ಬೆಂಗಳೂರು, ಏ. 03 : ವೈಟ್ಫೀಲ್ಡ್ ಮತ್ತು ಕೃಷ್ಣರಾಜಪುರಂನಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಭೂಮಿಯ ಬೆಲೆ ಶೇ.10 ರಷ್ಟು ಜಿಗಿತವನ್ನು ಕಾಣಲಿದೆ. ಈ ಬಗ್ಗೆ ಕ್ರೆಡೈ ಬೆಂಗಳೂರು ಅಧ್ಯಕ್ಷ ಸುರೇಶ್ ಹರಿ ಅವರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ತಿಂಗಳಷ್ಟೇ ವೈಟ್‌ಫೀಲ್ಡ್ ಮತ್ತು ಕೃಷ್ಣರಾಜಪುರಂ ನಡುವೆ 13.71 ಕಿಮೀ ಮೆಟ್ರೋ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆಯನ್ನು ಮಾಡಿದರು. ಈ ಸ್ಟ್ರೆಚ್ ನಲ್ಲಿ ಒಟ್ಟು 12 ನಿಲ್ದಾಣಗಳು ಬರುತ್ತವೆ. ಐಟಿ ಕೆಲಸಕ್ಕೆ ಹೋಗುವವರು ಈಗ ಮೆಟ್ರೋದಲ್ಲಿ ಟ್ರಾಫಿಕ್ ಇಲ್ಲದೇ, ಹಾಯಾಗಿ ಪ್ರಯಾಣ ಮಾಡಬಹುದಾಗಿದೆ.
ಇಷ್ಟು ದಿನ, ಐಟಿ ಪಾರ್ಕ್‌ಗಳು, ಫಾರ್ಚೂನ್ ಕಂಪನಿಗಳು ಸೇರಿದಂತೆ ಇತರ ಪ್ರಮುಖ ಪ್ರದೇಶಗಳಿಗೆ ಹೋಗಲು ಇಲ್ಲಿ ಕಡಿಮೆ ಎಂದರೂ ಒಂದು ಗಂಟೆ ಸಮಯ ಹಿಡಿಯುತ್ತಿತ್ತು. ಈಗ ಮೆಟ್ರೋದಲ್ಲಿ ಕೇವಲ 22 ರಿಂದ 24 ನಿಮಿಷಗಳಲ್ಲಿ ಪ್ರಯಾಣ ಮಾಡಬಹುದು. ಕೃಷ್ಣರಾಜಪುರ, ಸಿಂಗಯ್ಯನಪಾಳ್ಯ, ಗರುಡಾಚಾರ್ಯಪಾಳ್ಯ, ಹೂಡಿ, ಸೀತಾರಾಮ ಪಾಳ್ಯ, ಕುಂದನಹಳ್ಳಿ, ನಲ್ಲೂರು ಹಳ್ಳಿ, ಶ್ರೀ ಸತ್ಯಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಟ್ರೀ ಪಾರ್ಕ್, ಹೋಪ್ ಫಾರ್ಮ್ ಚನ್ನಸಂದ್ರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳು ಮೆಟ್ರೋದಲ್ಲಿದ್ದು, ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಿದೆ.
ಈ ಮಾರ್ಗದಲ್ಲಿ ಈಗ ಮೆಟ್ರೋ ಬಂದಿದ್ದರಿಂದ ಇಲ್ಲಿನ ರಿಯಲ್ ಎಸ್ಟೇಟ್ ಬೆಲೆಯೂ ಏರಿಕೆಯಾಗಲಿದೆ. ಈಗಷ್ಟೇ ಮೆಟ್ರೋ ರೈಲು ಸಂಚಾರ ಪ್ರಾರಂಭವಾಗಿದ್ದು, ಮೊದಲ ಮೂರು ತಿಂಗಳೂ ಶೇ. 10 ರಷ್ಟು ಭೂಮಿಯ ಬೆಲೆ ಏರಿಕೆಯನ್ನು ಕಾಣಲಿದೆ. ಬಳಿಕ ಗಣನೀಯವಾಗಿ ಸೈಟ್, ಮನೆಗಳ ಬೆಲೆ ಏರಿಕೆಯಾಗುತ್ತವೆ ಎಂದು ಸುರೇಶ್ ಹರಿ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಅಸೆಟ್ಜ್ ಪ್ರಾಪರ್ಟಿ ಗ್ರೂಪ್‌ನ ಸಿಎಫ್‌ಒ ಸಚಿನ್ ವೋರಾ ಕೂಡ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರನ್ನು ಮೊಟ್ರೋ ದೊಡ್ಡ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿ ಪರಿವರ್ತಿಸಲಿದೆ. ಮೆಟ್ರೋ ರೈಲು ಸಂಪರ್ಕದಿಂದ ನಗರಗಳು ಮೂಲ ಸೌಕರ್ಯಗಳಿಂದ ಕೂಡಿರುತ್ತವೆ. ಇದರಿಂದ ಜನರು ಆಕರ್ಷಿತರಾಗುತ್ತಾರೆ. ಭೂಮಿಯ ಬೆಲೆ ಏರಿಕೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.