21.1 C
Bengaluru
Monday, July 8, 2024

ವಾಸ್ತುವಿನಲ್ಲಿ ಬ್ರಹ್ಮಕಮಲ: ಮನೆಯಲ್ಲಿ ಬ್ರಹ್ಮಕಮಲ ಇದ್ದರೆ ಏನಾಗುತ್ತದೆ?

ವಾಸ್ತು ಶಾಸ್ತ್ರದ ಪ್ರಕಾರ ಬ್ರಹ್ಮ ಕಮಲ ಗಿಡವನ್ನು ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ಇದು ತಾನಿರುವ ಪ್ರದೇಶದ ಸುತ್ತಮತ್ತ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಮನೆಯಲ್ಲಿ ಸಂತೋಷ, ಸಮೃದ್ಧಿ, ಜಯ, ಖುಷಿ ವಾತಾವರಣ ಸೃಷ್ಟಿಸುತ್ತದೆ ಎನ್ನುವ ನಂಬಿಕೆ ಇದೆ.

ಬ್ರಹ್ಮಕಮಲದ ವೈಜ್ಞಾನಿಕ ಹೆಸರು ಸಸಾರಿಯಾ ಒಬೊವೆಲ್ಲಟ. ಹಿಂದಿಯಲ್ಲಿ ನಿಶಾಗಂಧಿ, ಅಮೆರಿಕದಲ್ಲಿ ಮಿಡ್‌ನೈಟ್ ಲಿಲ್ಲಿ, ಅರ್ಚಿಡ್ ಕ್ಯಾಕ್ಟಸ್, ಪೋಡ್ ಲಿಲ್ಲಿ, ಕ್ಯಾಕ್ಟಸ್ ಬೆಥ್ಲೆಹೆಮ್ ಲಿಲ್ಲಿ ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಈ ಹೂವು ಭಾರತದಲ್ಲಿ ಹೆಚ್ಚಾಗಿ ಹಿಮಾಲಯನ್‌ ಭಾಗದಲ್ಲಿ ಅಂದರೆ ಭಾರತ, ನೇಪಾಳ, ಭೂತಾನ್‌ಗಳಲ್ಲಿ ಕಂಡುಬರುತ್ತದೆ. ಆಧ್ಯಾತ್ಮಿಕ ಮಹತ್ವ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ಈ ಹೂವನ್ನು ಮನೆಯ ಹೂದೋಟದಲ್ಲಿ ಬೆಳೆಯುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ಬ್ರಹ್ಮ ಕಮಲ ಹೂವುಗಳು ಮಾನ್ಸೂನ್‌ ಮಧ್ಯ ಭಾಗದಲ್ಲಿ ಅರಳುತ್ತವೆ. ಗಿಡದಲ್ಲಿ ಬಿಳಿ, ಕೆಂಪು ಹಾಗೂ ಗುಲಾಬಿ ಬಣ್ಣದ ಹೂವುಗಳು ಅರಳುತ್ತವೆ. ಇನ್ನು ಕೆಲವು ಹೂವುಗಳು ನೇರಳೆ ಬಣ್ಣದಲ್ಲೂ ಇರುತ್ತವೆ. ಈ ಹೂವುಗಳು ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ಅರಳುತ್ತವೆ ಹಾಗೂ ಸೂರ್ಯೋದಯದ ತನಕ ಈ ಹೂವು ಅರಳಿರುವುದನ್ನು ಕಾಣಬಹುದು. ಅರಳಿದ ಹೂವನ್ನು ಕಣ್ತುಂಬಿಕೊಳ್ಳುವುದೇ ಆನಂದ. ಹೂವು ಅರಳುವ ಸಮಯದಲ್ಲಿ ಮನದ ಇಚ್ಛೆಗಳನ್ನು ಹೇಳಿಕೊಂಡು ಪ್ರಾರ್ಥಿಸಿದರೆ ಆ ಆಸೆಗಳು ಈಡೇರುತ್ತವೆ ಎಂಬ ನಂಬಿಕೆಯೂ ಇದೆ. ಮೊಗ್ಗುಗಳು ಹೂವಾಗಿ ಅರಳಲು ಸರಿಸುಮಾರು 2–3 ವಾರಗಳನ್ನು ತೆಗೆದುಕೊಳ್ಳುತ್ತದೆ.

ಈ ಹೂವನ್ನು ಸಾಂಪ್ರದಾಯಿಕ ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ. ಹಾಗೇ ಸೂಪ್‌ಗಳು ಹಾಗೂ ಜ್ಯೂಸ್‌ಗಳಿಗೂ ಬಳಸಲಾಗುತ್ತದೆ. ಈ ಹೂವನ್ನು ಶಿವನ ಪೂಜೆಗೆ ಹೆಚ್ಚಾಗಿ ಬಳಸುತ್ತಾರೆ. ಈ ಹೂವನ್ನು ಶಿವನಿಗೆ ಅರ್ಚಿಸಿ, ಪ್ರಾರ್ಥಿಸಿಕೊಳ್ಳುವುದರಿಂದ ಶಿವ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿದೆ. ಹಿಂದೂಗಳ ಪವಿತ್ರ ದೇವಾಲಯಗಳಾದ ಕೇದಾರನಾಥ, ಬದ್ರಿನಾಥ ಹಾಗೂ ತುಂಗನಾಥಗಳಲ್ಲಿ ಈ ಹೂವನ್ನು ಶಿವನ ಪೂಜೆಗೆ ಬಳಸುತ್ತಾರೆ.

ವಾಸ್ತು ಮಹತ್ವ:
ಈ ಹೂವು ಪರಿಸರವನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ. ಶುದ್ಧ ಗಾಳಿಯನ್ನು ಒದಗಿಸುತ್ತದೆ. ಹಾಗೇ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಗೊಳಿಸಿ ಮನುಷ್ಯನ ಜೀವನದಲ್ಲಿ ಮಾನಸಿಕ ಸಮತೋಲನ ನೆಲೆಸುವಂತೆ ಮಾಡುತ್ತದೆ. ಮನೆ ಮಾಲೀಕನನ್ನು ಕೆಟ್ಟ ದೃಷ್ಟಿಯಿಂದ ಕಾಪಾಡುವ ಶಕ್ತಿ ಈ ಗಿಡಕ್ಕಿದೆ ಎಂದು ವಾಸ್ತುವಿನಲ್ಲಿದೆ. ವಾಸ್ತು ಶಾಸ್ತ್ರದಂತೆ ಈ ಗಿಡವನ್ನು ಮಾರಬಾರದು ಅಥವಾ ಖರೀದಿಸಬಾರದು. ಇದು ಉಡುಗೊರೆ ರೂಪದಲ್ಲಿ ಬಂದರೆ ಮನೆಗೆ ಶುಭ ಎಂಬ ಮಾತಿದೆ.

ವಾಸ್ತು ಪ್ರಕಾರ ಗಿಡವನ್ನು ಎಲ್ಲಿ ಇಡಬೇಕು?
ಈ ಗಿಡ ಮಂಗಳದಾಯಕ ಎಂದು ಪರಿಗಣಿಸಲಾಗಿದ್ದು, ಇದು ಮನೆಯ ಮಧ್ಯಭಾಗದಲ್ಲಿ ಅಥವಾ ಬ್ರಹ್ಮ ಸ್ಥಾನದಲ್ಲಿ ಇಡಬೇಕು. ನಂಬಿಕೆಗಳ ಪ್ರಕಾರ ಇದರ ಹೂವಿನಲ್ಲಿ ಬ್ರಹ್ಮ ಹಾಗೂ ವಿಷ್ಣು ಈ ಹೂವಿನಲ್ಲಿ ನೆಲೆಸಿರುತ್ತಾರಂತೆ. ವಾಸ್ತು ಪ್ರಕಾರ ಗಿಡ ನೆಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳನ್ನು ಓಡಿಸಿ, ದೈವೀಶಕ್ತಿ ನೆಲೆಸುವಂತೆ ಮಾಡುತ್ತದೆ.

ಗಿಡದ ಆರೈಕೆ
ಈ ಗಿಡಕ್ಕೆ ನೇರ ಸೂರ್ಯನ ಬಿಸಿಲಿನ ಅಗತ್ಯವಿರುವುದಿಲ್ಲ. ಆದರೆ ಬೆಳಕು ಇರುವಲ್ಲಿ ಇಡಬೇಕು. ಈ ಗಿಡದ ಎಲೆಗಳು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ನೇರ ಬಿಸಿಲು ಬೀಳುವಲ್ಲಿ ನೆಟ್ಟರೆ ನೀರು ಇಂಗಿ ಒಣಗುವ ಸಾಧ್ಯತೆಯಿದೆ.

ಪದೇ ಪದೇ ಗಿಡದ ಸ್ಥಳ ಬದಲಾಯಿಸಬೇಡಿ. ಮೊಗ್ಗು ಆಗುವ ಲಕ್ಷಣಗಳು ಕಂಡು ಬಂದ ನಂತರ ಹೂವು ಅರಳುವ ತನಕ ಸ್ಥಳ ಬದಲಾಯಿಸಬಾರದು. ಇಲ್ಲದಿದ್ದರೆ ಮೊಗ್ಗು ಅರಳುವುದಿಲ್ಲ.
ಗಿಡದ ನೆಟ್ಟಿರುವ ಪ್ರದೇಶದಲ್ಲಿ ಮಣ್ಣಿನ ಮೇಲಿನ ಪದರ ಒಣಗಿದಂತೆ ಕಂಡಾಗ ನೀರು ಉಣಿಸಬೇಕು. ಆದರೆ ಹೆಚ್ಚು ನೀರು ಹಾಕಬಾರದು. ಇದರಿಂದ ಎಲೆಗಳು ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗುತ್ತವೆ. ಎಲೆಗಳ ಮೇಲೆ ನೀರು ಹಾಕುವುದರಿಂದ ಫಂಗಸ್‌ ಬೆಳವಣಿಗೆಯಾಗಬಹುದು. ಆದ್ದರಿಂದ ಗಿಡದ ಬುಡಕ್ಕೆ ನೀರು ಉಣಿಸಬೇಕು.

Related News

spot_img

Revenue Alerts

spot_img

News

spot_img