25.1 C
Bengaluru
Thursday, November 21, 2024

ಚಂಡೀಗಢ ಗೃಹಮಂಡಳಿ: 222 ಫ್ಲಾಟ್ ಅನಧಿಕೃತ ಪರಭಾರೆ

ಚಂಡೀಗಢ ಗೃಹಮಂಡಳಿ (ಚಂಡೀಗಢ ಹೌಸಿಂಗ್ ಬೋರ್ಡ್-ಸಿಎಚ್‌ಬಿ) ನಡೆಸಿದ ಇತ್ತೀಚೆಗಿನ ಸಮೀಕ್ಷೆಯಲ್ಲಿ, 1,268 ಸಣ್ಣ ಫ್ಲಾಟ್ಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನವುಗಳಿಗೆ ಬೀಗ ಹಾಕಲಾಗಿದ್ದು, 222 ಫ್ಲಾಟ್ಗಳು ಅನಧಿಕೃತವಾಗಿ ಪರಭಾರೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

“ಸೆಪ್ಟೆಂಬರ್‌ನಲ್ಲಿ ನಡೆದ ಮೊದಲ ಸಮೀಕ್ಷೆ ಸಂದರ್ಭದಲ್ಲಿ ಬಾಗಿಲು ಹಾಕಿದ್ದ ಫ್ಲಾಟ್‌ಗಳ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಲು ಚಂಡೀಗಢ ಗೃಹಮಂಡಳಿ ನಿರ್ಧರಿಸಿ, ನವೆಂಬರ್‌ 6ರಂದು ಅದನ್ನು ಪೂರ್ಣಗೊಳಿಸಿದೆ,” ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಶಪಾಲ್‌ ಗಾರ್ಗ್‌ ತಿಳಿಸಿದ್ದಾರೆ.

ಸಮೀಕ್ಷೆ ವರದಿ ಹೇಳುವ ಪ್ರಕಾರ, 636 ಫ್ಲಾಟ್‌ಗಳಿಗೆ ಬೀಗ ಹಾಕಲಾಗಿತ್ತು. 222 ಫ್ಲಾಟ್ಗಳಲ್ಲಿ ಅನಧಿಕೃತ ವ್ಯಕ್ತಿಗಳು ವಾಸವಾಗಿರುವುದು ಕಂಡುಬಂದಿದೆ ಮತ್ತು 38 ಫ್ಲಾಟ್‌ಗಳಲ್ಲಿ ವಾಸಾವಾಗಿರುವವರು ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿದ್ದಾರೆ.

“368 ಫ್ಲಾಟ್ಗಳಲ್ಲಿ ಮೂಲ ಮಂಜೂರಾತಿದಾರರು ವಾಸವಾಗಿದ್ದರೆ, ಮೂರು ಸರ್ಕಾರಿ ಇಲಾಖೆಗಳ ಸುಪರ್ದಿಯಲ್ಲಿವೆ ಮತ್ತು ಒಂದನ್ನು ಗೃಹಮಂಡಳಿಯು ಮುಟ್ಟುಗೋಲು ಹಾಕಿಕೊಂಡಿದೆ,” ಎಂದು ಅಧಿಕಾರಿ ಹೇಳಿದ್ದಾರೆ.

ಸಮೀಕ್ಷೆ ನಡೆಸಿದ ಈ ಫ್ಲಾಟ್‌ಗಳು ಸೆಕ್ಟರ್ 49, 56, 38—ಪಶ್ಚಿಮ, ಧನಾಸ್, ಕೈಗಾರಿಕಾ ವಲಯ, ಮೌಳಿ ಜಾಗರಣ್, ರಾಮ್ ದರ್ಬಾರ್, ಮಾಳೋಯಾ (ಚಿಕ್ಕ ಫ್ಲಾಟ್ಗಳು) ಮತ್ತು ಮಾಳೋಯಾದಲ್ಲಿ (ಎಆರ್ಎಚ್ಸಿ- ಕೈಗೆಟುಕುವ ದರದ ಬಾಡಿಗೆ ವಸತಿ ಸಂಕೀರ್ಣಗಳು) ಇರುವವು.

ಪುನರ್ವಸತಿ ಯೋಜನೆ, ಸಣ್ಣ ಫ್ಲಾಟ್ ಯೋಜನೆ ಮತ್ತು ಕೈಗೆಟುಕುವ ದರದ ಬಾಡಿಗೆ ವಸತಿ ಸಂಕೀರ್ಣಗಳ ಯೋಜನೆ ಅಡಿಯಲ್ಲಿ ಮನೆ ಪಡೆದ ನಿಜವಾದ ಫಲಾನುಭವಿಗಳು ಮತ್ತು ಅವರ ಕುಟುಂಬದವರೇ ಮನೆಗಳಲ್ಲಿ ವಾಸವಾಗಿದ್ದಾರೆಯೇ ಅಥವಾ ಬೇರೆಯವರಿಗೆ ಪರಭಾರೆ ಮಾಡಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಚಂಡೀಗಢ ಗೃಹಮಂಡಳಿಯು ಸೆಪ್ಟೆಂಬರ್ನಲ್ಲಿ 18,138 ಮನೆಗಳ ಸಮೀಕ್ಷೆ ನಡೆಸಿತ್ತು.

ಈ ಸಮೀಕ್ಷೆ ವೇಳೆ, 895 ಫ್ಲಾಟ್ಗಳನ್ನು ಬೇರೆಯವರು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ. 1,268 ಫ್ಲಾಟ್ಗಳಿಗೆ ಬೀಗ ಹಾಕಲಾಗಿತ್ತು ಮತ್ತು 130 ಫ್ಲಾಟ್ಗಳಲ್ಲಿ ವಾಸವಾಗಿರುವವರು ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದ್ದಾರೆ. ಈ ಫ್ಲಾಟ್ಗಳನ್ನು ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ ಮತ್ತು ಇವುಗಳನ್ನು ಮಾರಾಟ ಮಾಡುವ ಅಥವಾ ಪರಭಾರೆ ಮಾಡುವ ಹಕ್ಕು ಫಲಾನುಭವಿಗಳಿಗೆ ಇರುವುದಿಲ್ಲ.

ʻಎರಡನೇ ಸಮೀಕ್ಷೆ ವೇಳೆ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದವರಿಗೆ ಫ್ಲಾಟ್ ಮಂಜೂರಾತಿಯನ್ನು ರದ್ದು ಮಾಡುವ ಸಂಬಂಧ ಷೋಕಾಸ್ ನೋಟಿಸ್ ನೀಡಲಾಗುವುದುʼ ಎಂದು ಯಶಪಾಲ್ ಗಾರ್ಗ್ ತಿಳಿಸಿದ್ದಾರೆ.

ʻಫ್ಲಾಟ್‌ಗಳನ್ನು ಅಕ್ರಮವಾಗಿ ಮಾರಾಟ ಅಥವಾ ಪರಭಾರೆ ಮಾಡಿದ, ಬೇರೆಯವರಿಗೆ ಬಾಡಿಗೆ ನೀಡಿದ ಫಲಾನುಭವಿಗಳ ಜೊತೆಗೆ ಅವುಗಳನ್ನು ಖರೀದಿಸಿದವರು/ ಬಾಡಿಗೆ ಪಡೆದವರು ಕೂಡ ವಂಚನೆ, ಮೋಸ ಅಥವಾ ನಕಲು ಮಾಡಿದ ಆರೋಪದಡಿ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆʼ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಶಪಾಲ್ ಗಾರ್ಗ್ ಎಚ್ಚರಿಸಿದ್ದಾರೆ.

Related News

spot_img

Revenue Alerts

spot_img

News

spot_img