Pension : ಅನರ್ಹ ಪಿಂಚಣಿದಾರರು ನಕಲಿ ಆಧಾರ್ ಕಾರ್ಡ್ ಬಳಸಿ ಎರಡು ಪಿಂಚಣಿ (Pension) ಪಡೆಯುತ್ತಿರುವ ಮಾಹಿತಿ ಗುರುತಿಸಿದ್ದು, ಇದೀಗ ರಾಜ್ಯ ಸರ್ಕಾರ ಅನರ್ಹ ಪಿಂಚಣಿದಾರರಿಗೆ ಶಾಕ್ ಒಂದನ್ನು ನೀಡಿದೆ.
ಈಗಾಗಲೇ ಕೇಂದ್ರ ಸರ್ಕಾರ ವೃದ್ಧರು, ವಿಧವೆ, ವಿಶೇಷಚೇತನರು ಸೇರಿದಂತೆ ವಿವಿಧ ವರ್ಗದವರಿಗೆ ಮಾಸಿಕ ಪಿಂಚಣಿ ನೀಡುವ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ಒಬ್ಬರಿಗೇ ಎರಡೆರಡು ಬಾರಿ ಪಿಂಚಣಿ ಪಡೆಯುತ್ತಿರುವ ಮಾಹಿತಿ ಸಂಗ್ರಹಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.
ಎಲ್ಲಾ ಬಳಕೆದಾರರಿಗೆ ಮಾಸಿಕ ಪಿಂಚಣಿಯನ್ನು ಖಜಾನೆ-2 ತಂತ್ರಾಂಶದ ಮೂಲಕ ಆಧಾರ್ ಆಧಾರಿತ ನೇರ ಹಣ ವರ್ಗಾವಣೆ ಮಾಡಲು ಮಾಹಿತಿ ಅಪ್ ಡೇಟ್ ಮಾಡಲು ಮುಂದಾಗಿದ್ದು, ಇದರಿಂದ ಅನರ್ಹ ಪಿಂಚಣಿದಾರರ ಮಾಹಿತಿ ಸಿಗಲಿದೆ.
ಮುಖ್ಯವಾಗಿ ಪಿಂಚಣಿ ಯೋಜನೆ ಸೋರಿಕೆ ತಡೆಯುವ ಸಲುವಾಗಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯವು ಕಳೆದ ಮೇ ತಿಂಗಳು 24, 25 ರಂದು 3 ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಪಿಂಚಣಿ ಪ್ರಕರಣಗಳ ಪಟ್ಟಿ ಮಾಡಿ ಆಧಾರ್ ಸಂಖ್ಯೆ ಸೇರಿ ವಿವಿಧ ಮಾಹಿತಿ ಜೋಡಿಸುವಂತೆ ತಿಳಿಸಲಾಗಿದೆ.
ಇನ್ನು ಮಾಸಿಕ ಪಿಂಚಣಿ ಯೋಜನೆಗಳನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು 2023ರ ಜೂನ್ 2ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ.
ಸದ್ಯ ಯಾವುದೇ ಸುಳ್ಳು ಮಾಹಿತಿ ನೀಡಿ ಪಿಂಚಣಿ ಪಡೆಯುತ್ತಿರುವವರ ಮಾಹಿತಿ ಸಂಗ್ರಹಣೆಗಾಗಿ ರಾಜ್ಯ ಸರ್ಕಾರವು ಪ್ರಾಯೋಗಿಕವಾಗಿ ರಾಜ್ಯದ ಉತ್ತರ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಾಹಿತಿ ಸಂಗ್ರಹಕಾರ್ಯಾಚರಣೆ ಆರಂಭಿಸಿದೆ.