ಮುಂಬೈ: ಐಸಿಐಸಿಐ ಬ್ಯಾಂಕ್ – ವಿಡಿಯೋಕಾನ್ ಲೋನ್ ವಂಚನೆ ಪ್ರಕರಣ (ICICI Bank-Videocon loan fraud case) ದಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಶನ್ (ಸಿಬಿಐ) ವೇಣುಗೋಪಾಲ್ ಧೂತ್ ಅವರನ್ನು ಬಂಧಿಸಿ ಅಂದಾಜು ಒಂದು ತಿಂಗಳ ಬಳಿಕ ಶುಕ್ರವಾರ ಜಾಮೀನು ಸಿಕ್ಕಿರುವಂಥದ್ದು.ಅರ್ಥೂರ್ ರಸ್ತೆ ಜೈಲಿನಿಂದ ಹೊರಗೆ ಬಂದಿದ್ದಾರೆ. ಈ ಪ್ರಕರಣದಲ್ಲಿ ಧೂತ್ ಅವರನ್ನು ಡಿಸೆಂಬರ್ 26, 2022ರಂದು ಬಂಧಿಸಲಾಗಿತ್ತು. ಇದರಲ್ಲಿ ಮಾಜಿ ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಚಂದಾ ಕೊಚ್ಚರ್ ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಕೂಡಾ ಆರೋಪಿಗಳಾಗಿದ್ದಾರೆ.
ಕೋರ್ಟ್ ನಿಂದ ಮಧ್ಯಂತರ ಜಾಮೀನು ಮಂಜೂರು ಆಗುತ್ತಿದ್ದಂತೆಯೇ, ಬಿಡುಗಡೆಯ ಕೋರ್ಟ್ ಆದೇಶವನ್ನು ಜೈಲಿನ ಅಧಿಕಾರಿಗಳಿಗೆ ವೇಣುಗೋಪಾಲ್ ಧೂತ್ ಪರ ವಕೀಲರು ಸಲ್ಲಿಸಿದರು. ನಂತರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ವೇಣುಗೋಪಾಲ್ ಧೂತ್ ಅವರು ಒಂದು ಲಕ್ಷ ರೂಪಾಯಿ ಶ್ಯೂರಿಟಿ ಜಮೆ ಮಾಡಬೇಕು. ಕ್ಯಾಶ್ ಬೇಲ್ ಪ್ರಕ್ರಿಯೆ ಪೂರ್ಣಗೊಳಿಸಲು ಅನುಮತಿ ನೀಡಿದ ಕೋರ್ಟ್, ಅಲ್ಲಿಂದಾಚೆಗೆ ಎರಡು ವಾರದಲ್ಲಿ ಶ್ಯೂರಿಟಿ ಮೊತ್ತವನ್ನು ಜಮೆ ಮಾಡುವಂತೆ ಸೂಚಿಸಿದೆ.ಈ ಪ್ರಕರಣದಲ್ಲಿ ಕೊಚ್ಚಾರ್ ದಂಪತಿಗೆ ನೀಡಿದ್ದ ಜಾಮೀನು ಆದೇಶ ಹಿಂಪಡೆಯುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನೂ ಕೋರ್ಟ್ ತಳ್ಳಿಹಾಕಿದೆ. ಅಲ್ಲದೆ ವಕೀಲರಿಗೆ 25,000 ರೂಪಾಯಿ ವೆಚ್ಚ ಪಾವತಿಸುವಂತೆ ನಿರ್ದೇಶಿಸಿದೆ.
ಐಸಿಐಸಿಐ ಬ್ಯಾಂಕ್ – ವಿಡಿಯೋಕಾನ್ ಸಾಲ ವಂಚನೆ ಪ್ರಕರಣದಲ್ಲಿ ಆರೋಪಿಗಳಾದ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚಾರ್ ಹಾಗೂ ಅವರ ಪತಿ ದೀಪಕ್ ಕೊಚ್ಚಾರ್‌ಗೆ ಜನವರಿ 9ರಂದು ಜಾಮೀನು ಸಿಕ್ಕಿತ್ತು.ಬಾಂಬೆ ಹೈಕೋರ್ಟ್ ಈ ಜಾಮೀನು ನೀಡಿದ್ದು, ಕಾನೂನು ಚೌಕಟ್ಟಿನ ವ್ಯಾಪ್ತಿಯಲ್ಲಿ ಬಂಧನ ನಡೆಯದೇ ಇರುವ ಕಾರಣ ತಲಾ 1 ಲಕ್ಷ ರೂಪಾಯಿ ನಗದು ಠೇವಣಿ ಇರಿಸಿ ಜಾಮೀನು ಪಡೆಯಲು ಇಬ್ಬರಿಗೂ ಅವಕಾಶ ನೀಡಿದೆ.