27.7 C
Bengaluru
Wednesday, July 3, 2024

ಟಿಪ್ಪು ಮಾದರಿಯ ಕೇಸ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಮಾಜಿ ಸಚಿವ ಅಶ್ವತ್ಥನಾರಾಯಣ್.

“ಟಿಪ್ಪುವನ್ನು ಉರಿಗೌಡ, ನಂಜೇಗೌಡರು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು” ಎಂದು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಸಂಬಂಧದ ಮಧ್ಯಾಹ್ನ ವಿಚಾರಣೆ ನಡೆಸಬೇಕು ಎಂದು ಅಶ್ವತ್ಥನಾರಾಯಣ ಪರ ವಕೀಲರು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠದಲ್ಲಿ ಇಂದು ಕೋರಿದರು. ನಾಳೆ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಪೀಠವು ಹೇಳಿದೆ. ದೇವರಾಜ ಠಾಣೆಯ ಪೊಲೀಸರು ಮತ್ತು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.

“ಆರೋಪಿತ ಘಟನೆ ನಡೆದ ಸಂದರ್ಭದಲ್ಲಿ ದೂರುದಾರರು ಸ್ಥಳದಲ್ಲಿ ಇರಲಿಲ್ಲ. ಹಾಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಒತ್ತಡಕ್ಕೆ ಒಳಗಾಗಿ ಪೊಲೀಸರು ಹಲವು ತಿಂಗಳ ಬಳಿಕ ದೂರು ದಾಖಲಿಸಿದ್ದಾರೆ. ಲಕ್ಷ್ಮಣ ಅವರು ನೀಡಿರುವ ದೂರಿನಿಂದ ಎಲ್ಲಾ ಮಾಧ್ಯಮಗಳು ಅನಗತ್ಯವಾದ ಸುದ್ದಿ ಪ್ರಸಾರ ಮಾಡಿದ್ದು, ಇದು ತನಗೆ ಗಂಭೀರವಾದ ಮಾನಸಿಕ ವೇದನೆ ಮತ್ತು ಸರಿಪಡಿಸಲಾರದಷ್ಟು ನಷ್ಟ ಉಂಟು ಮಾಡಿದೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

“ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸುವ ಏಕೈಕ ಉದ್ದೇಶದಿಂದ ಭಾಷಣ ಮಾಡಿದ್ದು, ಈ ಸಂಬಂಧ ಸದನ ಮತ್ತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಲಾಗಿದೆ. ಸಿದ್ದರಾಮಯ್ಯ ಅವರಿಗೆ ಅಗೌರವ ತೋರಿಸುವ ಅಥವಾ ಅವರ ವಿರುದ್ದ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ಹೊಂದಿಲ್ಲ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.

“ತಡವಾಗಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪ್ರಕರಣ ದಾಖಲಿಸಿದ್ದು, ದೂರಿನಲ್ಲಿ ಆಕ್ಷೇಪಿಸಿರುವಂತೆ ತನ್ನ ಭಾಷಣದ ನಂತರ ಯಾವುದೇ ಗಲಭೆ ನಡೆದಿಲ್ಲ. ಅಸಂಬದ್ಧ ಮತ್ತು ಈಗಾಗಲೇ ಮುಕ್ತಾಯವಾಗಿರುವ ವಿಚಾರಕ್ಕೆ ಅನಗತ್ಯ ಎಫ್ಐಆರ್ ದಾಖಲಿಸಲಾಗಿದೆ. ಇದಕ್ಕೆ ತಡೆ ನೀಡದಿದ್ದರೆ ಶಾಸಕನಾಗಿರುವ ತನಗೆ ಸಮಸ್ಯೆಯಾಗಲಿದೆ” ಎಂದು ಮಧ್ಯಂತರ ಕೋರಿಕೆ ಮಾಡಲಾಗಿದೆ.

ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ನೀಡಿದ್ದ ದೂರಿನ ಅನ್ವಯ ಮೈಸೂರಿನ ದೇವರಾಜ ಠಾಣೆಯಲ್ಲಿ ಐಪಿಸಿ ಸೆಕ್ಷನ್ಗಳಾದ 506 (ಕ್ರಿಮಿನಲ್ ಬೆದರಿಕೆ), 153ರ (ಗಲಭೆಗೆ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಲಾಗಿದ್ದು. ಆನಂತರ ಪ್ರಕರಣವನ್ನು ಮಂಡ್ಯ ಠಾಣೆಗೆ ವರ್ಗಾಯಿಸಲಾಗಿದೆ.

ಫೆಬ್ರವರಿ 15ರಂದು ಮಂಡ್ಯದ ಸಾತನೂರಿನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಂದು ಸಚಿವರಾಗಿದ್ದ ಅಶ್ವತ್ಥನಾರಾಯಣ ಅವರು ನೀಡಿದ್ದ ವಿವಾದಿತ ಹೇಳಿಕೆ ಸಂಬಂಧಿಸಿದಂತೆ ಮೈಸೂರಿನ ಕಾಂಗ್ರೆಸ್ ಮುಖಂಡರು ಫೆಬ್ರವರಿ 17ರಂದು ದೂರು ನೀಡಿದ್ದರೂ ಪೊಲೀಸರು ಕ್ರಮಕೈಗೊಂಡಿರಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.

Related News

spot_img

Revenue Alerts

spot_img

News

spot_img