21.5 C
Bengaluru
Monday, December 23, 2024

ಅಂತರಾಷ್ಟ್ರೀಯ ಸ್ಪಾಮ್‌ ಕರೆಗಳನ್ನು ಪತ್ತೆ ಮಾಡಲು ಟ್ರೂ ಕಾಲರ್ ‌ನಿಂದ ಹೊಸ ಪ್ಲಾನ್! ‌ವಾಟ್ಸಾಪ್ ‌ನಲ್ಲಿ ಬರಲಿದೆ ಕಾಲರ್ ಐಡಿ ಸೇವೆ.

ಮೊಬೈಲ್‌ಗಳಲ್ಲಿ ಸ್ಪಾಮ್‌ ಕರೆಗಳು, ಆನ್‌ಲೈನ್‌ ವಂಚನೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಟ್ರೂಕಾಲರ್, ಇಂಟರ್ನೆಟ್ ‌ನಲ್ಲಿ ಸ್ಪಾಮ್‌ ಕಾಲ್‌ಗಳನ್ನು ಪರಿಶೀಲಿಸಲು ವಾಟ್ಸಾಪ್ ‌ ಮತ್ತಿತರ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಿಗೆ ಲಭ್ಯವಿರುವ ಕಾಲರ್ ಐಡೆಂಟಿಟಿ ಸೌಲಭ್ಯವನ್ನು ಹೊರತರುವುದಾಗಿ ಘೋಷಿಸಿದೆ.

ಮೊಬೈಲ್‌ನಲ್ಲಿ ಟ್ರೂ ಕಾಲರ್‌ ಅಪ್ಲಿಕೇಶನ್‌ ಡೌನ್ಲೋಡ್‌ ಮಾಡಿಕೊಂಡರೆ ನಿಮಗೆ ಬರುವ ಕರೆಗಳ ಗುರುತನ್ನು ಪತ್ತೆ ಮಾಡಬಹುದು. ಭಾರತದಲ್ಲಿ ವಾಟ್ಸಾಪ್‌ ಬಳಕೆದಾರರು ಹೆಚ್ಚಿದ್ದಾರೆ. ಹೆಚ್ಚಿನ ಸಂಖ್ಯೆಯ ಅಂತರರಾಷ್ಟ್ರೀಯ ಕರೆಗಳು ಕೂಡ ಸ್ಪಾಮ್‌ ರೂಪದಲ್ಲಿ ಬರುತ್ತಿರುವುದರಿಂದ ವಂಚಕರನ್ನು ಪತ್ತೆ ಮಾಡುವುದು ಕಷ್ಟಕರವಾಗಿದೆ. ಹಾಗಾಗಿಯೇ ಟ್ರೂಕಾಲರ್‌, ಪ್ರಸ್ತುತ ಬೀಟಾ ಹಂತದಲ್ಲಿ ವಾಟ್ಸಾಪ್‌ ಮತ್ತು ಇತರ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಕಾಲರ್ ಐಡೆಂಟಿಟಿ ಫೀಚರ್‌ ಅನ್ನು ಪರೀಕ್ಷಿಸುತ್ತಿದೆ.

ಇದನ್ನು ಈ ತಿಂಗಳ ಕೊನೆಯಲ್ಲಿ ಜಾಗತಿಕವಾಗಿ ಪರಿಚಯಿಸಲಾಗುವುದು ಎಂದು ಟ್ರೂಕಾಲರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲನ್ ಮಮೆಡಿ ಹೇಳಿದ್ದಾರೆ. ಇಂಡೋನೇಷ್ಯಾ (+62), ಕೀನ್ಯಾ (+254), ಇಥಿಯೋಪಿಯಾ (+251), ಮಲೇಷ್ಯಾ (+60), ವಿಯೆಟ್ನಾಂ (+84) ಮತ್ತು ಇತರ ದೇಶಗಳಿಂದ, ಅಂತರರಾಷ್ಟ್ರೀಯ ಸಂಖ್ಯೆಗಳ ವಾಟ್ಸಾಪ್‌ ಕರೆಗಳು ಬಳಕೆದಾರರಿಗೆ ತಲೆನೋವಾಗಿವೆ. ಯುಟ್ಯೂಬ್‌ ಬಳಕೆದಾರರಿಗೂ ಇದೇ ರೀತಿಯಾಗಿ ವಂಚಿಸಲಾಗುತ್ತಿದೆ. ವೀಡಿಯೊಗಳನ್ನು ಲೈಕ್‌ ಮಾಡಿಸಿಕೊಳ್ಳಲು ಹೋಗಿ ಹಣ ಕಳೆದುಕೊಳ್ಳುತ್ತಿದ್ದಾರೆ.

ಈ ವಂಚನೆಗಳನ್ನು ನಡೆಸಲು ಟೆಲಿಗ್ರಾಮ್ ಮತ್ತು ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಸೇರಿದಂತೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಸ್ಕ್ಯಾಮರ್‌ಗಳು ಟ್ಯಾಪ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದೇಶದ ಟೆಲಿಕಾಂ ನಿಯಂತ್ರಕ (TRAI) ಪ್ರಕಾರ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್‌ನಂತಹ ನೆಟ್‌ವರ್ಕ್ ಆಪರೇಟರ್‌ಗಳು ತಮ್ಮ ನೆಟ್‌ವರ್ಕ್‌ಗಳಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಫಿಲ್ಟರ್‌ಗಳನ್ನು ಬಳಸಿಕೊಂಡು ಟೆಲಿಮಾರ್ಕೆಟಿಂಗ್ ಕರೆಗಳನ್ನು ನಿರ್ಬಂಧಿಸಲು ಪ್ರಾರಂಭಿಸುವಂತೆ ಸೂಚಿಸಲಾಗಿತ್ತು.

ಇದೀಗ ಸ್ವೀಡನ್ ಮೂಲದ ಟ್ರೂ ಕಾಲರ್‌ ಅಂತಹ ಸೇವೆಯನ್ನು ಜಾರಿಗೆ ತರಲು ಟೆಲಿಕಾಂ ಕಂಪನಿಗಳೊಂದಿಗೆ ಚರ್ಚೆ ನಡೆಸುತ್ತಿದೆ. ಏಪ್ರಿಲ್‌ನಲ್ಲಿ ಟ್ರೂಕಾಲರ್, ಐಫೋನ್ ಬಳಕೆದಾರರಿಗೆ ಲೈವ್ ಕಾಲರ್ ಐಡಿ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಆದಾಗ್ಯೂ ಐಒಎಸ್ ಬಳಕೆದಾರರು ಈ ವೈಶಿಷ್ಟ್ಯವನ್ನು ಉಪಯೋಗಿಸಿಕೊಳ್ಳಲು ಸಿರಿಯನ್ನು ಬಳಸಬೇಕಾಗುತ್ತದೆ. ಲೈವ್ ಕಾಲರ್ ಐಡಿಯನ್ನು ಐಫೋನ್ ಬಳಕೆದಾರರಿಗಾಗಿ ಟ್ರೂಕಾಲರ್ ಅಪ್ಲಿಕೇಶನ್‌ನಲ್ಲಿ ಪ್ರೀಮಿಯಂ ವೈಶಿಷ್ಟ್ಯವಾಗಿ ಲಭ್ಯವಾಗುವಂತೆ ಮಾಡಲಾಗಿದೆ.

ಈ ಫೀಚರ್‌ ಬಳಸಿಕೊಳ್ಳಲು ಐಫೋನ್ ಬಳಕೆದಾರರು ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಟ್ರೂ ಕಾಲರ್‌ನ ಪ್ರೀಮಿಯಂ ಚಂದಾದಾರಿಕೆ, ಪ್ರೀಮಿಯಂ ಮತ್ತು ಗೋಲ್ಡ್ ಪ್ರೀಮಿಯಂನಲ್ಲಿ ಲಭ್ಯವಿದೆ. ಒಬ್ಬ ವ್ಯಕ್ತಿಯ ಪ್ರೀಮಿಯಂ ಚಂದಾದಾರಿಕೆ ವರ್ಷಕ್ಕೆ 529 ರೂಪಾಯಿ. ಮೂರು ತಿಂಗಳಿಗೆ ಬೇಕಾದಲ್ಲಿ 179 ರೂಪಾಯಿ. ಟ್ರೂಕಾಲರ್ ಗೋಲ್ಡ್ ಚಂದಾದಾರಿಕೆ ವರ್ಷಕ್ಕೆ 5,000 ರೂಪಾಯಿ ನಿಗದಿಪಡಿಸಲಾಗಿದೆ.

Related News

spot_img

Revenue Alerts

spot_img

News

spot_img