ಬೆಂಗಳೂರು, ಜೂ. 08 : ಇನ್ಮುಂದೆ ಡೆಬಿಟ್ ಕಾರ್ಡ್ ಅನ್ನು ಬಳಸದೆಯೇ ಎಟಿಎಂನಲ್ಲಿ ಹಣವನ್ನು ವಿತ್ ಡ್ರಾ ಮಾಡಬಹುದು. ಅದು ಹೇಗೆ ಅಂತೀರಾ..? ಇದೆಲ್ಲವೂ ಡಿಜಿಟಲ್ ಯುಗದ ಮಹಿಮೆಯಾಗಿದೆ. ಎಲ್ಲವೂ ಕೈ ಬೆರಳ ತುದಿಯಲ್ಲಿ ವಹಿವಾಟುಗಳು ನಡೆಯುತ್ತಿವೆ. ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣವನ್ನು ವರ್ಗಾಯಿಸಲು ಬ್ಯಾಂಕ್ ಗೆ ತೆರಳಬೇಕಿಲ್ಲ ಎಂಬುದು ಹಳೆಯ ವಿಚಾರ. ಆದರೆ, ಈಗ ಡೆಬಿಟ್ ಕಾರ್ಡ್ ಬಳಸದೇ ಎಟಿಎಂ ನಲ್ಲಿ ಹಣ ವಿತ್ ಡ್ರಾ ಮಾಡಬಹುದು ಎಂಬುದು ಹೊಸ ವಿಚಾರ.
ಹೌದು.. ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಕ್ಯಾಶ್ ವಿತ್ ಡ್ರಾವಲ್ ಮೂಲಕ ಕೇವಲ ಯುಪಿಐ ಬಳಸಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಅವಕಾಶವಿದೆ. ಈ ನೂತನ ಸೌಲಭ್ಯವೀಗ ಭಾರತದಲ್ಲೂ ಲಭ್ಯವಿದೆ. ಬ್ಯಾಂಕ್ ಆಫ್ ಬರೋಡಾ ಈ ನೂತನ ಸೇವೆಯನ್ನು ಪ್ರಾರಂಭಿಸಿದೆ. ಇದನ್ನು ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಕ್ಯಾಶ್ ವಿತ್ ಡ್ರಾವಲ್ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯ ಮೂಲಕ ಗ್ರಾಹಕರು ತಮ್ಮ ಎಟಿಎಂನಲ್ಲಿ ಯುಪಿಐ ಬಳಸಿ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು.
ಭೀಮ್ ಯುಪಿಐ, ಬಾಬ್ ವರ್ಲ್ಡ್ ಯುಪಿಐ ಅಥವಾ ಇತರ ಯಾವುದೇ ಯುಪಿಐ ಅಪ್ಲಿಕೇಷನ್ ಗಳನ್ನು ಬಳಸಿ ಡೆಬಿಟ್ ಕಾರ್ಡ್ ಇಲ್ಲದೆಯೇ ಬ್ಯಾಂಕ್ ಆಫ್ ಬರೋಡಾದ ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡಬಹುದು. ಈ ಸೇವೆಯನ್ನು ಪರಿಚಯಿಸದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಗೆ ಬ್ಯಾಂಕ್ ಆಫ್ ಬರೋಡಾ ಪಾತ್ರವಾಗಿದೆ. ಈ ವ್ಯವಸ್ಥೆಯ ಮೂಲಕ ಹಣ ವಿತ್ ಡ್ರಾ ಮಾಡಲು ಯಾವುದೇ ಶುಲಕ್ವನ್ನು ವಿಧಿಸುವುದಿಲ್ಲ ಎಂದು ಬ್ಯಾಂಕ್ ಹೇಳಿದೆ.
ದಿನ ಒಂದಕ್ಕೆ ಈ ಸೇವೆಯನ್ನು ಬಳಸಿ 5,000ರೂ. ಅನ್ನು ವಿತ್ ಡ್ರಾ ಮಾಡಲು ಅವಕಾಶವಿದೆ. ಭಾರತಾದ್ಯಂತ ಒಟ್ಟು 11,000ಕ್ಕೂ ಅಧಿಕ ಎಟಿಎಂ ನೆಟ್ ವರ್ಕ್ ಗಳನ್ನು ಬ್ಯಾಂಕ್ ಆಫ್ ಬರೋಡಾ ಹೊಂದಿದೆ. ಇದರಲ್ಲಿ ಹಣವನ್ನು ವಿತ್ ಡ್ರಾ ಮಾಡಲು ಎಟಿಎಂ ನಲ್ಲಿ ಯುಪಿಐ ಕ್ಯಾಶ್ ವಿತ್ ಡ್ರಾವಲ್ ಎಂಬ ಆಯ್ಕೆಯನ್ನು ಆರಿಸಿ. ಬಳಿಕ ಎಷ್ಟು ಮೊತ್ತ ಬೇಕೋ ಅದನ್ನು ಎಂಟ್ರಿ ಮಾಡಿ. ಆಗ ಎಟಿಎಂ ಸ್ಕ್ರೀನ್ ಕ್ಯೂಆರ್ ಕೋಡ್ ಅನ್ನು ತೋರಿಸುತ್ತದೆ. ನೀವು ಯುಪಿಐ ಅಪ್ಲಿಕೇಶನ್ ಮೂಲಕ ಇದನ್ನು ಸ್ಕ್ಯಾನ್ ಮಾಡಿ. ನಂತರ ನಿಮ್ಮ ಫೋನ್ ನಲ್ಲಿ ಯುಪಿಐ ಪಿನ್ ಅನ್ನು ಎಂಟ್ರಿ ಮಾಡಿ. ಅಷ್ಟಟಟೇ ನಿಮ್ಮ ಕೈಗೆ ಹಣ ಸಿಗುತ್ತದೆ.