23.6 C
Bengaluru
Thursday, December 19, 2024

ಬೃಂದಾವನ್ ಪ್ರಾಪರ್ಟಿ ಆಸ್ತಿ ಹರಾಜಿಗೆ ಮುಹೂರ್ತ ಫಿಕ್ಸ್ !

ಬೆಂಗಳೂರು, ಅ. 19: ಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ ನಂಬಿಸಿ ಮೂರು ಸಾವಿರ ಮಂದಿಗೆ ಮಕ್ಮಲ್ ಟೋಪಿ ಹಾಕಿದ್ದ ಬೃಂದಾವನ್ ಪ್ರಾಪರ್ಟಿ ಆಸ್ತಿಯ ಹರಾಜು ಪ್ರಕ್ರಿಯೆಗೆ ಶೀಘ್ರದಲ್ಲಿಯೇ ಚಾಲನೆ ಸಿಗಲಿದೆ.
ರಾಜಾಜಿನಗರದಲ್ಲಿದ್ದ ಬೃಂದಾವನ್ ಪ್ರಾಪರ್ಟಿಸ್ ಮಾಲೀಕ ದಿನೇಶ್ ಗೌಡನನ್ನು ಸಿಐಡಿ ಪೊಲೀಸರು ಹಾಸನದ ಅರಕಲಗೂಡಿನಲ್ಲಿ ಬಂಧಿಸಿದ್ದರು. ಸದ್ಯ ಜಾಮೀನು ಪಡೆದು ಬಿಡುಗಡೆಯಾಗಿರುವ ದಿನೇಶ್ ಗೌಡ ಬೃಂದಾವನ್ ಪ್ರಾಪರ್ಟಿ ಹೆಸರಿನಲ್ಲಿ ಖರೀದಿಸಿರುವ ಸುಮಾರು ನೂರು ಕೋಟಿ ರೂ. ಅಧಿಕ ಮೊತ್ತದ ಆಸ್ತಿಗಳನ್ನು ಜಪ್ತಿ ಮಾಡಿತ್ತು. ಈ ಆಸ್ತಿಗಳನ್ನು ಹರಾಜು ಪ್ರಕ್ರಿಯೆ ಮಾಡಿ ಸಂತ್ರಸ್ತರಿಗೆ ಹಂಚುವಂತೆ ಪೊಲೀಸರು ಕಂದಾಯ ಇಲಾಖೆಗೆ ಶಿಫಾರಸು ಮಾಡಿದ್ದರು.

ದಿನೇಶ್ ಗೌಡ ನ ಬೃಂದಾವನ್ ಪ್ರಾಪರ್ಟಿ ಆಸ್ತಿಯ ಹರಾಜು ಪ್ರಕ್ರಿಯೆ ಕಡತಕ್ಕೆ ಕಂದಾಯ ಇಲಾಖೆ ಪ್ರಧಾನ ಕಾಯದರ್ಶಿ ಅವರ ಸಹಿಗೆ ಕಳುಹಿಸಲಾಗಿದೆ. ಸದ್ಯ ಈ ಕಡತ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಬಳಿಯಿದೆ. ನವೆಂಬರ್ ೦೫ ರೊಳಗೆ ಬೃಂದಾವನ್ ಪ್ರಾಪರ್ಟಿ ಆಸ್ತಿ ಹರಾಜು ಪ್ರಕ್ರಿಯೆ ಕಡತಕ್ಕೆ ಸಹಿ ಬೀಳಲಿದ್ದು ಶೀಘ್ರದಲ್ಲಿಯೇ ಆಸ್ತಿ ಹರಾಜು ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಅವರ ಸಹಿ ಹಾಕಿದ ಕೂಡಲೇ ಬೃಂದಾವನ್ ಪ್ರಾಪರ್ಟಿ ಗೆ ಸೇರಿದ ಸುಮಾರು ನೂರು ಕೋಟಿ ರೂ. ಆಸ್ತಿಗಳನ್ನು ಹರಾಜು ಮಾಡಲಾಗುತ್ತದೆ. ಹರಾಜಿನಿಂದ ಬಂದ ಹಣವನ್ನು ಮೋಸ ಹೋಗಿರುವ 3672 ಮಂದಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುತ್ತದೆ. ಕಂದಾಯ ಇಲಾಖೆಯ ಆದೇಶದ ಬಳಿಕ ಬೃಂದಾವನ ಪ್ರಾಪರ್ಟಿ ಆಸ್ತಿಯ ಹರಾಜು ಪ್ರಕ್ರಿಯೆ ನಡೆಸಿ ಸಂತ್ರಸ್ತರಿಗೆ ಪಾವತಿ ಮಾಡುವ ಸಂಬಂಧ ಸಕ್ಷಮ ಪ್ರಾಧಿಕಾರ ನೇಮಕವಾಗಲಿದೆ. ಇದರಿಂದ ಆರು ವರ್ಷದಿಂದ ಹಣ ಕಳೆದುಕೊಂಡು ಚಾತಕ ಪಕ್ಷಿಗಳಂತೆ ನೋಡುತ್ತಿರುವ ಗ್ರಾಹಕರಿಗೆ ಕನಿಷ್ಠ ಹೂಡಿಕೆ ಮಾಡಿದ ಅಸಲು ಹಣ ಸಿಗುವ ನಿರೀಕ್ಷೆಯಿದೆ.

ಏನಿದು ಅಕ್ರಮ: ರಾಜಾಜಿನಗರದಲ್ಲಿ ಬೃಂದಾವನ್ ಪ್ರಾಪರ್ಟಿ ಕಚೇರಿ ತೆರೆದಿದ್ದ ದಿನೇಶ್ ಗೌಡ ತನ್ನ ಏಜೆಂಟರ ಮೂಲಕ ನಿವೃತ್ತರಿಗೆ ಗಾಳ ಹಾಕಿದ್ದ. ಕಡಿಮೆ ಮೊತ್ತಕ್ಕೆ ನಿವೇಶನ ಕೊಡುವುದಾಗಿ ನಂಬಿಸಿ ಸಾವಿರಾರು ಜನರಿಂದ ಲಕ್ಷಾಂತರ ರೂಪಾಯಿ ಹಣವನ್ನು ಸಂಗ್ರಹಿಸಿದ್ದ. ಹಣ ಹೂಡಿಕೆ ಮಾಡಿದವರಿಗೆ ನಿವೇಶನ ಕೊಡದೇ ಕಾಗೆ ಹಾರಿಸಿದ್ದ. ಬಂದವರಿಗೆ ಕೊರೊನಾ ನೆಪ ಹೇಳಿ ಕಳಿಸಿದ್ದ. ನಿವೇಶನ ಖರೀದಿ ಮಾಡಿದವರು ವರ್ಷಗಳ ಕಾಲ ತಾಳ್ಮೆಯಿಂದ ಕಾಯುತ್ತಿದ್ದರು.

ಇದ್ದಕ್ಕಿದ್ದಂತೆ ಕಚೇರಿ ಕ್ಲೋಸ್ :
2021 ರಲ್ಲಿ ರಾತ್ರೋ ರಾತ್ರಿ ಬೃಂದಾವನ ಪ್ರಾಪರ್ಟಿ ಕಚೇರಿಗೆ ಬೀಗ ಜಡಿದು ದಿನೇಶ್ ಗೌಡ ಪರಾರಿಯಾಗಿದ್ದ. ಕಚೇರಿ ಎದುರು ಜಮಾಯಿಸಿದ್ದ ನೂರಾರು ಸಂತ್ರಸ್ತರು ಪ್ರತಿಭಟನೆ ಮಾಡಿದ್ದರು. ಅಲ್ಲದೇ ಕೆಲವರು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಿವೃತ್ತ ಅಧಿಕಾರಿ ಪ್ರಸನ್ನ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿದ್ದ ರಾಜಾಜಿನಗರ ಪೊಲೀಸರು ಈ ಪ್ರಕರಣದ ಗಂಭೀರತೆ ಅರಿತು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಐಡಿ ಪೊಲೀಸರಿಗೆ ಬರೋಬ್ಬರಿ 3672 ದೂರುಗಳು ಸಲ್ಲಿಕೆಯಾಗಿದ್ದವು. ಸುಮಾರು 100 ಕೋಟಿ ರೂ. ಗೂ ಅಧಿಕ ಹಣ ವಂಚನೆ ಮಾಡಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಅರಕಲ ಗೂಡಿನಲ್ಲಿ ಸೆರೆ: ನಿವೇಶನ ಖರೀದಿದಾರರು ಬೀದಿಗೆ ಇಳಿಯುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಬೃಂದಾವನ್ ಪ್ರಾಪರ್ಟಿ ಮಾಲೀಕ ದಿನೇಶ್ ಗೌಡ ವಿಡಿಯೋ ಬಿಡುಗಡೆ ಮಾಡಿದ್ದ. ತಾನು ಎಲ್ಲರ ಹಣ ಹಿಂತಿರುಗಿಸುತ್ತೇನೆ. ನೀವು ಹಾಕಿದ ಹಣದಿಂದ ಜಮೀನು ಖರೀದಿ ಮಾಡಿದ್ದೇನೆ. ಎಲ್ಲರಿಗೂ ಹಣ ವಾಪಸು ನಿಡುವುದಾಗಿ ಹೇಳಿದ್ದ. ಈತನ ಜಾಡು ಹಿಡಿದು ತನಿಖೆ ನಡೆಸಿದ ಸಿಐಡಿ ಪೊಲೀಸರು ಆರೋಪಿಯನ್ನು ಹಾಸನದ ಅರಕಲ ಗೂಡಿನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಜಾಮೀನು ಪಡೆದು ಬಿಡುಗಡೆಯಾಗಿರುವ ದಿನೇಶ್ ಗೌಡ ತನ್ನ ಕುಟುಂಬವನ್ನು ದುಬೈನಲ್ಲಿ ಇರಿಸಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿವೆ. ದಿನೇಶ್ ಕೂಡ ಎಸ್ಕೇಪ್ ಆಗುವ ಪ್ಲಾನ್ ಹಾಕಿದ್ದಾನೆಯೇ ಎಂಬುದು ಸದ್ಯ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

ರಿಯಲ್ ಎಷ್ಟೇಟ್ ವಂಚನೆ ಹುಷಾರ್ : ಪತ್ರಿಕೆಗಳಲ್ಲಿ ಅತಿ ಹೆಚ್ಚು ಜಾಹೀರಾತು ನೀಡಿ ಜನರನ್ನು ಸೆಳೆಯುವ ರಿಯಲ್ ಎಸ್ಟೇಟ್ ಕಂಪನಿಗಳ ಪೂರ್ವಪರ ಪರಿಶೀಲಿಸಿದೇ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಪೆಟ್ಟು ತಿನ್ನಬೇಕಾಗುತ್ತದೆ. ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ಮುನ್ನೂರಕ್ಕಿಂತಲು ಹೆಚ್ಚು ರಿಯಲ್ ಎಸ್ಟೇಟ್ ಕಂಪನಿಗಳು ಜನರಿಂದ ಹಣ ಪಡೆದು ಟೋಪಿ ಹಾಕಿವೆ. ಇನ್ನು ನಿವೇಶನ ಖರೀದಿ ಹೆಸರಿನಲ್ಲಿ ಮಾಸಿಕ ಕಂತು ಕಟ್ಟುವ ಸ್ಕೀಮ್ ಪರಿಚಿಯಿಸಿ ಅನೇಕ ಹೌಸಿಂಗ್ ಸೊಸೈಟಿಗಳು ಕೂಡ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡಿರುವ ಪಟ್ಟಿಯಲ್ಲಿವೆ. ಇಂತಹ ಕಂಪನಿಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.

Related News

spot_img

Revenue Alerts

spot_img

News

spot_img