ಬೆಂಗಳೂರಿನಲ್ಲಿ ವಸತಿ ಯೋಜನೆ ಉದ್ದೇಶಕ್ಕಾಗಿ 10 ಎಕರೆ ಭೂಮಿಯನ್ನು ತಾನು ಸ್ವಾಧೀನಪಡಿಸಿಕೊಂಡಿದ್ದು, ಅದು ರೂ. 900 ಕೋಟಿ ಮೌಲ್ಯದ ಮಾರಾಟ ಸಾಮರ್ಥ್ಯ ಹೊಂದುವ ಸಾಧ್ಯತೆ ಇದೆ ಎಂದು ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮ ಸಂಸ್ಥೆಯಾದ ಬಿರ್ಲಾ ಎಸ್ಟೇಟ್ಸ್ ಇತ್ತೀಚೆಗೆ ತಿಳಿಸಿದೆ.
ಸೆಂಚುರಿ ಟೆಕ್ಸ್‌ಟೈಲ್ಸ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮಿತ್ವದ ಅಂಗಸಂಸ್ಥೆಯಾದ ಬಿರ್ಲಾ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು, ದಕ್ಷಿಣ ಬೆಂಗಳೂರಿನ ಕೇಂದ್ರ ಸ್ಥಾನವಾದ ರಾಜರಾಜೇಶ್ವರಿ ನಗರದಲ್ಲಿ ಹತ್ತು ಎಕರೆ ಜಾಗವನ್ನು ಖರೀದಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಯೋಜನೆಯು ಹತ್ತು ಲಕ್ಷ ಚದರ ಅಡಿಗಳ ಅಭಿವೃದ್ಧಿ ಸಾಮರ್ಥ್ಯವನ್ನು ಹೊಂದಿದೆ ಮತ್ತು ರೂ. 900 ಕೋಟಿ ಆದಾಯದ ಸಂಭಾವ್ಯತೆಯನ್ನು ಹೊಂದಿದೆʼ ಎಂದೂ ಅದು ತಿಳಿಸಿದೆ.
ʻಇದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕಂಪನಿಯ ನಾಲ್ಕನೇ ಯೋಜನೆಯಾಗಿದೆʼ ಎಂದು ಬಿರ್ಲಾ ಎಸ್ಟೇಟ್ಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಟಿ. ಜಿತೇಂದ್ರನ್ ಅವರು ಮಾಹಿತಿ ನೀಡಿದ್ದಾರೆ.
ʻಪ್ರಮುಖ ವಸತಿ ಮಾರುಕಟ್ಟೆಗಳಾದ ಮುಂಬೈ ಮಹಾನಗರ ಪ್ರದೇಶ (ಎಂಎಂಆರ್), ಪುಣೆ ಮತ್ತು ರಾಷ್ಟ್ರ ರಾಜಧಾನಿ ವಲಯಗಳಲ್ಲಿ (ಎನ್ಸಿಆರ್) ಯೋಜನೆ ವಿಸ್ತರಣೆಯ ಆಕ್ರಮಣಶೀಲ ಹೆಜ್ಜೆಯ ಭಾಗವಾಗಿ ಈ ಭೂಮಿ ಸ್ವಾಧೀನ ಪ್ರಕ್ರಿಯೆಯು ನಡೆದಿದೆʼ ಎಂದು ಅವರು ವಿವರಿಸಿದ್ದಾರೆ.
ಪ್ರಸ್ತುತ ಮುಂಬೈ ಮಹಾನಗರ ಪ್ರದೇಶ, ಬೆಂಗಳೂರು ಮತ್ತು ರಾಷ್ಟ್ರ ರಾಜಧಾನಿ ವಲಯಗಳಲ್ಲಿ ಬಿರ್ಲಾ ಎಸ್ಟೇಟ್ಸ್ನ ನಿರ್ಮಾಣ ಯೋಜನೆಗಳು ಪ್ರಗತಿಯಲ್ಲಿವೆ ಮತ್ತು ಈ ಎಲ್ಲ ನಗರಗಳಲ್ಲಿ ಹೊಸ ಪ್ರಾಜೆಕ್ಟ್ಗಳನ್ನು ಯೋಜಿಸಿದೆ.
ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯ ನಂತರ ಮನೆಗಳಿಗೆ ಬೇಡಿಕೆ ಮತ್ತೆ ಹೆಚ್ಚಳವಾದದ್ದನ್ನು ಮನಗಂಡ ರಿಯಲ್ ಎಸ್ಟೇಟ್ ಉದ್ಯಮ ಸಂಸ್ಥೆಗಳು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿವೆ ಮತ್ತು ತಮ್ಮ ಉದ್ಯಮವನ್ನು ವಿಸ್ತರಿಸುವ ಉದ್ದೇಶದಿಂದ ಭೂಮಿಯ ಮಾಲೀಕರೊಡನೆ ಜಂಟಿ ಅಭಿವೃದ್ಧಿ ಒಪ್ಪಂದ (ಜೆಡಿಎ) ಮಾಡಿಕೊಳ್ಳುತ್ತಿದ್ದಾರೆ.
ಪ್ರಮುಖ ಸ್ವತ್ತು ಸಲಹೆಗಾರ ಸಂಸ್ಥೆಯೊಂದರ ನಿರೀಕ್ಷೆ ಪ್ರಕಾರ, ಏಳು ಪ್ರಮುಖ ಮಹಾನಗರಗಳಾದ ದೆಹಲಿ- ರಾಷ್ಟ್ರ ರಾಜಧಾನಿ ವಲಯ, ಮುಂಬೈ ಮಹಾನಗರ ಪ್ರದೇಶ, ಪುಣೆ, ಚೆನ್ನೈ, ಹೈದರಾಬಾದ್, ಕೋಲ್ಕತ್ತ ಮತ್ತು ಬೆಂಗಳೂರುಗಳಲ್ಲಿ ಮನೆಗಳ ಬೇಡಿಕೆಯು ಕೋವಿಡ್ ಸಾಂಕ್ರಾಮಿಕ ರೋಗ ಪೂರ್ವ ಕಾಲವಾದ 2019ರಲ್ಲಿ ಇದ್ದ 2,61,358 ಘಟಕಗಳ ಮಟ್ಟವನ್ನೂ ಮೀರಲಿದೆ. ಆದರೆ 2014ರಲ್ಲಿ ಇದ್ದ ಬೇಡಿಕೆ ಪ್ರಮಾಣಕ್ಕಿಂತ ಕಡಿಮೆ ಇರಲಿದೆ. 2014ರಲ್ಲಿ 3.43 ಲಕ್ಷ ಮನೆಗಳು ಮಾರಾಟವಾಗಿದ್ದವು. ಇದು ಕಳೆದ ಹತ್ತು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಮನೆ ಮಾರಾಟವಾದ ವರ್ಷವಾಗಿತ್ತು.