ಬೆಂಗಳೂರು, ಡಿ.29- ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಕಳಸಾ-ಬಂಡೂರಿ ನಾಲಾ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ಇಂದು ಟ್ವಿಟ್ ಮಾಡಿದ್ದು, ಉತ್ತರ ಕರ್ನಾಟಕದ (North Karnataka) ಭಾಗದ ಮಹತ್ವಕಾಂಕ್ಷಿ ಯೋಜನೆ ಕಳಸಾ ಬಂಡೂರಿ (Kalasa-Banduri Nala Project) ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗವು (Central Water Commission) ಅನುಮತಿಯನ್ನು ನೀಡಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು, ಪ್ರಧಾನಿ ನರೇಂದ್ರ ಮೋದಿ (PM Modi) ಹಾಗೂ ಗೃಹ ಸಚಿವ ಅಮಿತ್ ಶಾ (Amit Shah) ಸೇರಿದಂತೆ ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಹಿಂದೆ ಕಳಸಾ ಬಂಡೂರಿ ಯೋಜನೆಗೆ ನಾವು ಹೋರಾಟ ಮಾಡಿದ್ದೇವೆ. ಇದೀಗ ವಿಸ್ತೃತ ಯೋಜನಾ ವರದಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರವೂ ಅತ್ಯಂತ ಶ್ರಮ ಹಾಕಿದೆ. ನಾನು ಬಸವರಾಜ ಬೊಮ್ಮಾಯಿ, ಗೋವಿಂದ್ ಕಾರಜೋಳ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಇದರೊಂದಿಗೆ ಉತ್ತರ ಕರ್ನಾಟಕದ ಬಹುಬೇಡಿಕೆಯ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರವು ಹಸಿರು ನಿಶಾನೆ ತೋರಿದೆ. ರಾಜ್ಯ ಸರ್ಕಾರ ಕಳುಹಿಸಿದ್ದ ಡಿಪಿಆರ್ ವರದಿಗೆ ಜಲ ಆಯೋಗದಿಂದ ಅನುಮತಿ ಸಿಕ್ಕಿದ್ದು, ಧಾರವಾಡ, ಬೆಳಗಾವಿ, ಗದಗ ಸೇರಿ ಹಲವು ಜಿಲ್ಲೆಗಳ ಜನರಿಗೆ ಇದು ಶುಭ ಸುದ್ದಿ ಆಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಅವರನ್ನ ಭೇಟಿಯಾಗಿದ್ದರು.
ಇದನ್ನು ಬಳಕೆ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳಬಹುದಾಗಿದೆ. ಕಳಸಾ ಬಂಡೂರಿ ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ಬೆಳಗಾವಿಯ ಬಹುತೇಕ ಭಾಗಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವದ ಯೋಜನೆಯಾಗಿದೆ. ಇದಕ್ಕಾಗಿ ನವಲಗುಂದ ಮತ್ತು ನರಗುಂದ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಅನೇಕ ರೈತರು ವರ್ಷಗಟ್ಟಲೆ ನಿರಂತರ ಪ್ರತಿಭಟನೆ ನಡೆಸಿದರು. ರಾಜಕೀಯವಾಗಿಯೂ ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಅಂತಿಮವಾಗಿ ನ್ಯಾಯಾಕರಣ ತೀರ್ಪು ನೀಡಿ ನದಿನೀರಿನ ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಿತ್ತು. ತೀರ್ಪು ಅಧಿಸೂಚನೆಯಾಗಿಯೂ ಜಾರಿಯಾಗಿದೆ. ಆ ಬಳಿಕ ಕಳಸಾ-ಬಂಡೂರಿ ಯೋಜನೆ ಜಾರಿಗೆ ಭಾರೀ ಒತ್ತಡಗಳು ಕೇಳಿಬಂದಿದ್ದವು. ಆದರೆ, ಯೋಜನೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ ಗೋವಾ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.