ಇದೇ ಅಕ್ಟೋಬರ್ 12ರಂದು ಮುಕ್ತಾಯಗೊಂಡ ಇ-ಹರಾಜು ಪ್ರಕ್ರಿಯೆಯಲ್ಲಿ ಗುತ್ತಿಗೆ ಆಧಾರದ ತನ್ನ 96 ವಾಣಿಜ್ಯ ಸ್ವತ್ತುಗಳ ಪೈಕಿ ಕೇವಲ ಒಂದು ಆಸ್ತಿಯನ್ನು ಮಾರಾಟ ಮಾಡುವಲ್ಲಿ ಮಾತ್ರ ಚಂಡೀಗಡ ಗೃಹ ಮಂಡಳಿ (ಸಿಎಚ್‌ಬಿ) ಸಫಲವಾಗಿದೆ. ಅದಕ್ಕೂ ಮುನ್ನ, ಅಂದರೆ ಸೆಪ್ಟೆಂಬರ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 99 ಸ್ವತ್ತುಗಳಲ್ಲಿ ಕೇವಲ ಮೂರು ಸ್ವತ್ತುಗಳ ಮಾರಾಟದಲ್ಲಿ ಯಶಸ್ಸು ಕಂಡಿತ್ತು.
ಇದೀಗ ಅಕ್ಟೋಬರ್ 20ರಂದು ಮತ್ತೊಮ್ಮೆ ಇ-ಹರಾಜು ಪ್ರಕ್ರಿಯೆ ಆಯೋಜಿಸಿರುವ ಚಂಡೀಗಡ ಗೃಹ ಮಂಡಳಿ, 152 ಆಸ್ತಿಗಳ ಹರಾಜಿಗೆ ಸಿದ್ಧತೆ ನಡೆಸಿದೆ. ಈ ಹಿಂದೆ ಹರಾಜಾಗದೇ ಉಳಿದಿರುವ 95 ವಾಣಿಜ್ಯ ಸ್ವತ್ತುಗಳನ್ನು ಲೀಸ್ ಆಧಾರದಲ್ಲಿ ಮತ್ತು 57 ವಸತಿ ಸ್ವತ್ತುಗಳನ್ನು ಫ್ರೀಹೋಲ್ಡ್ ಆಧಾರದಲ್ಲಿ ಈ ಪ್ರಕ್ರಿಯೆಯಲ್ಲಿ ಹರಾಜು ಮಾಡಲು ಸಿಎಚ್‌ಬಿ ಮುಂದಾಗಿದೆ.
ಹರಾಜು ಪ್ರಕ್ರಿಯೆ ಕುರಿತು ಮಾತನಾಡಿರುವ ಚಂಡೀಗಡ ಗೃಹ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಶಪಾಲ್ ಗಾರ್ಗ್, ʻನಿರ್ಮಾಣಗೊಂಡಿರುವ ಮನೆಗಳನ್ನು ನಿಗದಿಪಡಿಸಿದ ಮೂಲ ಬೆಲೆಗಿಂತ ಅತಿಹೆಚ್ಚು ಮೊತ್ತಕ್ಕೆ ಬಿಡ್ ಮಾಡುವ ಅರ್ಹ ಬಿಡ್ದಾರರಿಗೆ ಹಂಚಿಕೆ ಮಾಡಲಾಗುತ್ತದೆ. ಅದೂ ಅಲ್ಲದೆ, ಪರಿಗಣನೆ (ಕನ್ಸಿಡರೇಷನ್)/ಪ್ರೀಮಿಯಂ ಮೇಲೆ ಯಾವುದೇ ರೀತಿಯ ಸರಕು ಮತ್ತು ಸೇವಾ ತೆರಿಗೆ (GST) ಅನ್ವಯವಾಗುವುದಿಲ್ಲʼ ಎಂದು ಮಾಹಿತಿ ನೀಡಿದ್ದಾರೆ.
ಆಸಕ್ತಿ ತೋರುತ್ತಿರುವ ಎಲ್ಲ ಬಿಡ್ದಾರರು ಹರಾಜು ಪ್ರಕ್ರಿಯೆಗೆ ಮುಂಗಡ ಹಣ ಸಲ್ಲಿಸುವ ವಿಧಾನ ಹಾಗೂ ಇ-ಬಿಡ್ ಮತ್ತು ಇತರ ಹೆಚ್ಚಿನ ಮಾಹಿತಿ ಪಡೆಯಲು ಚಂಡೀಗಡ ಗೃಹ ಮಂಡಳಿಯ ಅಧಿಕೃತ ವೆಬ್ಸೈಟ್ www.chbonline.in ಭೇಟಿ ನೀಡಬಹುದು.
ಇ-ಬಿಡ್ ಸಲ್ಲಿಕೆಗೆ ಪ್ರತಿಯೊಬ್ಬ ಸಂಭಾವ್ಯ ಬಿಡ್ದಾರರು ಕೂಡ https://etenders.chd.nic.in ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ʻಇ-ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಲು, ಮಾನ್ಯತೆ ಹೊಂದಿರುವ ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಡಿಜಿಟಲ್ ಸಿಗ್ನೇಚರ್ಗಳು ಪ್ರಾಥಮಿಕ ಅಗತ್ಯಗಳುʼ ಎಂದು ಚಂಡೀಗಡ ಗೃಹ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಶಪಾಲ್ ಗಾರ್ಗ್ ಮಾಹಿತಿ ನೀಡಿದರು.
ಸ್ವತ್ತುಗಳನ್ನು ಸುಲಭವಾಗಿ ಗುರುತಿಸಲು ಅನುಕೂಲ ಆಗಲೆಂದು ಪ್ರತಿ ಸ್ವತ್ತುಗಳಿಗೂ ಸ್ಟಿಕ್ಕರ್ಗಳನ್ನು ಅಂಟಿಸಲಾಗಿದೆ ಮತ್ತು ನಿರೀಕ್ಷಿತ ಬಿಡ್ದಾರರಿಂದ ತಪಾಸಣೆಗೆ ಅನುಕೂಲವಾಗುವಂತೆ ವಿವಿಧ ವಲಯಗಳಲ್ಲಿ ಕ್ಷೇತ್ರ ಕಚೇರಿಗಳನ್ನು (ಸೈಟ್ ಆಫೀಸ್) ಒದಗಿಸಲಾಗಿದೆ. ಹರಾಜಿಗೆ ಇರಿಸಲಾಗಿರುವ ಪ್ರತಿಯೊಂದು ಸ್ವತ್ತು ಮತ್ತು ಸೈಟ್ ಕಚೇರಿಗಳ ಸ್ಥಳವು ಚಂಡೀಗಡ ಗೃಹ ಮಂಡಳಿಯ www.chbonline.in ವೆಬ್ಸೈಟ್ನಲ್ಲಿ ಲಭ್ಯವಿದೆ.