಯಲ್ಲಿ ಮರದ ಅಥವಾ ಕಬ್ಬಿಣದ ಪೆಟ್ಟಿಗೆ, ಬೆತ್ತದಿಂದ ಮಾಡಿದ ಪೆಟ್ಟಿಗೆ ರೂಪದ ವಸ್ತು ಬಟ್ಟೆಗಳನ್ನು ಇರಿಸಲು ಬಳಸಲಾಗುತ್ತಿತ್ತ. ಕಾಲಾನುಸಾರ ಆ ಸ್ತಳವನ್ನು ಬೀರು ಅಥವಾ ಗಾಡ್ರೆಜ್ ಆಕ್ರಮಿಸಿದವು. ತದನಂತರ ಸ್ಥಳವಕಾಶದ ಕಾರಣ ಅವು ಮೂಲೆಗೆ ಸರಿಯುತ್ತಿದ್ದು, ಇದೀಗ ವಾರ್ಡ್ರೋಬ್ ಆ ಸ್ಥಳವನ್ನು ಆಕ್ರಮಿಸಿವೆ. ಹೌದು ವಿಶಾಲವಾದ, ಕ್ರಿಯಾತ್ಮಕ ಮತ್ತು ವಿಶಿಷ್ಟವಾಗಿ ಕಾಣುವ ಕಸ್ಟಮೈಸ್ ವಾರ್ಡ್ರೋಬ್ ಮನೆಯ ಸುಂದರತೆಗೆ, ಕುಶಲತೆಗೆ ಅಚ್ಚುಕಟ್ಟುತನಕ್ಕೆ ಹಿಡಿದ ಕನ್ನಡಿಯಾಗಿದ್ದು, ಮನೆಗೆ ಹೇಗೆ ಗೋಡೆಗಳು ಮುಖ್ಯವೋ ಅದೇ ರೀತಿಯಲ್ಲಿ ಮಲಗುವ ಕೋಣೆಗೆ ವಾರ್ಡ್ರೋಬ್ ಕೂಡ ಅಷ್ಟೇ ಮುಖ್ಯ ಎನ್ನುವಂತಾಗಿದೆ.
ಕೆಲವು ದಶಕಗಳ ಹಿಂದೆ, ಮನೆಗಳಲ್ಲಿ ವಾರ್ಡ್ರೋಬ್ ಗಳಿಗೆ ಅಷ್ಟೊಂದು ಮಹತ್ವ ಇರಲಿಲ್ಲ. ಬಟ್ಟೆ ಮತ್ತು ವಸ್ತುಗಳನ್ನು ಮರೆಮಾಡಲು ಬಳಸಲಾಗುತ್ತಿತ್ತಾದರೂ, ಕಾಲಾನಂತರದಲ್ಲಿ ಅದು ಅತ್ಯಾಧುನಿಕ ಮಾಡ್ಯುಲರ್ ಫಿಟ್ಟಿಂಗ್ ಫಿಕ್ಚರ್ ಗಳೊಂದಿಗೆ ಮಾಂತ್ರಿಕ ರೂಪಾಂತರ ಪಡೆದುಕೊಂಡಿತು. ಒಟ್ಟಿನಲ್ಲಿ ಆಧುನಿಕ ವಾರ್ಡ್ರೋಬ್ ನಿಮ್ಮ ವೈಯಕ್ತಿಕ ವಸ್ತುಗಳ ಸುರಕ್ಷತೆಗೆ ಅತ್ಯಂತ ಪರಿಣಾಮಕಾರಿ ಮಾದರಿ.
ವಾರ್ಡ್ರೋಬ್ ಗಳು ನಿಮ್ಮ ಬಟ್ಟೆ ಮತ್ತು ಪರಿಕರಗಳ ಸಂಗ್ರಹಣೆಯ ಸ್ಥಳಗಳು ಮಾತ್ರವಲ್ಲ. ಏಕೆಂದರೆ ಆಧುನಿಕ ಬದುಕಿನಲ್ಲಿ ನಿಮ್ಮ ಮಲಗುವ ಕೋಣೆಯ ವಾರ್ಡ್ರೋಬ್ ವಿನ್ಯಾಸವು ಫ್ಯಾಷನ್ ಅಂಶವಾಗಿಯೂ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ವಾರ್ಡ್ರೋಬ್ ವಿನ್ಯಾಸವನ್ನು ಕೇವಲ ಕಸ್ಟಮೈಸ್ ಮಾಡದೆ ನಿಮ್ಮ ಜೀವನಶೈಲಿಗೆ ಅನುಗುಣವಾಗಿರಿಸಿಕೊಳ್ಳಬೇಕು.
ಹಾಗಾದರೆ ಇತ್ತೀಚಿನ ದಿನಗಳಲ್ಲಿ ಯಾವ ರೀತಿಯ ವಾರ್ಡ್ರೋಬ್ ಗಳು ಹೆಚ್ಚು ಚಾಲ್ತಿಯಲ್ಲಿದೆ ಎಂಬುದನ್ನು ನೋಡೋಣ.
ಸ್ಲೈಡಿಂಗ್ ಮಿರರ್ಡ್ ವಾರ್ಡ್ರೋಬ್:
ಸೌಂದರ್ಯಶಾಸ್ತ್ರದ ಪ್ರಕಾರ ಮಿರರ್ ಫಿನಿಶ್ ವಾರ್ಡ್ರೋಬ್ ವಿನ್ಯಾಸವು ಕೋಣೆಗೆ ಒಂದು ಗುಡ್ ಲುಕ್ ನೀಡುತ್ತದೆ. ಸ್ಲೈಡಿಂಗ್ ಬಾಗಿಲುಗಳು ಜಾಗವನ್ನು ಸಮರ್ಥವಾಗಿ ಬಳಸಿಕೊಳ್ಳುವುದಲ್ಲದೇ ಒಟ್ಟಾರೆ ವಿನ್ಯಾಸಕ್ಕೆ ನಯವಾದ ನೋಟವನ್ನು ನೀಡುತ್ತದೆ, ಕನ್ನಡಿ ಫಿನಿಶಿಂಗ್ ಕೋಣೆಯನ್ನು ದೊಡ್ಡದಾಗಿ ಮತ್ತು ಹೆಚ್ಚು ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ಫ್ಯಾಬ್ರಿಕ್, ಲೆದರ್, ಗ್ಲಾಸ್ ಮುಂತಾದ ಇತರ ವಸ್ತುಗಳ ಜೊತೆ ಮಿಶ್ರಿತ ವಿವಿಧ ಬಣ್ಣಗಳ ಕನ್ನಡಿಗಳು ಚಾಲ್ತಿಯಲ್ಲಿವೆ.
ಫ್ಲೂಟೆಡ್ ಡಿಸೈನ್ ವಾರ್ಡ್ರೋಬ್:
ಇತ್ತೀಚಿನ ದಿನಗಳಲ್ಲಿ ಇಂಟೀರಿಯರ್ ಗಳ ವಿಷಯಕ್ಕೆ ಬಂದರೆ, ಫ್ಲುಟೆಡ್ ಡಿಟೇಲಿಂಗ್ ದೊಡ್ಡ ಜಾಗತಿಕ ಟ್ರೆಂಡ್ ಗಳಲ್ಲಿ ಒಂದಾಗಿದೆ. ಇದು ವಾರ್ಡ್ರೋಬ್ ವಿನ್ಯಾಸಕ್ಕೆ ಅಲಂಕಾರಿಕ ಮತ್ತು ಸೊಗಸಾದ ಶೈಲಿಯನ್ನು ನೀಡುತ್ತದೆ. ಫ್ಲೂಟೆಡ್ ಫಿನಿಶ್ ನೀವು ಸಾಂಪ್ರದಾಯಿಕ ಅಥವಾ ಆಧುನಿಕ ಸ್ಥಳ ಯಾವುದೇ ರೀತಿಯ ವಿನ್ಯಾಸಕ್ಕೆ ಸುಲಭವಾಗಿ ಒಗ್ಗಿಕೊಳ್ಳುವುದಲ್ಲದೇ, ಆಕರ್ಷಣೀಯವು ಆಗಿರುತ್ತದೆ.
ಗ್ಲಾಸ್ ವಾರ್ಡ್ರೋಬ್:
ಆಧುನಿಕ ಮಲಗುವ ಕೋಣೆಗಳಲ್ಲಿ ಗ್ಲಾಸ್ ವಾರ್ಡ್ರೋಬ್ ವಿನ್ಯಾಸಗಳು ಜನಪ್ರಿಯ ಆಯ್ಕೆಯಾಗಿ ವಿಕಸನಗೊಂಡಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಪ್ಪು/ಚಿನ್ನ/ತಾಮ್ರದ ಪ್ರೊಫೈಲ್‌ಗಳ ಮೇಲೆ ಡಾರ್ಕ್ ಶೇಡ್ ಗ್ಲಾಸ್ ವಾರ್ಡ್ ರೋಬ್ ಗಳು ಹೊಸ ಯುಗದ ವಿನ್ಯಾಸಕ್ಕೆ ಹೇಳಿ ಮಾಡಿಸಿದಂತಿದೆ. ವಾರ್ಡ್‌ರೋಬ್ ಬಾಗಿಲು ಹಾಕಿದರೂ ಹೊರಗಿನಿಂದಲೂ ಗೋಚರಿಸಬಹುದಾಗಿದೆ.
ವಾಕ್-ಇನ್ ಅಥವಾ ರೀಚ್-ಇನ್ ವಾರ್ಡ್ರೋಬ್:
MRIIRS ನಲ್ಲಿನ ಫ್ಯಾಕಲ್ಟಿ ಆಫ್ ಆರ್ಕಿಟೆಕ್ಚರ್ ಮತ್ತು ಡಿಸೈನ್ ವಿಭಾಗದ ಮುಖ್ಯಸ್ಥರಾದ ಶ್ರುತಿ ಜೈನ್ ಅವರು, ನಿಮ್ಮ ಮಲಗುವ ಕೋಣೆಗಳಿಗೆ ವಾಕ್-ಇನ್ ಅಥವಾ ರೀಚ್-ಇನ್ ವಾರ್ಡ್ರೋಬ್ ಅನ್ನು ಆಯ್ಕೆ ಮಾಡಲು ಸಲಹೆ ನೀಡುತ್ತಾರೆ. ದೊಡ್ಡ ಮಲಗುವ ಕೋಣೆಗೆ ಹೊಂದಿಕೊಳ್ಳಲು ನಿಮ್ಮ ಮನೆಯನ್ನು ವಿಸ್ತರಿಸುತ್ತಿದ್ದರೆ, ವಾಕ್-ಇನ್ ವಾರ್ಡ್ರೋಬ್ ಆಯ್ಕೆ ಮಾಡಬಹುದು. ಎಲ್ಲಾ ಡಿಸೈನರ್ ಬಟ್ಟೆಗಳು, ಬ್ಯಾಗ್‌ಗಳು ಮತ್ತು ಬೂಟುಗಳ ಗೋಚರತೆಯೊಂದಿಗೆ ಡ್ರಾಯರ್‌ಗಳು, ಶೆಲ್ಫ್‌ಗಳು ಮತ್ತು ಹ್ಯಾಂಗಿಂಗ್ ಸ್ಪೇಸ್‌ಗಳು ಸಿಗುತ್ತದೆ.