20.5 C
Bengaluru
Tuesday, July 9, 2024

ಲಂಚ ಪ್ರಕರಣ: ಶಾಸಕ ಮಾಡಾಳು ವಿರುಪಾಕ್ಷಪ್ಪ ಬೇಟೆಗೆ ಇಳಿದ ಲೋಕಾ ಪೊಲೀಸರು! ಮಾಡಾಳು ಎಲ್ಲಿ ?

ಬೆಂಗಳೂರು: ಮಾರ್ಚ್ 6:ಕಳೆದ ವಾರ ಲೋಕಯುಕ್ತ ಪೊಲೀಸರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL) ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ BWSSB ಯಲ್ಲಿ ಮುಖ್ಯ ಖಾತೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಸಕರ ಪುತ್ರ ಪ್ರಶಾಂತ್ ಮಾಡಲ್ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಮೊದಲನೇ ಆರೋಪಿ ಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ರವರಿಗಾಗಿ ಸತತ ಮೂರನೇ ದಿನವೂ ಲೋಕಾಯುಕ್ತ ಪೊಲೀಸರು ವಿವಿಧೆಡೆ ಶೋಧ ನಡೆಸಿದರು. ಪತ್ತೆಯಾಗದ ಕಾರಣ ತಮ್ಮ ಶೋಧ ಕಾರ್ಯವನ್ನು ಚುರುಕೊಗೊಳಿಸಿದ್ದಾರೆ. ಈ ಪತ್ತೆಕಾರ್ಯಕ್ಕಾಗಿ 7 ಡಿವೈಎಸ್ಪಿ ಗಳ ತಂಡವನ್ನು ರಚಿಸಲಾಗಿದೆ.

₹40 ಲಕ್ಷ ಲಂಚ ಪಡೆಯುತ್ತಿದ್ದಾಗ ವಿರುಪಾಕ್ಷಪ್ಪ ಅವರ ಮಗ, ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದರು. ಗುರುವಾರ ತಡ ರಾತ್ರಿ ಈ ಬಗ್ಗೆ ಸಿಎಂ ರವರ ಬಳಿ ಮಾತನಾಡಲೆಂದು ಬೆಂಗಳೂರು ತಲುಪಿದ್ದ ವಿರುಪಾಕ್ಷಪ್ಪ ತಲೆಮರೆಸಿಕೊಂಡಿದ್ದಾರೆ. ಈಗ ಆರೋಪಿ ವಿರುಪಾಕ್ಷಪ್ಪ ರವರಿಗಾಗಿ ಲೋಕಾಯುಕ್ತ ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಪ್ರಶಾಂತ್ ರವರನ್ನು ಬಂಧಿಸಿದ ಪೊಲೀಸರು ಆತನ ಖಾಸಗಿ ಕಚೇರಿಯಲ್ಲಿ ಶೋಧ ನಡೆಸಿ ₹1.62 ಕೋಟಿ ಲಂಚದ ಹಣವನ್ನು ಪತ್ತೆಮಾಡಿ ವಶಕ್ಕೆ ಪಡೆದುಕೊಂಡಿದ್ದರು. ಶಾಸಕ ವಿರುಪಾಕ್ಷಪ್ಪ ಮನೆಯಲ್ಲಿಯೂ ಸಹ ದಾಖಲೆಯಿಲ್ಲದ ₹6.10 ಕೋಟಿ ಪತ್ತೆಯಾಗಿತ್ತು. ಪ್ರಶಾಂತ್ ಬ್ಯಾಂಕ್ ಖಾತೆಗೆ ₹94 ಲಕ್ಷ ಜಮೆ ಆಗಿರುವುದಕ್ಕೆ ಚಕ್ಕಿತಗೊಂಡ ಲೋಕಯುಕ್ತ ಅಧಿಕಾರಿಗಳು KSDLನ ಟೆಂಡರ್ ಪ್ರಕ್ರಿಯೆ ಕುರಿತು ಶಾಸಕರನ್ನು ಪ್ರಶ್ನಿಸಿ ಪತ್ತೆಯಾಗಿರುವ ಬೇನಾಮಿ ಹಣದ ಮೂಲವನ್ನು ಪತ್ತೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಆರೋಪಿಗಳ ವಿರುದ್ದ ಪ್ರಾಥಮಿಕ ವರದಿ ಸಲ್ಲಿಸಲು ಸಿದ್ದತೆ:
ಪ್ರಶಾಂತ್ ಮಾಡಾಳ್ ಮತ್ತು ಅವರ ಜತೆ ಬಂಧಿತರಾಗಿರುವ ನಾಲ್ವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಜನಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ. ಪ್ರಕರಣದ ತನಿಖೆಗೆ ಸಂಬಂಧಿಸಿದ ಪ್ರಾಥಮಿಕ ವರದಿಯನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ.

ಇನ್ನೂ ತಲೆಮರೆಸಿಕೊಂಡಿರುವ ಶಾಸಕರ ಪತ್ತೆಗಾಗಿ ಲೋಕಯುಕ್ತ ಪೊಲೀಸರು ಏಳು ಮಂದಿ ಡಿವೈಎಸ್ಪಿಗಳ ನೇತೃತ್ವದಲ್ಲಿ 7 ತಂಡಗಳಾಗಿ ವಿಭಾಗವಾಗಿ ಶೋಧ ನಡೆಸುತ್ತಿದ್ದಾರೆ. ಬೆಂಗಳೂರಿನ ವಿವಿಧೆಡೆ, ದಾವಣಗೆರೆ ಜಿಲ್ಲೆಯ ಹಲವು ಸ್ಥಳಗಳಲ್ಲಿ ಶೋಧ ನಡೆದಿದೆ. ಶಾಸಕರ ಜತೆ ಇದ್ದ ಅವರ ಹಿರಿಯ ಮಗ ಮಲ್ಲಿಕಾರ್ಜುನ್ ಕೂಡ ನಾಪತ್ತೆಯಾಗಿದ್ದು ಅವರ ಪತ್ತೆಗೆ ನಿಕಟವರ್ತಿಗಳ ಮೇಲೆ ನಿಗಾ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಐಜಿಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದಲ್ಲಿ ಇಂದು ಸೋಮವಾರ ಸಭೆ ನಡೆಯಲಿದೆ. ಈ ಪ್ರಕರಣದ ತನಿಖೆಯಲ್ಲಿ ಈವರೆಗೆ ಆಗಿರುವ ಪ್ರಗತಿಯನ್ನು ಪರಾಮರ್ಶಿಸಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಸಂಬಂಧ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ ಶಾಸಕರನ್ನು ಪತ್ತೆ ಮಾಡಲು ತೀಕ್ಷ್ಣ ಕಾರ್ಯಚರಣೆ ಕೈಗೊಳ್ಳುವ ನಿರೀಕ್ಷೆ ಇದೆ.

Related News

spot_img

Revenue Alerts

spot_img

News

spot_img