ಬೆಂಗಳೂರು, ಆ. 30 : ಮನೆಯನ್ನು ಖರೀದಿಸುವುದು ಅಥವಾ ಕಟ್ಟುವುದು ಸುಲಭದ ಸಂಗತಿ ಅಲ್ಲವೇ ಅಲ್ಲ. ಮೊದಲೆಲ್ಲಾ ಲಕ್ಷಾಂತರ ರೂಪಾಯಿ ಹಣವಿದ್ದರೆ ಮನೆಯನ್ನು ಖರೀದಿಸಬಹುದಿತ್ತು. ಈಗ ಇದು ಕೋಟಿ ಮೀರಿದೆ. ನಗರಗಳಲ್ಲಿ ಕೋಟಿಗಟ್ಟಲೆ ಹಣವನ್ನು ಹೊಂದಿಸಿ ಮನೆ ಖರೀದಿಸುವುದು ಕನಸಿನ ಮಾತೂ ಹೌದು. ಆದರೆ, ಬ್ಯಾಂಕ್ ಗಳು ದೇಶದ ಅಭಿವೃದ್ಧಿ ಸಲುವಾಗಿ ಗೃಹ ಸಾಲವನ್ನು ನೀಡುತ್ತದೆ. ಈ ಗೃಹ ಸಾಲ ಪಡೆದು ಮನೆಯನ್ನು ಖರೀದಿಸುವುದು ಹಾಗೂ ಕಟ್ಟುವುದು ಈಗ ಸುಲಭವಾಗಿದೆ.
ಆದರೆ, ಇಎಂಐ ಕಟ್ಟಿ ಮುಗಿಸುವುದರೊಳಗೆ ಸಾಕಾಗಿ ಹೋಗುತ್ತದೆ. ಒಬ್ಬರೇ ಸಾಲ ಪಡೆದು ಮರುಪಾವತಿಸುವುದು ಕಷ್ಟವೂ ಹೌದು. ಹೀಗಾಗಿಯೇ ಕೆಲ ಬ್ಯಾಂಕ್ ಗಳಲ್ಲಿ ಜಂಟಿ ಗೃಹ ಸಾಲಗಳನ್ನು ನೀಡುವ ವ್ಯವಸ್ಥೆಯೂ ಇದೆ. ಪತಿ-ಪತ್ನಿ ಇಬ್ಬರೂ ಸೇರಿ ಒಟ್ಟಿಗೆ ಗೃಹ ಸಾಲವನ್ನು ಪಡೆಯಬಹುದು. ಇದರಿಂದ ಸಾಕಷ್ಟು ಲಾಭವೂ ಇದ್ದು, ಹೊರೆಯೂ ತಗ್ಗುತ್ತದೆ. ಪತಿ-ಪತ್ನಿ ಇಬ್ಬರಿಗೂ ಹೇಗೆ ಸಾಲ ನೀಡಲು ಸಾಧ್ಯ..? ಇಬ್ಬರೂ ಬೇರೆ ಬೇರೆ ಸಾಲವನ್ನು ಪಡೆಯಬೇಕಾ ಎಂದು ನೀವು ಅಂದುಕೊಳ್ಳಬಹುದು.
ಹಾಗೆಲ್ಲಾ ಏನಿಲ್ಲ. ಇಬ್ಬರೂ ಒಂದೇ ಬ್ಯಾಂಕ್ ನಲ್ಲಿ ಜಂಟಿಯಾಗಿ ಸಾಲವನ್ನು ಪಡೆಯಬಹುದು. ಜಂಟಿ ಖಾತೆಯನ್ನು ತೆರೆದ ರೀತಿಯಲ್ಲಿ ಈಗ ಬ್ಯಾಂಕ್ ಗಳು ಪತಿ ಹಾಗೂ ಪತ್ನಿಗೆ ಜಂಟಿ ಗೃಹ ಸಾಲವನ್ನು ಕೂಡ ನೀಡುತ್ತಲಿವೆ. ಜಂಟಿಯಾಗಿ ಗೃಹ ಸಾಲ ಪಡೆದರೆ, ಬ್ಯಾಂಕ್ ಗಳು ಕಡಿಮೆ ಬಡ್ಡಿಗೆ ಸಾಲವನ್ನು ಒದಗಿಸುತ್ತದೆ. ಪತಿ-ಪತ್ನಿ ಇಬ್ಬರೂ ಕೂಡ ಒಟ್ಟಿಗೆ ಗೃಹಸಾಲಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಆಗ ಮಹಿಳೆ ಕೂಡ ಆಸ್ತಿಯ ಪಾಲುದಾರಿಕೆಯ ಭಾಗವಾಗುತ್ತಾಳೆ.
ಇದರಿಂದ ಬ್ಯಾಂಕ್ ಗಳು ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತದೆ. ಇದರಿಂದ ಗೃಹ ಸಾಲದ ಹೊರೆ ಕೊಂಚ ತಗ್ಗುತ್ತದೆ. ಹಾಗಾಗಿ ನೀವೂ ಗೃಹ ಸಾಲ ಮಾಡುವುದಾದರೆ, ಪತ್ನಿಯ ಜೊತೆ ಸೇರಿ ಜಂಟಿ ಸಾಲ ಪಡೆಯಿರಿ. ಜಂಟಿ ಗೃಹ ಸಾಲ ಪಡೆಯುವುದರಿಂದ ಹೆಚ್ಚಿನ ಮೊತ್ತದ ಸಾಲ ಸಿಗುತ್ತದೆ. ಪತಿ-ಪತ್ನಿ ಇಬ್ಬರೂ ಸೇರಿ ಗೃಹ ಸಾಲಕ್ಕೆ ಅರ್ಜಿ ಹಾಕಿದರೆ, ಬ್ಯಾಂಕ್ ಹೆಚ್ಚಿನ ಮೊತ್ತವನ್ನು ಸಾಲ ನೀಡಲು ಮುಂದೆ ಬರುತ್ತದೆ.
ಇದರಿಂದ ಕೈ ಸಾಲ ಮಾಡಿ, ಎರಡೆರಡು ಕಡೆ ತೊಂದರೆ ಎದುರಿಸುವ ಬದಲು, ಒಂದೇ ಕಡೆ ಸಾಲ ಪಡೆದು ಸುಲಭವಾಗಿ ತೀರಿಸಬಹುದಾಗಿದೆ. ಜಂಟಿ ಗೃಹ ಸಾಲ ಪಡೆದರೆ ಇಂಎಂಐ ಕೂಡ ಡಿವೈಡ್ ಆಗುತ್ತದೆ. ಈಗ ನೀವು 30 ಲಕ್ಷ ರೂಪಾಯಿಯನ್ನು 15 ವರ್ಷಕ್ಕೆಂದು ಸಾಲ ಪಡೆಯುತ್ತೀರಿ ಎಂದಿಟ್ಟುಕೊಳ್ಳೋಣ. ಅದೂ ಕೂಡ ಶೇ.7ರಷ್ಟು ಬಡ್ಡಿದರದಲ್ಲಿ ಸಾಲ ತೊರೆತಿದೆ ಎಂದಾದರೆ ನೀವು ಪ್ರತೀ ತಿಂಗಳು 26,965 ರೂಪಾಯಿ ಬಡ್ಡಿಯನ್ನು ಕಟ್ಟಬೇಕಾಗುತ್ತದೆ.
ಜಂಟಿ ಗೃಹ ಸಾಲ ಆಗಿರುವುದರಿಂದ ಇಬ್ಬರಿಗೂ ಈ ಇಎಂಐ ಮೊತ್ತ ಡಿವೈಡ್ ಆಗುತ್ತದೆ. ಅಲ್ಲಿಗೆ 13,482.5 ರೂಪಾಯಿ ಒಬ್ಬರಿಗೆ ತಗುಲುತ್ತದೆ. ಇದರಿಂದ ಇಎಂಐ ಹೊರೆ ಕೊಂಚ ತಗ್ಗಿದಂತೆಯೇ ಸರಿ. ಇದರಿಂದ ಇಬ್ಬರಿಗೂ ಸಮಸ್ಯೆ ಆಗುವುದಿಲ್ಲ. ಇನ್ನು ಜಂಟಿಯಾಗಿ ಗೃಹ ಸಾಲವನ್ನು ಪಡೆಯುವುದರಿಂದ ತೆರಿಗೆ ವಿನಾಯಿತಿಯೂ ಸಿಗುತ್ತದೆ.
ಅಂದರೆ, ಸೆಕ್ಷನ್ 80C ಅಡಿಯಲ್ಲಿ 1.5ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಪಡೆಯಬಹುದು. ಹಾಗೆಯೇ ಸೆಕ್ಷನ್ 24 ಅಡಿಯಲ್ಲಿ ಬಡ್ಡಿ ಪಾವತಿ ಮೇಲೆ 2ಲಕ್ಷ ರೂ. ತನಕ ತೆರಿಗೆ ಉಳಿತಾಯ ಮಾಡಬಹುದು. ಅಲ್ಲಿಗೆ 3.5 ಲಕ್ಷ ತೆರಿಗೆ ವಿನಾಯಿತಿ ಸಿಗುತ್ತದೆ. ಇಬ್ಬರಿಗೂ ಸೇರಿ ಇದು 7 ತೆರಿಗೆ ವಿನಾಯಿತಿ ದೊರೆಯುತ್ತಿದೆ. ಇದರಿಂದ ನಿಮಗೆ ಲಾಭವಾಗುತ್ತದೆ.