25.2 C
Bengaluru
Friday, June 28, 2024

ಡಿಕೆಶಿ ಸಿಬಿಐ ಕೇಸ್ ವಾಪಸ್; ಸಂಪುಟ ನಿರ್ಧಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ರಾಮನಗರ: ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ವಕೀಲರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ನಂತರ ಅವರು ಮಾಧ್ಯಮಗಳ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರಲ್ಲದೆ; ಕಳ್ಳಕಾಕರ ರಕ್ಷಣೆಗೆ ಈ ಸರಕಾರ ಇದೆ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಕೀಲರಾಗಿ, ವಕೀಲ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಆದರೆ, ಅವರ ನೇತೃತ್ವದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಸರಿಯಲ್ಲ. ಸುಪ್ರೀಂ ಕೋರ್ಟ್ ನೀಡಿರುವ ಹಲವಾರು ತೀರ್ಪುಗಳು ನಮ್ಮ ಕಣ್ಣಮುಂದೆ ಇವೆ. ಈಗಾಗಲೇ ಇದೇ ವಿಷಯವಾಗಿ ಎರಡು ಬಾರಿ ಹೈಕೋರ್ಟ್ ನಲ್ಲಿ ಚರ್ಚೆ ವಿಚಾರಣೆ ನಡೆದು ಆದೇಶಗಳು ಬಂದಿವೆ. ಸಿಬಿಐ ತನಿಖೆ ರದ್ದು ಕೋರಿ ಡಿ.ಕೆ.ಶಿವಕುಮಾರ್ ಅವರು ಎರಡು ಸಲ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿಲ್ಲ. ಇದು ಸಿಎಂಗೆ ಗೊತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದರು.

ಇಂಥ ಸೂಕ್ಷ್ಮ ವಿಚಾರ ನ್ಯಾಯಾಲಯದ ಮುಂದೆ ಇದ್ದಾಗ ಸರಕಾರ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿರುವುದು ತಪ್ಪು. ಕಾನೂನನ್ನು ಧಿಕ್ಕರಿಸಿದವರು ಇವರು. ನಾವು ಕಾನೂನಿಗಿಂತ ದೊಡ್ಡವರು ಎಂಬುದನ್ನು ಅವರು ಪ್ರದರ್ಶನ ಮಾಡಿಕೊಂಡಿದ್ದಾರೆ. ಬಡವರಿಗೆ ರಕ್ಷಣೆ ಇಲ್ಲ, ಲೂಟಿ‌ ಮಾಡುವವರಿಗೆ ಕೊಳ್ಳೆ ಹೊಡೆಯುವವರ ಪರವಾಗಿ ಸರಕಾರ ಇದೆ ಎಂಬುದನ್ನು ಇವರು ನಿರೂಪಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕಿಡಿ ಕಾರಿದರು.

ಡಿಸಿಎಂ ಬಗ್ಗೆ ಹೆಚ್ಡಿಕೆ ವ್ಯಂಗ್ಯ:

ಸಂಪುಟ ಸಭೆಯಿಂದ ಹೊರಗುಳಿದ ಡಿಕೆಶಿ ಬಗ್ಗೆ ವ್ಯಂಗ್ಯವಾಡಿದ ಮಾಜಿ ಮುಖ್ಯಮಂತ್ರಿಗಳು; ಡಿಸಿಎಂ ಎಂತಹ ದೊಡ್ಡತನ ತೋರಿಸಿದ್ದಾರೆ ಅಂದರೆ, ತಮ್ಮ ಕೇಸಿನ ವಿಚಾರ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗುತ್ತದೆ ಎಂದು ಅವರು ಕ್ಯಾಬಿನೆಟ್ ಸಭೆಯಿಂದ ಹೊರಗೆ ಉಳಿದಿದ್ದರು. ಪಾಪ.. ಅವರು ಸಂಪುಟ ಸಭೆಗೂ ಹೋಗಿಲ್ಲ. ಅವರ ಸಹಕಾರಕ್ಕೆ ಅಭಿನಂದಿಸಲೇಬೇಕು ಎಂದು ಟಾಂಗ್ ನೀಡಿದರು.

ಡಿಸಿಎಂ ಅವರು ಕಳೆದ 3 ದಿನಗಳ ಹಿಂದೆ ಹಿರಿಯ ವಕೀಲರ ಸಭೆ ಕರೆದು, ಈ ಕೇಸಿನಿಂದ ಯಾವ ರೀತಿ ರಕ್ಷಣೆ ಪಡೆಯಬೇಕು ಎಂದು ಚರ್ಚೆ ಮಾಡಿದ್ದಾರೆ. ನಮಗೆ ಎಲ್ಲಾ ಮಾಹಿತಿ ಇದೆ. ಮೊನ್ನೆಯೇ ಈ ವಿಚಾರ ನನ್ನ ಗಮನಕ್ಕೆ ಬಂತು. ಸಂಪುಟ ಸಭೆಯ ತೀರ್ಮಾನ, ಈ ನಡವಳಿಕೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತದೆ. ಈ ವಿಚಾರವನ್ನು ಮುಂದಿನ ಸದನದಲ್ಲಿ ಚರ್ಚೆ ಮಾಡೋಣ ಎಂದರು ಅವರು.

 

ರಾಜ್ಯ ಸರಕಾರದ ಮೇಲೆ ಡಿಕೆಶಿ ಒತ್ತಡ ಹಾಕಿದ್ದಾರಾ? ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು; ಇಲ್ಲಿ ಒತ್ತಡದ ಪ್ರಶ್ನೆ ಅಲ್ಲ, ಸರಕಾರ ಇರೋದು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡುವುದಕ್ಕೆ. ತಿಳಿವಳಿಕೆ ಇರುವವರೇ ಇಂತಹ ನಿರ್ಣಯ ಮಾಡಿರೋದು ಸರಕಾರಕ್ಕೆ ಛೀಮಾರಿ ಹಾಕಿದಂತೆ ಇದೆ ಇದು. ಒಂದು ಬಾರಿ ಆದೇಶ ಮಾಡಿದ ಮೇಲೆ ಬದಲಾವಣೆ ಮಾಡಲು ಆಗುವುದಿಲ್ಲ ಎಂದರು.

 

ಅಕ್ರಮ ಆಸ್ತಿ ಕೇಸನ್ನು ಸಿಬಿಐನಿಂದ ವಾಪಸ್ ಪಡೆದು ಲೋಕಾಯುಕ್ತ ಅಥವಾ ಸ್ಥಳೀಯ ಪೊಲೀಸರಿಂದ ತನಿಖೆ ಮಾಡಲು ಆಗುತ್ತದೆಯೇ? ಲೋಕಾಯುಕ್ತ ಅಥವಾ ಪೊಲೀಸರು ಈ ತನಿಖೆ ಮಾಡಲು ಸಾಧ್ಯವೇ? ಹಿಂದಿನ ಸರಕಾರವು ಸಿಬಿಐಗೆ ವಹಿಸಲು ಸ್ಪೀಕರ್ ಅನುಮತಿ ಪಡೆದಿರಲಿಲ್ಲ ಎನ್ನುವುದಾದರೆ, ಇವರು ಸ್ಪೀಕರ್ ಅವರಿಂದ ಅನುಮತಿ ಪಡೆದಿದ್ದಾರಾ? ಇದೆಲ್ಲಾ ಕೇವಲ ಸಬೂಬುಗಳು ಮಾತ್ರ. ತನಿಖೆ ಮುಂದುವರಿಸಿ ಎಂದು ಈಗಾಗಲೇ ಕೋರ್ಟ್ ಆದೇಶ ಆಗಿದೆ. ಈಗ ಸ್ಪೀಕರ್ ಅನುಮತಿ ಪಡೆದರೂ ಸಿಬಿಐನಿಂದ ಕೇಸ್ ವಾಪಸ್ ಪಡೆಯಲು ಆಗುತ್ತಾ? ಎಂದು ರಾಜ್ಯ ಸರಕಾರಕ್ಕೆ ಪ್ರಶ್ನೆಗಳ ಸುರಿಮಳೆಗರೆದರು ಮಾಜಿ ಮುಖ್ಯಮಂತ್ರಿಗಳು.

ಇದೇ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿದ್ದಾಗ, ಲೋಕಾಯುಕ್ತ ರದ್ದು ಮಾಡಿ, ಎಸಿಬಿ ರಚನೆ ಮಾಡಿ ಎಲ್ಲಾ ಅಕ್ರಮಗಳನ್ನು ಮುಚ್ಚಿ ಹಾಕಿದರು. ಇಂಥ ಕೆಲಸದಲ್ಲಿ ಸಿದ್ದರಾಮಯ್ಯ ನಿಪುಣರು. ಈ ಬಗ್ಗೆ ಅವರಿಗೆ ಬಹಳ ಅನುಭವ ಇದೆ. ಹಾಗಾಗಿ ಕಾನೂನು ವ್ಯವಸ್ಥೆಯಲ್ಲಿ ಹೊಸ ಹೆಜ್ಜೆ ಹಾಕಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

Related News

spot_img

Revenue Alerts

spot_img

News

spot_img