34.7 C
Bengaluru
Monday, May 5, 2025

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಮಾಡಿದ ಪ್ರಮುಖ ಐಟಿ ಕಂಪೆನಿಗಳಿವು

ಮಳೆ ಬಂದಾಗ ಬೆಂಗಳೂರು ಅವಸ್ಥೆ ಹೇಗಿರುತ್ತದೆ ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಸ್ವಲ್ಪ ಮಳೆ ಸುರಿದರೂ ಬೆಂಗಳೂರು ರಸ್ತೆಗಳು ನೀರಿನಿಂದ ತುಂಬಿ ಪ್ರವಾಹದಂತೆ ಆಗುತ್ತದೆ. ಇದಕ್ಕೆ ಮುಖ್ಯ ಕಾರಣ ರಾಜಕಾಲುವೆ ಅಕ್ರಮ ಒತ್ತುವರಿ. ಕೆರೆಗಳ ಜಾಗವನ್ನು ಒತ್ತುವರಿ ಮಾಡಿಕೊಂಡು ಅದರ ಮೇಲೆ ದೊಡ್ಡ ದೊಡ್ಡ ಕಟ್ಟಡ, ಅಪಾರ್ಟ್‌ಮೆಂಟ್‌ ನಿರ್ಮಾಣವಾಗಿರುವುದೇ ಕಾರಣ ಎಂದು ತಜ್ಞರು ಈಗಾಗಲೇ ತಿಳಿಸಿದ್ದಾರೆ.

ವಿಪ್ರೊ ಸೇರಿದಂತೆ ದೈತ್ಯ ಕಂಪೆನಿಗಳು, ಸೂಪರ್‌ ರಿಚ್‌ ಹೌಸಿಂಗ್‌ ಸೊಸೈಟಿಗಳು ರಾಜಕಾಲುವೆಗಳನ್ನು ಅತಿಕ್ರಮಿಸಿರುವುದು ಬೆಂಗಳೂರು ಪ್ರವಾಹಕ್ಕೆ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಳೆದ ಒಂದು ತಿಂಗಳಿನಲ್ಲಿ ಬೆಂಗಳೂರಿಗರು ಮಳೆ, ಪ್ರವಾಹದಿಂದ ಕಂಗೆಟ್ಟಿದ್ದಾರೆ ಮಳೆಗೆ ಐಷಾರಾಮಿ ವಿಲ್ಲಾದಿಂದ ಹಿಡಿದು ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಟೆಕ್‌ ಪಾರ್ಕ್‌ ಸೇರಿ ಎಲ್ಲವೂ ಜಲ ಸದೃಶ್ಯವಾಗಿತ್ತು.

ಬೆಂಗಳೂರು ಮಳೆ ಪ್ರವಾಹಕ್ಕಿಂತ ಒಂದು ವಾರದ ಮುಂಚೆ ರಾಜಕಾಲುವೆ ಒತ್ತುವರಿ ಮಾಡಿಕೊಂಡವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಐಟಿ ದೈತ್ಯ ಕಂಪೆನಿಗಳಾದ ವಿಪ್ರೊ, ಪ್ರೆಸ್ಟೀಜ್‌ ಹಾಗೂ ಪ್ಲಸ್‌ ಎಪ್ಸಿಲಾನ್‌ನಲ್ಲಿ ವಿಲ್ಲಾ ಹೊಂದಿರುವ ರಿಷಾದ್‌ ಪ್ರೇಮ್‌ಜೀಯಂತಹ ಉದ್ಯಮಿಗಳ ಹೆಸರು ಮುಂಚೂಣಿಯಲ್ಲಿವೆ. ಆದರೆ ಇವರೆಲ್ಲರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬಹುದೇ? ಒತ್ತುವರಿ ತೆರವುಗೊಳಿಸಲಾಗುತ್ತೆದೆಯೇ ಎಂಬ ಪ್ರಶ್ನೆ ಈಗ ಹರಿದಾಡುತ್ತಿದೆ.

ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ನೀರಿನ ಸರಾಗ ಹರಿಯುವಿಕೆಗೆ ನಿರ್ಮಿಸಲಾಗಿದ್ದ ರಾಜಕಾಲುವೆಗಳ ಮುಚ್ಚಿ, ಆ ಜಾಗವನ್ನು ಅತಿಕ್ರಮಿಸಿ ನಿರ್ಮಾಣ ಮಾಡಿದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 300 ಕೋಟಿ ಬಿಡುಗಡೆ ಮಾಡಿದ್ದರು. ಬಿಬಿಎಂಪಿ ಅಂತಹ 15 ಜಾಗಗಳನ್ನು ಗುರುತಿಸಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದೆ. ಈ ತೆರವು ಕಾರ್ಯ ನಡೆದಿರುವುದು ಟೆಕ್‌ ಕಾರಿಡಾರ್‌ ಎಂದೇ ಖ್ಯಾತವಾಗಿರುವ ಮಹದೇವಪುರದಲ್ಲಿ. ಮಹದೇವಪುರದಲ್ಲಿ ವಿವಿಧ ಸರ್ವೇ ನಂಬರ್‌ಗಳಲ್ಲಿ ರಾಜಕಾಲುವೆಗಳ ಮೇಲೆ ಕಟ್ಟಲಾಗಿರುವ ಕಟ್ಟಡಗಳಿಂದಲೇ ಮಳೆ ನೀರು ಹರಿಯುವಿಕೆಗೆ ತಡೆಯೊಡ್ಡಲಾಗುತ್ತಿದೆ ಎಂದು ಸ್ಪಷ್ಟವಾಗಿತ್ತು. ಅಲ್ಲಿಂದಲೇ ಬಿಬಿಎಂಪಿ ಒತ್ತುವರಿ ತೆರವು ಕಾರ್ಯ ಆರಂಭಿಸಿದೆ.

ಅಕ್ರಮ ಒತ್ತುವರಿದಾರರ ಪಟ್ಟಿಯಲ್ಲಿರುವವರು ಬಹುತೇಕರು ಐಟಿ ಪಾರ್ಕ್‌ಗಳು ಹಾಗೂ ವಾಣಿಜ್ಯ ಕಟ್ಟಡಗಳು. ವಿಶ್ವದ ಅತಿ ದೊಡ್ಡ ಟೆಕ್‌ ಕಂಪೆನಿ ಎಂದು ಗುರುತಿಸಿಕೊಂಡಿರುವ ವಿಪ್ರೊ, ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವುದು ಪಟ್ಟಿಯಲ್ಲಿ ಬೆಳಕಿಗೆ ಬಂದಿದೆ.

ಪ್ರೆಸ್ಟೀಜ್‌, ಇಕೋ ಸ್ಪೇಸ್‌, ಸಲಾರ್‌ಪುರಿಯಾ, ಬಾಗ್ಮನೆ ಟೆಕ್‌ಪಾರ್ಕ್‌, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ದಿವ್ಯಾಶ್ರೀ ವಿಲ್ಲಾಗಳು ಅಕ್ರಮ ಒತ್ತುವರಿದಾರರ ಪಟ್ಟಿಯಲ್ಲಿನ ಮುಖ್ಯ ಹೆಸರುಗಳಾಗಿದ್ದು, ಬಹುತೇಕ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ಕಟ್ಟಿಸಿವೆ.

ಪ್ಲಸ್‌ ಎಪ್ಸಿಲಾನ್‌ನಲ್ಲಿ ವಿಪ್ರೊ ಅಧ್ಯಕ್ಷ ರಿಷಾದ್‌ ಪ್ರೇಮ್‌ಜೀ ಮನೆ, ಬ್ರಿಟಾಣಿಯಾ ಸಿಇಒ ವರುಣ್‌ ಬೆರ್ರಿ, ಬಿಗ್‌ ಬಾಸ್ಕೆಟ್‌ ಸಹಸ್ಥಾಪಕ ಅಭಿನಯ್‌ ಚೌಧರಿ ಅವರ
ಹೆಸರು ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.

ಕಟ್ಟಡ ತೆರವು ಕಾರ್ಯ ಮುಂದುವರಿಕೆ:
ಬಿಬಿಎಂಪಿ ಈಗಾಗಲೇ ಕಟ್ಟಡ ತೆರವು ಕಾರ್ಯವನ್ನು ಸೆ.12ರಂದು ಆರಂಭಿಸಿದೆ. ಮಹದೇವಪುರ ಹಾಗೂ ಯಲಹಂಕ ಝೋನ್‌ಗಳಲ್ಲಿ ರಾಜಕಾಲುವೆ ಅತಿಕ್ರಮಣ ಮಾಡಿದ ಕಟ್ಟಡಗಳ ಒತ್ತುವರಿ ಕಾರ್ಯ ನಡೆಯುತ್ತಿದೆ.

ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯಿಂದ ನಲಪಾಡ್‌ ಅಕಾಡೆಮಿ, ಗೋಪಾಲನ್‌ ಶಾಲಾ ಆವರಣ, ಶಾಂತಿನಿಕೇತನ ಬಡಾವಣೆ, ಎಪ್ಸಿಲಾನ್‌ ವಿಲ್ಲಾಗಳ ಅತಿಕ್ರಮಿಸಿದ ಭಾಗಗಳನ್ನು ತೆರವುಗೊಳಿಸಲಾಗಿದೆ ಎಂದು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಈ ಭಾಗದಲ್ಲಿ ಮಳೆ ನೀರಿನಿಂದ ಪ್ರವಾಹ ಸೃಷ್ಟಿಯಾಗಲು ರಾಜಕಾಲುವೆ ಒತ್ತುವರಿಯೇ ಕಾರಣ. ಯಾರಾದರೂ ಒತ್ತುವರಿ ಮಾಡಿಕೊಂಡ ಜಾಗದಲ್ಲಿ ಅಕ್ರಮ ಕಟ್ಟಡದಲ್ಲಿ ವಾಸವಾಗಿದ್ದರೆ ಅಲ್ಲಿನ ನಿವಾಸಿಗಳು ಆ ಜಾಗ ಬಿಟ್ಟು ಕೊಡಿ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಕಾನೂನು ಪ್ರಕ್ರಿಯೆ ಅನುಸರಿಸಿ ಎಂದು ಕರ್ನಾಟಕ ಲೋಕಾಯುಕ್ತ ಆದೇಶ ನೀಡಿದ್ದರಿಂದ ಬಾಗ್ಮನೆ ಟೆಕ್‌ ಪಾರ್ಕ್‌ ಬಳಿ ತೆರವು ಕಾರ್ಯ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ. ತೆರವು ಕಾರ್ಯದಲ್ಲಿ ರಾಜಕೀಯ

ಕಾಂಗ್ರೆಸ್‌ ಯುವ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಅವರ ನಲಪಾಡ್‌ ಅಕಾಡೆಮಿಯಲ್ಲಿ ಒತ್ತುವರಿ ಕಾರ್ಯ ನಡೆಸಲಾಯಿತು. ಈ ಒತ್ತುವರಿ ರಾಜಕೀಯ ಕಾರಣಕ್ಕಾಗಿ ನಡೆದಿದೆ ಎಂಬ ಟೀಕೆ ಕೇಳಿಬಂದಿದೆ. ಹಾಗೆಯೇ ಒತ್ತುವರಿ ಮಾಡಿಕೊಂಡ ಶ್ರೀಮಂತರು ಅಥವಾ ಬಲಶಾಲಿಗಳನ್ನು ಬಿಟ್ಟು, ಬಡವರ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಒತ್ತುವರಿ ತೆರವು ಮಾಡಲಾಗುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ. ಕಟ್ಟಡ ಅಥವಾ ಆಸ್ತಿಗಳ ಕೆಡಹುವ ಬಗ್ಗೆ ಯಾವುದೇ ಪೂರ್ವ ಮಾಹಿತಿ ನೀಡಿಲ್ಲ ಎಂದು ಒತ್ತುವರಿ ಪ್ರದೇಶದ ಅನೇಕ ನಿವಾಸಿಗಳು ದೂರಿದ್ದಾರೆ.

Related News

spot_img

Revenue Alerts

spot_img

News

spot_img