ಬೆಂಗಳೂರು, ಮಾ. 28 : ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಪ್ರವಾಹ ಉಂಟಾಗಿತ್ತು. ಮಳೆಯಿಂದ ಉಂಟಾದ ಈ ಪ್ರವಾಹದಲ್ಲಿ ಕಾರುಗಳು ಹಾನಿಯಾಗಿ ಮಾಲೀಕರು ನಷ್ಟ ಅನುಭವಿಸಿದ್ದರು. ಅದರಲ್ಲೂ ಹೊರವರ್ತುಲ ರಸ್ತೆಯ ಸ್ಟರ್ಲಿಂಗ್ ಅಸೆಂಟಿಯಾ ಅಪಾರ್ಟ್‌ಮೆಂಟ್‌ನಲ್ಲಿ ಮಳೆ ನೀರು ತುಂಬಿ ಕಾರುಗಳು ಹಾನಿಯಅಗಿದ್ದವು. ಈ ಹಾನಿಯ ಪರಿಹಾರ ಇದೀಗ ಮಾಲೀಕರಿಗೆ ದೊರೆತಿದೆ.
ಬೆಳ್ಳಂದೂರಿನಲ್ಲಿರುವ ಈ ಅಪಾರ್ಟ್ ಮೆಂಟ್ ನಲ್ಲಿ ಒಟ್ಟು 172 ಫ್ಲ್ಯಾಟ್ಗಳಿದ್ದವು. ಇದರಲ್ಲಿ 5 ಮತ್ತು 6ನೇ ಬ್ಲಾಕ್‌ಗಳು ಪ್ರವಾಹಕ್ಕೆ ಸಿಲುಕಿಕೊಂಡಿದ್ದವು. ಪಾರ್ಕಿಂಗ್ ಗಳಿಗೆ ಮಳೆ ನೀರು ನುಗ್ಗಿ ಕಾರುಗಳು ಹಾನಿಯಾಗಿದ್ದವು. ಈ ಸಂಬಂಧ ಸಂಕಷ್ಟಕ್ಕೆ ತುತ್ತಾಗಿದ್ದ 28 ಫ್ಲ್ಯಾಟ್‌ಗಳ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಫ್ಲ್ಯಾಟ್ ಮಾಲೀಕರಾದ ಪ್ರಣಯ್ ಶ್ರೀವಾಸ್ತವ ಮತ್ತಿತರರು 2022ರ ಅ. 21ರಂದು ದೂರು ದಾಖಲಾಗಿತ್ತು. ನಂತರ ಮಾರತ್ ಹಳ್ಳಿಯಲ್ಲಿ ದಾಖಲಾದ ಪ್ರಕರಣವು ರೇರಾ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದೆ ರೇರಾ ಕೋರ್ಟ್ ಇದೀಗ ತೀರ್ಪನ್ನು ನೀಡಿದೆ.
ಸ್ಟರ್ಲಿಂಗ್ ಅರ್ಬನ್ ವೆಂಚರ್ಸ್ ಪ್ರೈವೆಟ್ ಲಿಮಿಟೆಡ್ ನ ನಿರ್ಲಕ್ಷ್ಯದಿಂದಲೇ ಹೀಗಾಗಿದೆ ಎಂದು ಕಾರುಗಳ ಮಾಲೀಕರು ದೂರಿದ್ದಾರೆ. ಕಾರುಗಳ ಮಾಲೀಕರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡಬೇಕು. ಇದರ ಜೊತೆಗೆ ಭರವಸೆ ನೀಡಿದ ಸೌಕರ್ಯಗಳನ್ನು ಜಾರಿ ಮಾಡುವವರೆಗೂ ಪ್ರತಿ ತಿಂಗಳು 500 ರೂ. ನೀಡಬೇಕು. ಪರಹಾರವನ್ನು ನೀಡದೇ ಹೋದಲ್ಲಿ ವಾರ್ಷಿಕ ಶೇ. 6ರ ಬಡ್ಡಿ ನೀಡಬೇಕು. ಅಲ್ಲದೇ, ವ್ಯಾಜ್ಯ ವೆಚ್ಚಕ್ಕೆ 5,000 ರೂ. ನೀಡಬೇಕು ಎಂದು ಆದೇಶ ನೀಡಿದೆ.
ಇದರೊಂದಿಗೆ ಭರವಸೆ ನೀಡಿದ ಸೌಲಭ್ಯಗಳನ್ನು ನೀಡದಿದ್ದಲ್ಲಿ ತಿಂಗಳಿಗೆ 500 ರೂ. ದಂಡ ನೀಡವುದರ ಜೊತೆಗೆ ಕ್ಲಬ್‌ಹೌಸ್ ನೀಡದಿದ್ದಲ್ಲಿ ತಿಂಗಳಿಗೆ 1,000 ರೂ.ಗಳನ್ನು ಬಿಲ್ಡರ್ ಗಳು, ಮಾಲೀಕರಿಗೆ ಪಾವತಿ ಮಾಡಬೇಕು ಎಂದು ರೇರಾ ನ್ಯಾಯಾಲಯ ಆದೇಶ ನೀಡಿದೆ. ಈ ಮೂಲಕ ಫ್ಲಾಟ್ ಗಳ ಮಾಲೀಕರು ಈಗ ನಿಟ್ಟುಸಿರು ಬಿಡುವಂತಾಗಿದೆ.